ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾ ಬಿಡುಗಡೆಗೆ ಸಿದ್ಧವಾಗುತ್ತಿದೆ. ನಾಳೆ(ಸೆ.7) ಈ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆಯಾಗಲಿದೆ. ಈ ಹಿನ್ನೆಲೆಯಲ್ಲಿ ಸುದೀಪ್ ಹಲವು ವಿಷಯಗಳನ್ನು ಹಂಚಿಕೊಂಡರು. ಅವುಗಳ ತುಣುಕುಗಳು ಇಲ್ಲಿವೆ.
1. ವರ್ಷಕ್ಕೆ ಎರಡ್ಮೂರು ಸಿನಿಮಾ ಮಾಡಬೇಕು ಎನ್ನುವ ಆಸೆ ಇದೆ. ಆ ದಿಕ್ಕಿನಲ್ಲೇ ಹೋರಾಟ ಇರುತ್ತದೆ. ಆದರೆ ಕಾರಣಾಂತರಗಳಿಂದ ಸಿನಿಮಾಗಳು ವಿಳಂಬವಾಗುತ್ತವೆ. ಇಷ್ಟು ವರ್ಷಗಳಿಂದ ಸತತವಾಗಿ ಒಮ್ಮೆಗೆ ಒಂದೇ ಸಿನಿಮಾ ಮಾಡಿಕೊಂಡು ಬಂದಿದ್ದೇನೆ. ಮುಂದೆ ನಾನೇ ಹಾಕಿಕೊಂಡು ಈ ನಿಯಮವನ್ನು ಮುರಿಯುತ್ತೇನೆ. ಒಮ್ಮೆಯೇ ಎರಡು ಅಥವಾ ಮೂರು ಸಿನಿಮಾ ಮಾಡಲಿದ್ದೇನೆ. ಹೀಗಾದಾಗ ಮಾರುಕಟ್ಟೆಯಲ್ಲಿ ನನ್ನ ಸಿನಿಮಾಗಳು ಬರುತ್ತಿವೆ ಎನ್ನುವ ಖುಷಿಯೂ ಇರುತ್ತದೆ. ಮನೆಯಲ್ಲಿ ಕಾಲ ಕಳೆಯುವುದೂ ತಪ್ಪುತ್ತದೆ. ಮುಂದೆ ಸತತವಾಗಿ ಶೂಟಿಂಗ್‌ನಲ್ಲಿ ಇರುತ್ತೇನೆ ಎನ್ನುವ ಭರವಸೆ ಕೊಡುತ್ತೇನೆ.
2.‘ಮ್ಯಾಕ್ಸ್’ ಸಿನಿಮಾವನ್ನು ಬೇಗ ರಿಲೀಸ್ ಮಾಡಬೇಕು ಎನ್ನುವ ಆಸೆ ನನಗೂ ಇದೆ. ಸೋಷಿಯಲ್ ಮೀಡಿಯಾದಲ್ಲಿ ನನ್ನನ್ನು ಕ್ರಿಕೆಟರ್ ರೀತಿ ಟ್ರೀಟ್ ಮಾಡುತ್ತಿದ್ದಾರೆ. ಅಭಿಮಾನಿಗಳು ಸೆಲ್ಫಿ, ಆಟೋಗ್ರಾಫ್ ಬಿಟ್ಟು ‘ಅಣ್ಣಾ ಹೇಗಿದ್ದೀರಿ?’ ಎಂದು ಕೇಳುವ ಸ್ಥಿತಿ ಎದುರಾಗಿದೆ. ಜನ ಮರೆತುಹೋಗುವ ಮೊದಲು ಸಿನಿಮಾ ರಿಲೀಸ್ ಮಾಡಬೇಕು. ಯಾರು ಎಷ್ಟೇ ದೊಡ್ಡ ಕಲಾವಿದರಾಗಿರಲಿ ಸತತವಾಗಿ ಮಾರುಕಟ್ಟೆಯಲ್ಲಿ ಬಾಗಿಲು ತಟ್ಟುವುದು ಕರ್ತವ್ಯ.
3. ಸಿನಿಮಾಗಳು ದೊಡ್ಡದಾಗಿರುವಷ್ಟು ಸಮಸ್ಯೆಗಳೂ ದೊಡ್ಡದಾಗಿರುತ್ತವೆ. ದೊಡ್ಡ ಸಿನಿಮಾಗಳು ಡಿಜಿಟಲ್ ಹಕ್ಕುಗಳ ಮಾರಾಟದ ಮೇಲೆ ಅವಲಂಬಿತವಾಗಿರುತ್ತವೆ. ಚಿತ್ರಮಂದಿರಗಳಲ್ಲಿ ಗಳಿಕೆ ಇಲ್ಲವೆಂದಿಲ್ಲ. ಆದರೆ ಈ ಗಳಿಕೆಯ ಅವಧಿ ಇಳಿಕೆಯಾಗಿದೆ. ಜೊತೆಗೆ ಸಿನಿಮಾಗಳ ಬಜೆಟ್ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಒಟ್ಟಾರೆ ವ್ಯವಹಾರದ ಮೇಲೆ ಅವಲಂಬಿತವಾಗಿರಲೇಬೇಕು. ಕೆಲವೊಮ್ಮೆ ಡಿಜಿಟಲ್ ಹಕ್ಕುಗಳ ಮಾರಾಟಕ್ಕೆ ಕಾಯದೆ ಚಿತ್ರಮಂದಿರಗಳಿಗೆ ಬರಬಹುದು. ಆದರೆ ಕೆಲವೊಮ್ಮೆ ಕಾಯಲೇಬೇಕಾಗುತ್ತದೆ. ಈಗ ಸಿನಿಮಾ ವ್ಯವಹಾರ ಬದಲಾಗಿದೆ. ಸಿನಿಮಾ ಮಾಡುವುದಷ್ಟೇ ಅಲ್ಲ, ವ್ಯವಹಾರದಲ್ಲೂ ಸ್ಮಾರ್ಟ್ ಆಗಿರಬೇಕು.
4. ‘ಮ್ಯಾಕ್ಸ್’ ಬಳಿಕ ಅನೂಪ್ ಭಂಡಾರಿ ನಿರ್ದೇಶನದ ‘ಬಿಲ್ಲಾ ರಂಗಾ ಬಾಷಾ’ ಸಿನಿಮಾ ಸೆಟ್ಟೇರಲಿದೆ. ಈ ಸಿನಿಮಾಗೆ ನಾವು ಆರೇಳು ವರ್ಷಗಳಿಂದ ಕೆಲಸ ಮಾಡುತ್ತಿದ್ದೇವೆ. ‘ಬಿಲ್ಲಾ ರಂಗಾ ಬಾಷಾ’ ಸಿನಿಮಾವನ್ನು ಮಾಡಲು ಸಾಧ್ಯವೇ ಎನ್ನುವುದನ್ನು ತಿಳಿದುಕೊಳ್ಳಲು ನಾವು ‘ವಿಕ್ರಾಂತ್ ರೋಣ’ ಸಿನಿಮಾವನ್ನು ಮಾಡಿದೆವು. ಏಕೆಂದರೆ ಎಷ್ಟೋ ಸಿನಿಮಾವನ್ನು ಮಾಡಲು ಹೆಜ್ಜೆ ಇಡುವಾಗ ಹಣವಿರುತ್ತದೆ, ಆದರೆ ಅದನ್ನು ಮಾಡುವ ಸಾಮರ್ಥ್ಯವಿದೆಯೇ ಎಂದು ತಿಳಿದಿರುವುದಿಲ್ಲ. ನಾವು ಏನನ್ನೋ ಹೇಳಲು ಹೋಗಿ ತೆರೆ ಮೇಲೆ ಜೋಕ್ ಆಗಿಬಿಡಬಹುದು. ‘ಬಿಲ್ಲಾ ರಂಗ ಬಾಷಾ’ ಸಿನಿಮಾದ ಬಜೆಟ್, ಸ್ಕೇಲ್‌ಗೆ ಹತ್ತಿರವಾದ ಸಿನಿಮಾ ಮಾಡೋಣ ಎಂದು ನಿರ್ಧರಿಸಿ ‘ವಿಕ್ರಾಂತ್ ರೋಣ’ ಮಾಡಿದೆವು. ಇದರಲ್ಲಿ ತಂಡ ಸಿದ್ಧವಾಯಿತು, ನಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಬಂದಿತು. ‘ಬಿಲ್ಲಾ ರಂಗಾ ಬಾಷಾ’ ನನ್ನ ಇಲ್ಲಿಯವರೆಗಿನ ಸಿನಿಪಯಣದ ಅತಿ ದೊಡ್ಡ ಸಿನಿಮಾ. 2025ರಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ. ಸತ್ಯಜ್ಯೋತಿ ನಿರ್ಮಾಣದ ಸಿನಿಮಾವೂ ಖಚಿತವಾಗಿದೆ. ಮುಂದಿನ 25 ದಿನದೊಳಗೆ ನಾಲ್ಕೈದು ಸಿನಿಮಾಗಳನ್ನು ಲಾಕ್ ಮಾಡಿಕೊಳ್ಳಲಿದ್ದೇನೆ. ನನ್ನ ನಿರ್ದೇಶನದ ಮುಂದಿನ ಚಿತ್ರವನ್ನು ಕೆಆರ್‌ಜಿ ನಿರ್ಮಾಣ ಮಾಡಲಿದೆ.
5. ಅತ್ತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗದ ಸಿನಿಮಾಗಳನ್ನು ಒಟಿಟಿಗಳು ಖರೀದಿಸುತ್ತಿಲ್ಲ. ಕೆಲವು ಒಟಿಟಿಯವರು ಖರೀದಿಯನ್ನೇ ನಿಲ್ಲಿಸಿದ್ದಾರೆ. ಮನೆಯಲ್ಲಿ ದೇವರ ಕೋಣೆ ಇದೆ ಎಂದು ದೇವಸ್ಥಾನಕ್ಕೆ ಹೋಗದೇ ಇರುತ್ತೇವೆಯೇ? ಚಿತ್ರಮಂದಿರಗಳ ಅನುಭವವೇ ಬೇರೆ. ಜನರನ್ನು ಚಿತ್ರಮಂದಿರದತ್ತ ಸೆಳೆಯುವಂಥಹದ್ದು ಏನು ಮಾಡಿದ್ದೀರಿ ಎನ್ನುವುದು ಮುಖ್ಯವಾಗುತ್ತದೆ. ಚಿತ್ರಮಂದಿರಗಳ ಕಲೆಕ್ಷನ್ ಚೆನ್ನಾಗಿದೆ. ಈ ಮಾರುಕಟ್ಟೆ ಹಾಳಾಗಿಲ್ಲ. ಈ ದೇವಸ್ಥಾನಕ್ಕೆ ಯಾವತ್ತೂ ಬೀಗ ಬೀಳಲ್ಲ. ಕನಿಷ್ಠ 30–36 ಲಕ್ಷ ಜನ ಸಿನಿಮಾ ನೋಡಿದರೆ ಅದರ ಗಳಿಕೆ ಎಷ್ಟು ಗೊತ್ತೇ? ಆದರೆ ಅಷ್ಟು ಜನ ನೋಡುತ್ತಿಲ್ಲ.
6. ಒಬ್ಬ ಒಳ್ಳೆ ಕಲಾವಿದ ನಿರ್ದೇಶಕ ಆಗಿಯೇ ಆಗುತ್ತಾನೆ. ನಿರ್ದೇಶಕರಾದ ಮೇಲೆ ಸ್ವಾರ್ಥ ಎನ್ನುವುದನ್ನು ಬಿಟ್ಟು ಇನ್ನೊಬ್ಬ ಕಲಾವಿದನಿಗೆ ಕಥೆ ಬರೆದು ಬಂದರೆ ಏನಾದರೂ ಆಗಲಿ ಆ ಸಿನಿಮಾವನ್ನು ಖಂಡಿತಾ ಮಾಡುತ್ತೇನೆ.
7. ‘ಮಾರ್ಟಿನ್’ ಧ್ರುವ ಸರ್ಜಾ ಅವರಿಗೆ ವೈಯಕ್ತಿಕವಾಗಿ ಹಾಗೂ ಕನ್ನಡ ಚಿತ್ರರಂಗಕ್ಕೆ ಹೆಸರು ತಂದುಕೊಡಲಿದೆ. ಧ್ರುವಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ದೊಡ್ಡ ಸ್ಟಾರ್ ಆಗಿ ನಿಲ್ಲುವ ಅರ್ಹತೆ, ಯೋಗ್ಯತೆ ಇದೆ. ರಕ್ಷಿತ್, ಆತ ಒಂದು ಮಗುವಿನಂತೆ. ಎಲ್ಲದರಲ್ಲೂ ಆಸಕ್ತಿ ಹೊಂದಿದಾತ. ಇಂತಹ ಮಕ್ಕಳಿಗೆ ನಾವು ಸ್ವಾತಂತ್ರ್ಯ ನೀಡಬೇಕು. ಕಟ್ಟಿಹಾಕಿ ನಮ್ಮದೇ ಸಿನಿಮಾ ಮಾಡು ಎನ್ನಲು ಸಾಧ್ಯವಿಲ್ಲ. ಹೇಮಂತ್ ಎಂ.ರಾವ್ ಅವರ ನಿರ್ದೇಶನದಲ್ಲಿ ಕೆಲಸ ಮಾಡಲು ಕಾತುರನಾಗಿದ್ದೇನೆ.
ಬಿಗ್‌ಬಾಸ್ ಕಥೆ ಏನು?
ಬಿಗ್‌ಬಾಸ್ ಹೊಸ ಆವೃತ್ತಿ ಬಗ್ಗೆ ಚರ್ಚೆ ನಡೆಯುತ್ತಿದೆ. ಬಿಗ್‌ಬಾಸ್‌ಗೆ ಹತ್ತು ವರ್ಷ ನನ್ನ ಜೀವನವನ್ನು ನೀಡಿದ್ದೇನೆ. ಈ ಕಾರ್ಯಕ್ರಮ ನಡೆಸಿಕೊಡುವಲ್ಲಿ ನನ್ನ ಭಾಗದಿಂದ ಹೆಚ್ಚು ಪ್ರಯತ್ನವಿದೆ. ಬಿಗ್‌ಬಾಸ್ ಶೋಗಳನ್ನು ಆಸ್ವಾದಿಸಿದ್ದೇನೆ, ಅದಕ್ಕೆ ಸಮಯ ನೀಡಿದ್ದೇನೆ, ಶೋ ಮಾಡಲು ಆಸಕ್ತಿಯೂ ಇದೆ. ಆದರೆ ಕೆಲವೊಮ್ಮೆ ನಾವು ಮುಂದುವರಿಯಬೇಕಾಗುತ್ತದೆ. ಈ ನಿಟ್ಟಿನಲ್ಲಿ ಚರ್ಚೆ ನಡೆದಿದೆ. ಅವರು ಹೊಸಮುಖ ಹುಡುಕಲಿ ಎಂದು ನಾನು ವೈಯಕ್ತಿಕವಾಗಿ ಬಯಸುತ್ತೇನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.