2021 ಜುಲೈ; ಸುದೀಪ್ ಅವರು ಈ ಹಿಂದೆ ತಮ್ಮ ಸಿನಿಮಾವೊಂದಕ್ಕೆ ಬಣ್ಣ ಹಚ್ಚಿದ್ದು ಅಂದಾಗಿತ್ತು. ಇದಾಗಿ ಸುಮಾರು ಎರಡು ವರ್ಷಗಳ ಬಳಿಕ ಸುದೀಪ್ ಮತ್ತೆ ಬಣ್ಣಹಚ್ಚಿದ್ದಾರೆ.
ಸದ್ಯ ಚೆನ್ನೈನ ಮಹಾಬಲಿಪುರಂ ಸಮೀಪ #46 ಶೂಟಿಂಗ್ ನಲ್ಲಿ ತೊಡಗಿಸಿಕೊಂಡಿದ್ದಾರೆ ಸುದೀಪ್. ವರ್ಷಕ್ಕೆ ಕನಿಷ್ಠ ಎರಡು ಸಿನಿಮಾವಾದರೂ ಮಾಡುವ ಯೋಜನೆ ಹಾಕಿಕೊಂಡ್ದಿದೇನೆ ಎಂದಿರುವ ಸುದೀಪ್ ತಮ್ಮ 46ನೇ ಸಿನಿಮಾವನ್ನು ಇದೇ ವರ್ಷಾಂತ್ಯದಲ್ಲಿ ತೆರೆಗೆ ತರುವ ಪ್ರಯತ್ನದಲ್ಲಿದ್ದಾರೆ.
ಗುರುವಾರ #46 ಸಿನಿಮಾ ಶೂಟಿಂಗ್ ಬಳಿಕ ಕನ್ನಡ ಸಿನಿಮಾ ಪತ್ರಕರ್ತರ ಜೊತೆ #46 ಹಾಗೂ ತಮ್ಮ ಮುಂದಿನ ಪ್ರಾಜೆಕ್ಟ್ ಗಳ ಬಗ್ಗೆ ಸುದೀಪ್ ಮಾತಿಗಿಳಿದರು.
'ಈ ಸಿನಿಮಾ ನಿರ್ದೇಶಕ ವಿಜಯ್ ಕಾರ್ತಿಕೇಯ ಹಾಗೂ ನಿರ್ಮಾಣ ಸಂಸ್ಥೆ ವಿಕ್ರಿಯೇಷನ್ಸ್, ತಮಿಳು ಸಿನಿಮಾ ಮಾಡುವ ಯೋಜನೆ ಹಾಕಿಕೊಂಡು ಬಂದಿದ್ದರು. ಕಥೆ ಕೇಳಿ ಕನ್ನಡದಲ್ಲೇ ಈ ಸಿನಿಮಾ ನಿರ್ಮಾಣ ಮಾಡಲು ತಿಳಿಸಿದೆ. ಕನ್ನಡದಲ್ಲೇ ಹಲವು ಸಿನಿಮಾ ರಾಷ್ಟ್ರವ್ಯಾಪಿ ತಲುಪಿದೆ. ಇದೂ ಹಾಗೆಯೇ ಆಗಲಿ ಎಂದೆ. ತಮಿಳು ಹಾಗೂ ಕನ್ನಡದಲ್ಲಿ ಏಕಕಾಲದಲ್ಲಿ ಶೂಟಿಂಗ್ ಇಂದಿನ ದಿನಗಳಲ್ಲಿ ಅಗತ್ಯವೂ ಇಲ್ಲ ಎಂದೆ. ನನ್ನ ಮಾತಿಗೆ ಅವರು ಒಪ್ಪಿಗೆ ಸೂಚಿಸಿದರು. ಬಹುತೇಕ ತಮಿಳು ತಂತ್ರಜ್ಞರ ತಂಡವೇ ಅವರ ಪಟ್ಟಿಯಲ್ಲಿತ್ತು. ನಾನು ಅವರ ಬದಲಾಗಿ ಅಜನೀಶ್ ಲೋಕನಾಥ್, ಶೇಖರ್ ಚಂದ್ರ ಮುಂತಾದ ಕನ್ನಡ ತಂತ್ರಜ್ಞರ ಹೆಸರು ಸೂಚಿಸಿದೆ. ಇದೇ ಕಾರಣಕ್ಕಾಗಿ ಇಂದು ತಮಿಳುನಾಡಿನಲ್ಲಿ ಶೂಟಿಂಗ್ ನಡೆಯುತ್ತಿದ್ದರೂ, ತಂಡದ ಶೇ 90 ಜನ ಕನ್ನಡಿಗರಿದ್ದಾರೆ. ಬಹುತೇಕ ಕಲಾವಿದರೂ ಕನ್ನಡಿಗರೇ. ಮಹಾಬಲಿಪುರಂ ಸಮೀಪ ಕೈಗಾರಿಕೆಗಳ ಬ್ಯಾಕ್ ಡ್ರಾಪ್ ನಲ್ಲಿ ಬೃಹತ್ ಸೆಟ್ ನಿರ್ಮಾಣ ಮಾಡಿ ಈ ಸಿನಿಮಾದ ಶೂಟಿಂಗ್ ನಡೆಯತ್ತಿದೆ. ಇಲ್ಲಿನ ಶೂಟಿಂಗ್ ಬಳಿಕ ಪಾಂಡಿಚೇರಿ ಸೇರಿ ಕೆಲವು ಕಡೆ ಶೂಟಿಂಗ್ ಇರಲಿದೆ. ಇದೇ ವರ್ಷ ಈ ಸಿನಿಮಾವನ್ನು ತೆರೆಗೆ ತರುವ ಹಠದಲ್ಲಿ ನಾನಿದ್ದೇನೆ' ಎಂದರು ಸುದೀಪ್.
ಈ ತಿಂಗಳು ಪೂರ್ತಿ ಚೆನ್ನೈ ನಲ್ಲೇ ಶೂಟಿಂಗ್ ನಲ್ಲಿ ತೊಡಗಿಸಿಕೊಳ್ಳಲಿರುವ ಸುದೀಪ್, ಜನ್ಮದಿನದ (ಸೆ. 2) ಸಂದರ್ಭದಲ್ಲಿ ಬೆಂಗಳೂರಿಗೆ ಮರಳಲಿದ್ದಾರೆ. ನಂತರ ಮತ್ತೆ #46 ಶೂಟಿಂಗ್ ಸೆಟ್ ಗೆ ತೆರಳಲಿದ್ದಾರೆ.
ಸುದೀಪ್ ಅವರು ತಿಳಿಸಿದಂತೆ, 50ನೇ ಸಿನಿಮಾವರೆಗೂ ಅವರು ಲೈನ್ ಅಪ್ ಆಗಿದ್ದು, 'ನನಗಾಗಿ ಅಷ್ಟು ಒಳ್ಳೆಯ ಕಥೆಗಳನ್ನ ಬರೆಯುತ್ತಿರುವಾಗ ನಾನು ಅದನ್ನು ಸಂತೋಷದಿಂದ ಒಪ್ಪಿಕೊಳ್ಳುತ್ತಿದ್ದೇನೆ' ಎನ್ನುತ್ತ ಸದ್ಯಕ್ಕೆ ನಿರ್ದೇಶನಕ್ಕೆ ಇಳಿಯುವುದಿಲ್ಲ ಎನ್ನುವ ಸುಳಿವನ್ನೂ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.