ನಟ ಸುದೀಪ್ ವೇದಿಕೆಯಲ್ಲಿ ಭಾವುಕರಾಗಿ, ಉದ್ಯಮಕ್ಕೆ ಉಪಯುಕ್ತವಾಗಬಲ್ಲ ಒಂದಷ್ಟು ನೀತಿಪಾಠ ಹೇಳಿದರು. ಇದಕ್ಕೆಲ್ಲ ಕಾರಣವಾಗಿದ್ದು ಸುದೀಪ್ ಅಳಿಯ ಸಂಚಿತ್ ಸಂಜೀವ್ ನಿರ್ದೇಶನ ಹಾಗೂ ನಟನೆಯ ‘ಜಿಮ್ಮಿ’ ಚಿತ್ರದ ಶೀರ್ಷಿಕೆ, ಪಾತ್ರದ ಅನಾವರಣ ಸಮಾರಂಭ. ಜೂನಿಯರ್ ಕಿಚ್ಚನಾಗಿ ತಮ್ಮ ಸಹೋದರಿಯ ಪುತ್ರ ಸಂಜಿತ್ ಅವರನ್ನು ತಮ್ಮದೇ ಹೊಸದೊಂದು ನಿರ್ಮಾಣ ಸಂಸ್ಥೆಯಿಂದ ಸುದೀಪ್ ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ. ಹೀಗಾಗಿ ಇದು ಅಕ್ಷರಶಃ ಸುದೀಪ್ ಕುಟುಂಬದ ಕಾರ್ಯಕ್ರಮವಾಗಿತ್ತು.
‘ಕನ್ನಡ ಚಿತ್ರರಂಗ ಇಲ್ಲಿವರೆಗೂ ಜೀವಂತವಾಗಿದೆ ಎಂದರೆ, ಅದಕ್ಕೆ ಅನೇಕರ ಕೊಡುಗೆ ಇದೆ. ಸಾಕಷ್ಟು ಜನ ಚಿತ್ರರಂಗವನ್ನು ಕಾಪಾಡಿಕೊಂಡು ಬಂದಿದ್ದಾರೆ. ಇಂತಹ ಚಿತ್ರರಂಗವನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ಇಂದಿನ ಹೊಸಬರ ಮೇಲಿದೆ. ದಯವಿಟ್ಟು ಇಂದಿನ ಹೊಸ ನಾಯಕರೆಲ್ಲ ಪರಸ್ಪರ ಸ್ನೇಹಿತರಾಗಿರಿ. ಒಬ್ಬರಿಗೊಬ್ಬರ ಸಹಕಾರವಿರಲಿ. ಆರೋಗ್ಯಯುತ ಪೈಪೋಟಿ ಇರಲಿ. ಸಂಜೀವ್ ಕುಟುಂಬದ ಮುಂದಿನ ಪೀಳಿಗೆಯ ಹುಡುಗನನ್ನು ನಮ್ಮ ಸುಪ್ರಿಯಾನ್ವಿ ನಿರ್ಮಾಣ ಸಂಸ್ಥೆಯಿಂದ ಪರಿಚಯಿಸುತ್ತಿದ್ದೇವೆ‘ ಎಂದು ಸುದೀಪ್ ವೇದಿಕೆಯಿಂದಲೇ ಅಳಿಯನಿಗೆ ಕಿವಿಮಾತು ಹೇಳಿದರು.
ನಟ ಶಿವರಾಜ್‌ಕುಮಾರ್ ಹಾಗೂ ರವಿಚಂದ್ರನ್, ಸಂಜಿತ್ ಅವರನ್ನು ವೇದಿಕೆ ಪರಿಚಯಿಸಿ ಶುಭ ಹಾರೈಸಿದರು. ಶಿವರಾಜ್ ಕುಮಾರ್ ಮಾತನಾಡಿ, ‘ಎಸ್’ ಕುಟುಂಬಕ್ಕೆ ಸಂಜಿತ್ ಅವರನ್ನು ಸ್ವಾಗತಿಸಿದರು. ಅದಕ್ಕೆ ಹಾಸ್ಯಮಯವಾಗಿ ಪ್ರತಿಕ್ರಿಯಿಸಿದ ರವಿಚಂದ್ರನ್, ಹಾಗಿದ್ದರೆ ಇಲ್ಲಿ ‘ಆರ್’ ಕುಟುಂಬಕ್ಕೆ ಕೆಲಸವಿಲ್ಲ ಎಂದು ಸಭೆಯನ್ನು ನಗೆಗಡಲಿನಲ್ಲಿ ತೇಲಿಸದರು. ಸೋಲದ ಶಿವಣ್ಣ ‘ಆರ್’ ಕುಟುಂಬದಿಂದಲೇ ನಾವೆಲ್ಲ ಬಂದಿದ್ದು. ‘ಆರ್’ ನಂತರವೇ ‘ಎಸ್’ ಎಂದು ತಿರುಗೇಟು ನೀಡಿದರು.
‘ಸಂಜಿತ್, ಸುದೀಪ್ ಅವರದ್ದೇ ಚಿತ್ರಗಳಲ್ಲಿ ಸಹಾಯಕನಾಗಿ ಕೆಲಸ ಮಾಡಿದ್ದ. ಹುಡುಗನ ಕುರಿತು ಭರವಸೆ ಬಂದ ಬಳಿಕ ನಮ್ಮ ನಿರ್ಮಾಣ ಸಂಸ್ಥೆಯಲ್ಲಿ ‘ಜಿಮ್ಮಿ’ ನಿರ್ಮಾಣ ಮಾಡುತ್ತಿದ್ದೇವೆ. ಈತ ಅಳಿಯನಲ್ಲ, ನನಗೆ ಮಗ, ಒಳ್ಳೆಯ ಸ್ನೇಹಿತ. ಇದರ ಜೊತೆಗೆ ಮಗಳು ಸಾನ್ವಿ ಕೂಡ ಈ ಚಿತ್ರದಲ್ಲಿ ಒಂದು ಹಾಡು ಹಾಡಿದ್ದಾಳೆ’ ಎಂದು ಹೆಮ್ಮೆಪಟ್ಟರು ಪ್ರಿಯಾ ಸುದೀಪ್.
ಸುಪ್ರಿಯಾನ್ವಿ ಜೊತೆಗೆ ಈ ಚಿತ್ರಕ್ಕಾಗಿ ಲಹರಿ ಫಿಲ್ಮ್ಸ್ ಹಾಗೂ ಕೆ.ಪಿ.ಶ್ರೀಕಾಂತ್ ನಿರ್ಮಾಪಕರಾಗಿ ಕೈ ಜೋಡಿಸಿದ್ದಾರೆ. ವಾಸುಕಿ ವೈಭವ್ ಸಂಗೀತ ಚಿತ್ರಕ್ಕಿದ್ದು, ಚಿತ್ರೀಕರಣ ಶಿಘ್ರದಲ್ಲಿಯೇ ಪ್ರಾರಂಭವಾಗಲಿದೆ ಎಂದಿದೆ ಚಿತ್ರತಂಡ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.