ಬೆಂಗಳೂರು: ನಟ ಕಿಚ್ಚ ಸುದೀಪ್ ಅವರ ತಾಯಿ ಸರೋಜಾ ಅವರು ಇಂದು (ಭಾನುವಾರ) ನಿಧನರಾಗಿದ್ದು, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಸಂಸದ ಬಸವರಾಜ ಬೊಮ್ಮಾಯಿ ಸೇರಿದಂತೆ ಇತರ ಗಣ್ಯರು ಸಂತಾಪ ಸೂಚಿಸಿದ್ದಾರೆ.
‘ನಟ ಕಿಚ್ಚ ಸುದೀಪ್ ಅವರ ತಾಯಿ ಶ್ರೀಮತಿ ಸರೋಜಾ ಅವರು ದೈವಾಧೀನರಾದ ಸುದ್ದಿ ತಿಳಿದು ಮನಸ್ಸಿಗೆ ಅಪಾರ ನೋವಾಯಿತು. ಮೃತರ ಆತ್ಮಕ್ಕೆ ಚಿರಶಾಂತಿ ದೊರಕಲಿ, ಸುದೀಪ್ ಅವರಿಗೆ ಮತ್ತು ಅವರ ಕುಟುಂಬ ವರ್ಗದವರಿಗೆ ಅಗಲಿಕೆಯ ನೋವು ಭರಿಸುವ ಶಕ್ತಿಯನ್ನು ಆ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಸಂತಾಪ ಸೂಚಿಸಿದ್ದಾರೆ.
‘ಖ್ಯಾತ ಚಲನಚಿತ್ರ ನಟ ಹಾಗೂ ಆತ್ಮೀಯರಾದ ಕಿಚ್ಚ ಸುದೀಪ್ ಅವರ ತಾಯಿ ಶ್ರೀಮತಿ ಸರೋಜಾ ಅವರು ನಿಧನರಾಗಿರುವ ಸುದ್ದಿ ತಿಳಿದು ತೀವ್ರ ದುಃಖಿತನಾಗಿದ್ದೇನೆ. ನಟ ಸುದೀಪ್ ಹಾಗೂ ಅವರ ಕುಟುಂಬ ವರ್ಗದವರಿಗೆ ಅವರ ತಾಯಿಯ ನಿಧನದ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ, ಮೃತರ ಆತ್ಮಕ್ಕೆ ಚಿರಶಾಂತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ’ ಎಂದು ಸಂಸದ ಬಸವರಾಜ ಬೊಮ್ಮಾಯಿ ದುಃಖ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ ವಿಜಯೇಂದ್ರ, ‘ಖ್ಯಾತ ನಟ ಸುದೀಪ್ ಅವರ ಮಾತೃಶ್ರೀ ಶ್ರೀಮತಿ ಸರೋಜಾ ಸಂಜೀವ್ ಅವರ ನಿಧನಕ್ಕೆ ಸಂತಾಪ ಕೋರುವೆ. ಖ್ಯಾತ ನಿರ್ಮಾಪಕರಾದ ಸಂಜೀವ್ ಅವರ ಧರ್ಮ ಪತ್ನಿಯೂ ಆದ ಮೃತರ ಅಗಲಿಕೆಯ ನೋವು ಸಹಿಸುವ ಶಕ್ತಿ ಕುಟುಂಬ ವರ್ಗಕ್ಕೆ ದೇವರು ಕರುಣಿಸಲಿ, ಮೃತರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಪ್ರಾರ್ಥಿಸುವೆ’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.