ಮುಂಬೈ: ಉದ್ಯಮಿ ಮುಕೇಶ್ ಅಂಬಾನಿ ಮಗ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್ ಅವರ ವಿವಾಹಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಅಮೆರಿಕದ ಸೆಲೆಬ್ರಿಟಿ ಸೋದರಿಯರಾದ ಕಿಮ್ ಕರ್ದಾಶಿಯಾನ್ ಹಾಗೂ ಖೋಲ್ ಕರ್ದಾಶಿಯಾನ್ ಮುಂಬೈಗೆ ಬಂದಿಳಿದಿದ್ದಾರೆ.
ರೂಪದರ್ಶಿ ಹಾಗೂ ಟಿ.ವಿ. ನಿರೂಪಕಿಯಾಗಿರುವ ಕಿಮ್ ಅವರು ತಮ್ಮ ಮಾಡಲಿಂಗ್ ಮೂಲಕವೇ ಪಡ್ಡೆಗಳ ಮನಸ್ಸು ಕದ್ದವರು. ಇವರಿಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಫಾಲೋವರ್‌ಗಳಿದ್ದಾರೆ
ಅನಂತ್ – ರಾಧಿಕಾ ಮಧುವೆ ಸಮಾರಂಭಕ್ಕೆ ಮುಂಬೈಗೆ ಬಂದಿಳಿದ ಈ ಸೋದರಿಯರೊಂದಿಗೆ ಅವರ ಸಿಬ್ಬಂದಿ ಹಾಗೂ ಭದ್ರತಾ ಸಿಬ್ಬಂದಿಯೂ ಇದ್ದರು.
ನಂತರ ಕಾರಿನ ಮೂಲಕ ಹೊರಟ ಸೋದರಿಯರು, ನಂತರ ಆಟೋ ರಿಕ್ಷಾದಲ್ಲಿ ತೆರಳಿದ ವಿಡಿಯೊ ವ್ಯಾಪಕವಾಗಿ ಹರಿದಾಡುತ್ತಿದೆ. ಹಣೆಗೆ ಬಿಂದಿ ಇಟ್ಟಿರುವ ಕಿಮ್, ಸೋದರಿಯೊಂದಿಗೆ ಆಟೋ ರಿಕ್ಷಾದಲ್ಲಿ ಮುಂಬೈನಲ್ಲಿ ಸುತ್ತಾಟ ನಡೆಸುತ್ತಾ, ಮಜಾ ಸವಿದಿದ್ದಾರೆ.
ಈ ವಿವಾಹ ಸಮಾರಂಭದ ಮೂರನೇ ಹಂತವಾಗಿ ವಿವಾಹ ನೆರವೇರುತ್ತಿದೆ. ವಿವಾಹ ಪೂರ್ವ ಹಾಗೂ ನಂತರ ನಡೆದ ಕ್ರೂಸ್ ಪಾರ್ಟಿಯೂ ಸಾಕಷ್ಟು ಸುದ್ದಿಯಾಗಿತ್ತು. ದೇಶ, ವಿದೇಶಗಳ ಖ್ಯಾತ ನಾಮರು ಈ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು.
ಸದ್ಯ ವಿವಾಹ ಸಮಾರಂಭವು ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಶನ್ ಸೆಂಟರ್‌ನಲ್ಲಿ ನಡೆಯುತ್ತಿದ್ದು, ಕುಸ್ತಿಪಟು ಹಾಗೂ ನಟ ಜಾನ್ ಸೀನಾ ಕೂಡಾ ಬಂದಿದ್ದಾರೆ. ಮೈಕ್ ಟೈಸನ್, ಡೇವಿಡ್ ಬೇಕಮ್, ಅಡೆಲಿ, ಸಲ್ಮಾನ್ ಖಾನ್, ರಣವೀರ್ ಸಿಂಗ್, ಪ್ರಿಯಾಂಕಾ ಚೋಪ್ರಾ, ನಿಕ್ ಜೋನ್ಸ್, ರಾಮ್ ಚರಣ್ ಹಾಗೂ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರ ಮಂತ್ರಿಗಳು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ.
ಶನಿವಾರ ಶುಭ ಆಶೀರ್ವಾದ ಕಾರ್ಯಕ್ರಮ ನಡೆಯಲಿದೆ. ಭಾನುವಾರ ಮಂಗಳ ಉತ್ಸವದ ಮೂಲಕ ಈ ಅದ್ಧೂರಿ ಮದುವೆಗೆ ತೆರೆ ಬೀಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.