ADVERTISEMENT

‘ಕಿರಿಕ್‌ ಶಂಕರ್‌’ ಸಿನಿಮಾ ವಿಮರ್ಶೆ: ಕಥೆಯಾಚೆಗೂ ಇದೆ ಕಿರಿಕ್‌

​ಪ್ರಜಾವಾಣಿ ವಾರ್ತೆ
Published 28 ಮೇ 2022, 7:53 IST
Last Updated 28 ಮೇ 2022, 7:53 IST
ಕಿರಿಕ್‌ ಶಂಕರ್‌ ಚಿತ್ರದಲ್ಲಿ ಯೋಗಿ
ಕಿರಿಕ್‌ ಶಂಕರ್‌ ಚಿತ್ರದಲ್ಲಿ ಯೋಗಿ   

ಚಿತ್ರ: ಕಿರಿಕ್‌ ಶಂಕರ್‌

ತಾರಾಗಣ: ಯೋಗಿ, ಅದ್ವಿಕಾ

ನಿರ್ದೇಶನ: ಆರ್‌. ಅನಂತರಾಜು

ADVERTISEMENT

ಸಂಗೀತ: ವೀರ ಸಮರ್ಥ್‌

ನಿರ್ಮಾಣ: ಎಂ.ಎನ್‌. ಕುಮಾರ್‌

ಕ್ಯಾನ್ಸರ್‌ ಆಸ್ಪತ್ರೆ ನಿರ್ಮಿಸಲು ಒತ್ತಾಯಿಸಿ ಮುಖ್ಯಮಂತ್ರಿಯನ್ನೇ ಹಳ್ಳಿಯ ಸಾಮಾನ್ಯ ಮಣ್ಣಿನ ಮನೆಯೊಳಗೆ ಒತ್ತೆಯಿಡುವುದು. ಆ ಮನೆಯೊಳಗಿರುವ ಮುಖ್ಯಮಂತ್ರಿಯನ್ನು ಬಿಡಿಸಲು ಮಿಲಿಟರಿ ಕಮಾಂಡೋಗಳು ಬರುವುದು...! ಆಸ್ಪತ್ರೆ ನಿರ್ಮಿಸುವ ಭರವಸೆ ನೀಡುವ ಮುಖ್ಯಮಂತ್ರಿ, ಅಷ್ಟರಲ್ಲಿ ಕಮಾಂಡೋಗಳಿಂದ ಹಣ್ಣುಗಾಯಿ ನೀರುಗಾಯಿ ಆಗಿ ಜೈಲು ಸೇರುವ ನಾಯಕ ಮತ್ತು ಅವನ ಮೂವರು ಗೆಳೆಯರ ಪಟಾಲಂ. ಜೈಲಿನ ಕೊಠಡಿಯೊಳಗೇ ಒಂದು ವಿನಾಕಾರಣ ಕೊಲೆ. ಇಷ್ಟೆಲ್ಲಾ ಕಥೆ ಹೇಳಲು ಜೈಲು ಕೋಣೆಯೊಳಗಿನಿಂದ ಶುರುವಾಗುವ ಫ್ಲ್ಯಾಷ್‌ಬ್ಯಾಕ್‌.

– ಇದು ‘ಕಿರಿಕ್‌ ಶಂಕರ್‌’ ಚಿತ್ರದ ಒಂದೇ ನಿಮಿಷದಲ್ಲಿ ಹೇಳಬಹುದಾದ ಕಥೆ. ಚಿತ್ರದ ಕೊನೆಯ 20 ನಿಮಿಷ ನೋಡಿದರೂ ಉಳಿದ ಅವಧಿಯ ಕಥೆ ಅರ್ಥವಾಗಿಬಿಡುತ್ತದೆ. ಒಳ್ಳೆಯ ಆಶಯ ಹೇಳಲು ಹೊರಟ ಕಥೆಯನ್ನು ಜಾಳು ಜಾಳಾಗಿ, ಅನಗತ್ಯ ಲಘು ಸನ್ನಿವೇಶಗಳನ್ನು ತುರುಕಿಸಿ ಹೇಳಬಾರದಿತ್ತು ಅನ್ನುವುದು ಮೊದಲಾರ್ಧದಲ್ಲಿಯೇ ಅನಿಸುತ್ತದೆ.

ಪುಂಡಾಟಿಕೆ ನಡೆಸುತ್ತಿರುವ ನಾಯಕ (ಯೋಗಿ)ನಿಗೆ, ಅಷ್ಟೇ ದಾಢಸಿತನ ತೋರುತ್ತಾ ಪ್ರವೇಶಿಸುವ ತೆಳುಕಾಯದ ನಾಯಕಿ (ಅದ್ವಿಕಾ) ನಾಯಕನಿಗೆ ಸುಮ್ಮನೆ ಭಾವುಕತನ ಸೃಷ್ಟಿಸಲು ಬೆರಕೆಗಷ್ಟೇ ಸೀಮಿತವಾಗಿರುವ ಸಹೋದರಿಯರ ಪಾತ್ರ. ಬಾಡಿಗೆ ಮನೆಯ ಮಾಲೀಕನಿಗೆ ಕಿರುಕುಳ ಕೊಡುವ ಸಾಲಗಾರ, ಒಂದಿಷ್ಟು ಹೊಡೆದಾಟ ಬಡಿದಾಟ. ಪೆಕರು ಪೆಕರಾಗಿರುವ ಹಾಸ್ಯ, ಅನಗತ್ಯ ಹೊಡೆದಾಟಗಳೂ ಹಲವು. ಕಿವಿಚುಚ್ಚುವ ಎರಡು ಹಾಡುಗಳು, ಹಿತವೆನಿಸದ ಸಂಗೀತ ಇವು ಕಥೆಯಾಚೆಗಿನ ನಿಜ ಅರ್ಥದ ಕಿರಿಕ್‌ಗಳು.

ನಾಯಕಿಯ ಕ್ಯಾನ್ಸರ್‌ ಚಿಕಿತ್ಸೆಗೆ ಹಣ ಹೊಂದಿಸಲು ಗಾಯಕನಾಗುವ ನಾಯಕ. ಈ ಸನ್ನಿವೇಶದಲ್ಲಷ್ಟೇ ಎರಡು ಹಾಡುಗಳು ಪರ್ವಾಗಿಲ್ಲ ಅನಿಸುವಷ್ಟಿವೆ.

ಯೋಗಿ ಅವರ ನಿಜ ಪ್ರತಿಭೆ ಇಲ್ಲಿ ಮಸುಕಾಗಿದೆ. ಹಾಗೆ ನೋಡಿದರೆ ಅವರ ಪಟಲಾಂನಲ್ಲಿರುವ ಸಹನಟರೇ ಪರ್ವಾಗಿಲ್ಲ. ಉಳಿದವರು ನಿರ್ದೇಶಕರು ಹೇಳಿದ್ದಷ್ಟನ್ನೇ ಒಪ್ಪಿಸಿ ಸುಮ್ಮನಾದಂತಿದೆ. ನಾಯಕಿ ಒಂದಿಷ್ಟು ಗಂಡುಬೀರಿತನದ ಪಾತ್ರಕ್ಕೆ ಪ್ರಯತ್ನಿಸಿದ್ದಾರೆ ಅಷ್ಟೇ.

ನಾಯಕಿಗೆ ಕ್ಯಾನ್ಸರ್‌ ಅಥವಾ ಇನ್ನೇನೋ ಗಂಡಾಂತರ ಒದಗುವುದು, ಅದನ್ನು ಬಗೆಹರಿಸಲು ಶ್ರಮಿಸುವ ನಾಯಕ, ಸಾಮಾಜಿಕ ಸಮಸ್ಯೆಯ ವಿರುದ್ಧದ ಹೋರಾಟ ಇತ್ಯಾದಿ ಸರಕುಗಳು ನೂರಾರು ಚಿತ್ರಗಳಲ್ಲಿ ಈಗಾಗಲೇ ಬಂದಿವೆ. ಅದೇ ಎಳೆಯನ್ನಿಟ್ಟುಕೊಂಡ ಕಿರಿಕ್‌ ಶಂಕರ ಹೊಸದೇನನ್ನಾದರೂ ಹೇಳಿಯಾನೇ ಎಂದು ನೋಡಿದರೆ ಒಂದಿಷ್ಟು ಉಪದೇಶಗಳಷ್ಟೇ ಈ ಸಿನಿಮಾದಲ್ಲಿ ಇವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.