ADVERTISEMENT

ಚಿರಂಜೀವಿ ಚಿತ್ರದಲ್ಲಿ ಕಿಶೋರ್‌

ಕೆ.ಎಂ.ಸಂತೋಷ್‌ ಕುಮಾರ್‌
Published 30 ಏಪ್ರಿಲ್ 2020, 19:45 IST
Last Updated 30 ಏಪ್ರಿಲ್ 2020, 19:45 IST
ಕಿಶೋರ್
ಕಿಶೋರ್   

ಕನ್ನಡದ ಅತ್ಯಂತ ಸೆನ್ಸಿಬಲ್‌ ನಟರಲ್ಲಿ ಕಿಶೋರ್‌ ಕೂಡ ಒಬ್ಬರು. ತೆಲುಗಿನ ಮೆಗಾಸ್ಟಾರ್‌ ಚಿರಂಜೀವಿ ಜತೆಗೆ ತೆರೆ ಹಂಚಿಕೊಳ್ಳುವ ಅವಕಾಶ ಈ ನಟನಿಗೆ ಸಿಕ್ಕಿದೆ. ಚಿರಂಜೀವಿ ಅವರ ಮುಂಬರುವ ಬಹುನಿರೀಕ್ಷೆಯ ಚಿತ್ರ ‘ಆಚಾರ್ಯ’ದಲ್ಲಿ ಕಿಶೋರ್‌ ಖಳನ ಪಾತ್ರ ನಿರ್ವಹಿಸುತ್ತಿದ್ದಾರೆ. ಜತೆಗೆ ಸ್ವಂತ ಚಿತ್ರನಿರ್ಮಾಣ ಸಂಸ್ಥೆಯಡಿ ಎರಡು ಚಿತ್ರಗಳನ್ನು ನಿರ್ಮಿಸುತ್ತಿದ್ದಾರೆ. ಇವರು ವೃತ್ತಿಯಲ್ಲಿ ಸಿನಿಮಾ ನಟ, ಪ್ರವೃತ್ತಿಯಲ್ಲಿ ಕೃಷಿಕ. ಸಿನಿಮಾ ಮತ್ತು ಕೃಷಿ ಇವೆರಡರ ಕುರಿತು ಹಲವು ಸಂಗತಿಗಳನ್ನು ಅವರು ‘ಸಿನಿಮಾ ಪುರವಣಿ’ಯ ಜತೆಗೆ ಹಂಚಿಕೊಂಡಿದ್ದಾರೆ.

‘ಆಚಾರ್ಯ’ದಲ್ಲಿ ಖಳನಾಗಿ ನಟಿಸುತ್ತಿರುವ ಕಾರಣ ಬಹಿರಂಗಪಡಿಸಿದ ಅವರು, ‘ಚಿತ್ರದ ನಿರ್ದೇಶಕ ಕೊರಟಾಲ ಶಿವ ನನ್ನ ಸ್ನೇಹಿತರು. ತುಂಬಾ ಹಿಂದೆಯೇ ಎರಡು ಸಿನಿಮಾಗಳಲ್ಲಿ ನಟಿಸುವಂತೆ ಆಫರ್‌ ಮಾಡಿದ್ದರು. ಡೇಟ್‌ ಹೊಂದಾಣಿಕೆಯಿಂದ ಅದು ಸಾಧ್ಯವಾಗಿರಲಿಲ್ಲ. ಅದು ಅಲ್ಲದೆ, ಈ ಬಾರಿ ಚಿರಂಜೀವಿ ಅವರಂತಹ ದೊಡ್ಡ ಸ್ಟಾರ್‌ನಟರ ಜತೆ ತೆರೆ ಹಂಚಿಕೊಳ್ಳುವ ಅವಕಾಶ ಬಂದಾಗ ಒಪ್ಪಿಕೊಳ್ಳದೆ ಇರಲಾದೀತೆ’ ಎಂದು ಮಾತು ಆರಂಭಿಸಿದರು.

‘ಚಿಕ್ಕ ಪಾತ್ರವಾದರೂ ತುಂಬಾ ಮಹತ್ವದ್ದಾಗಿದೆ. ಈಗಾಗಲೇ ಮೊದಲ ಹಂತದಲ್ಲಿ ನನ್ನ ಪಾತ್ರದ ಸ್ವಲ್ಪ ಭಾಗದ ಚಿತ್ರೀಕರಣ ನಡೆದಿದೆ. ಲಾಕ್‌ಡೌನ್‌ನಿಂದ ಚಿತ್ರೀಕರಣ ಸ್ಥಗಿತಗೊಂಡಿದೆ. ಲಾಕ್‌ಡೌನ್‌ ತೆರವಾದ ನಂತರ ಚಿತ್ರೀಕರಣ ಶುರುವಾಗಲಿದ್ದು, ನನ್ನ ಪಾತ್ರದ ಉಳಿದ ಭಾಗದ ಚಿತ್ರೀಕರಣಕ್ಕಾಗಿ ಹೈದರಾಬಾದ್‌ಗೆ ಹೋಗಬೇಕಿದೆ’ ಎನ್ನುವ ಮಾತು ಸೇರಿಸಿದರು.

ADVERTISEMENT

ತಾವು ಮಾಡುತ್ತಿರುವಕನ್ನಡದ ಚಿತ್ರಗಳ ಬಗ್ಗೆ ಮಾತು ಹೊರಳಿದಾಗ, ‘ಬೈ1 ಗೆಟ್1 ಫ್ರೀ’ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರದಲ್ಲಿ ನಟಿಸಿದ್ದೇನೆ. ‌ಇದು ಹೊಸ ಹುಡುಗರ ಚಿತ್ರ. ಹೊಸಬರನ್ನು ಪ್ರೋತ್ಸಾಹಿಸುವುದು ನಮ್ಮ ಕರ್ತವ್ಯ. ಹೊಸಬರು ಯಾರೇ ಬಂದು ಏನನ್ನಾದರೂ ಹೊಸ ಪ್ರಯೋಗ ಮಾಡುತ್ತೀವಿ ಎಂದಾಗ ಅವರೊಂದಿಗೆ ಕೈಜೋಡಿಸದೆ ಸುಮ್ಮನಿರಲು ಆಗದು ಎನ್ನಲು ಮರೆಯಲಿಲ್ಲ.

ನಟನೆ ಅಷ್ಟೇ ಅಲ್ಲ, ಚಿತ್ರ ನಿರ್ಮಾಣ ಮತ್ತು ನಿರ್ದೇಶನವನ್ನೂ ಕಿಶೋರ್‌ ಮಾಡುತ್ತಿದ್ದಾರೆ. ‘ನನ್ನದೇ ಚಿತ್ರ ನಿರ್ಮಾಣ ಸಂಸ್ಥೆಯಡಿ ಎರಡು ಚಿತ್ರಗಳ ಕೆಲಸ ನಡೆಯುತ್ತಿದೆ. ನಾನು ಮತ್ತು ಸ್ನೇಹಿತೆ ಅನುಪಮಾ ‘ಬ್ಲಾಕ್‌ ಅಂಡ್‌ ವೈಟ್‌’ ಚಿತ್ರ ನಿರ್ಮಿಸಿದ್ದೇವೆ. ಇದಕ್ಕೆ ‌ನನ್ನದೇನಿರ್ದೇಶನವಿದೆ.ಹಾಗೆಯೇ ಸಹನಿರ್ಮಾಣದಲ್ಲಿ ‘ವೈಫೈ’ ಚಿತ್ರ ಮಾಡುತ್ತಿದ್ದೇವೆ. ಈ ಎರಡು ಚಿತ್ರಗಳ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ನಡೆಯುತ್ತಿವೆ’ ಎಂದರು.

ಕೃಷಿ ಪ್ರಯೋಗ ಹೇಗೆ ನಡೆಯುತ್ತಿದೆ ಎನ್ನುವ ಪ್ರಶ್ನೆ ಮುಂದಿಟ್ಟಾಗ, ‘ಕೃಷಿಗಿಂತಲೂ ಸಹಜ ಅರಣ್ಯ ಬೆಳೆಸುವ ಉದ್ದೇಶದಿಂದ ಮೊದಲು ಒಂದಿಷ್ಟು ಗಿಡಮರ ಬೆಳೆಸಲು ಆದ್ಯತೆ ಕೊಟ್ಟಿದ್ದೆವು. ಬಗೆಬಗೆಯ ಹಣ್ಣಿನ ಗಿಡಗಳನ್ನು ಬೆಳೆಸಿದ್ದೇವೆ. ಎಲ್ಲವೂ ಈಗ ಫಲಕೊಡುತ್ತಿವೆ.ಆರು ಹಸುಗಳನ್ನು ಸಾಕಿಕೊಂಡಿರುವುದರಿಂದ ಮೇವಿನ ಉದ್ದೇಶಕ್ಕೆ ರಾಗಿ ಬೆಳೆಯಲಾರಂಭಿಸಿದ್ದೇವೆ. ಒಂದಿಷ್ಟು ತರಕಾರಿ ಬೆಳೆಯುವ ಯೋಜನೆಯೂ ಹಾಕಿಕೊಂಡಿದ್ದೇವೆ’ ಎನ್ನುವುದು ಅವರ ಉತ್ತರ.

ಲಾಕ್‌ಡೌನ್‌ ಅನುಭವ ಹೇಗಿತ್ತು ಎಂದಾಗ, ‘ಹೈದರಾಬಾದ್‌ನಿಂದ ಬೆಂಗಳೂರಿಗೆ ಬಂದ ಕಾರಣಕ್ಕೆ 21 ದಿನ ಹೋಂ ಕ್ವಾರಂಟೀನ್‌ ಆಗಿದ್ದೆವು. ಈಗಬನ್ನೇರುಘಟ್ಟ ಸಮೀಪದ ತೋಟದ ಮನೆಯಲ್ಲಿದ್ದೇವೆ. ಲಾಕ್‌ಡೌನ್‌ ನಾವು ಪರಿಸರವನ್ನು ಹೇಗೆ ಗೌರವಿಸಬೇಕೆನ್ನುವ ಪಾಠವನ್ನು ಹೇಳಿಕೊಡುತ್ತಿದೆ’ ಎಂದರು.

ಹಾಗೆಯೇ ಇಂದಿನ ಕೊರೊನಾ ಪರಿಸ್ಥಿತಿಪ್ರತಿ ವಸ್ತುವಿನ ಬಳಕೆ, ಸದ್ಬಳಕೆ, ಮರುಬಳಕೆ ಹೇಗಿರಬೇಕೆನ್ನುವುದನ್ನು ಅರ್ಥ ಮಾಡಿಸಿದೆ. ನಮ್ಮ ತೋಟದ ಮನೆಯ ಗೋಡಾನ್‌ಲ್ಲಿ ಬೇಕಾಬಿಟ್ಟಿ ಸಂಗ್ರಹಿಸಿದ್ದವಸ್ತುಗಳಲ್ಲಿ ಯಾವೆಲ್ಲವೂ ಸದ್ಬಳಕೆ ಮತ್ತು ಮರುಬಳಕೆ ಮಾಡಬಹುದೆನ್ನುವುದು ನನ್ನ ಅನುಭವಕ್ಕೆಅಕ್ಷರಶಃ ಬಂದಿತು ಎಂದರು ಕಿಶೋರ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.