ಪ್ಯಾರಿಸ್: ಫ್ರೆಂಚ್ ಸಿನಿಮಾಗಳ ಶೂಟಿಂಗ್ ಸಂದರ್ಭದಲ್ಲಿ ಕಿಸ್ಸಿಂಗ್ ದೃಶ್ಯಗಳ ಚಿತ್ರೀಕರಣ ಪುನಃ ಶುರುವಾಗಿದೆ ಎಂದು ಫ್ರಾನ್ಸ್‌ನ ಸಂಸ್ಕೃತಿ ಸಚಿವ ಶುಕ್ರವಾರ ತಿಳಿಸಿದ್ದಾರೆ.
‘ಶೂಟಿಂಗ್ ಸೆಟ್‌ಗಳಲ್ಲಿ ಕಿಸ್ಸಿಂಗ್ ದೃಶ್ಯಗಳ ಚಿತ್ರೀಕರಣವು ಆರಂಭವಾಗಿದೆ. ಕಲಾವಿದರಿಗೆ ಕೋವಿಡ್–19 ಕಾಯಿಲೆ ಇದೆಯೇ ಎಂಬ ತಪಾಸಣೆ ನಡೆಸಿ, ಇಂತಹ ದೃಶ್ಯಗಳ ಚಿತ್ರೀಕರಣ ನಡೆಸಲಾಗುತ್ತಿದೆ’ ಎಂದು ಅಲ್ಲಿನ ಸಂಸ್ಕೃತಿ ಸಚಿವ ಫ್ರ್ಯಾಂಕ್ ರೀಸ್ಟರ್ ಹೇಳಿದ್ದಾರೆ. ಕೋವಿಡ್–19 ಸಾಂಕ್ರಾಮಿಕ ಇದ್ದರೂ ರೊಮ್ಯಾನ್ಸ್ ಎಂಬುದು ಸತ್ತಿಲ್ಲ ಎಂದೂ ಅವರು ಹೇಳಿದ್ದಾರೆ.
ಫ್ರಾನ್ಸ್‌ನಲ್ಲಿ ಚಿತ್ರೀಕರಣದ ಪುನರಾರಂಭಕ್ಕೆ ಈ ತಿಂಗಳ ಆರಂಭದಲ್ಲಿ ಅನುಮತಿ ನೀಡಲಾಯಿತು. ಆದರೆ, ಅಲ್ಲಿನ ಕಲಾವಿದರು ‘ಸಿನಿಮಾಗಳಿಗೆ ಬಹಳ ಮುಖ್ಯವಾಗಿರುವ ಕಿಸ್ಸಿಂಗ್ ದೃಶ್ಯಗಳ ಚಿತ್ರೀಕರಣ ಆರಂಭಿಸಲು ತುಸು ಸಮಯ ತೆಗೆದುಕೊಂಡರು’ ಎಂದು ಸಚಿವರು ಹೇಳಿದ್ದಾರೆ.
ಆದರೆ, ಕಿಸ್ಸಿಂಗ್ ದೃಶ್ಯಗಳ ಚಿತ್ರೀಕರಣಕ್ಕೆ ಮೊದಲು ಸಮ್ಮತಿ ಸೂಚಿಸಿದ ಕಲಾವಿದರು ಯಾರು ಎಂಬುದನ್ನು ರೀಸ್ಟರ್ ತಿಳಿಸಲಿಲ್ಲ. ಹಾಗೆಯೇ, ಯಾವ ಸಿನಿಮಾ ಮೂಲಕ ಇದು ಪುನರಾರಂಭ ಆಯಿತು ಎಂಬುದನ್ನೂ ಅವರು ಹೇಳಿಲ್ಲ.
ವ್ಯಕ್ತಿಗಳು ಅಂತರ ಕಾಯ್ದುಕೊಳ್ಳಬೇಕು ಎಂಬ ನಿಯಮದ ಕಾರಣದಿಂದಾಗಿ, ಪ್ರಣಯದ ಸನ್ನಿವೇಶಗಳು ಇನ್ನಿಲ್ಲದಂತೆ ಆಗುತ್ತವೆಯೇ ಎಂದು ಪ್ರಶ್ನಿಸಿದಾಗ ಸಚಿವರು, ‘ಇಲ್ಲ, ಕಿಸ್ಸಿಂಗ್ ದೃಶ್ಯಗಳು ಕೊನೆಗಂಡಿಲ್ಲ’ ಎಂದು ಉತ್ತರಿಸಿದರು.
ಫ್ರೆಂಚ್ ಸಿನಿಮಾಗಳಲ್ಲಿ ಕಿಸ್ಸಿಂಗ್ ದೃಶ್ಯಗಳ ಚಿತ್ರೀಕರಣ ಪುನಃ ಆರಂಭವಾಗಿರುವುದರ ಪರಿಣಾಮವಾಗಿ, ‘ಅಂತರ ಕಾಯ್ದುಕೊಳ್ಳಬೇಕಿರುವ ಈ ದಿನಗಳಲ್ಲಿ ಪ್ರಣಯದ ಸನ್ನಿವೇಶಗಳ ಚಿತ್ರೀಕರಣ ಹೇಗೆ’ ಎಂದು ಪ್ರಶ್ನಿಸುತ್ತಿದ್ದವರಿಗೆ ಸಮಾಧಾನ ತರುವ ಉತ್ತರವೊಂದು ಸಿಕ್ಕಂತಾಗಿದೆ!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.