ಹಲವು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡು, ಪ್ರಶಸ್ತಿ ಬಾಚಿ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಎರಡು ಕನ್ನಡ ಸಿನಿಮಾಗಳು ‘ಪರಸ್ಪರ’ ಜೊತೆಯಾಗಿ ಬೆಳ್ಳಿತೆರೆಗೆ ಹೆಜ್ಜೆ ಇಡುತ್ತಿದೆ.
ಒಟಿಟಿ ವೇದಿಕೆಗಳಲ್ಲಿ ಸ್ಥಾನ ಸಿಗದೇ ಇದ್ದಾಗ, ಹಿಂಜರಿಯದೆ ಭಿನ್ನ ಪ್ರಯೋಗವೊಂದರ ಮೂಲಕ ಜನರೆದುರಿಗೆ ಬರುವ ನಿರ್ಧಾರವನ್ನು ‘ಕೋಳಿ ಎಸ್ರು’ ಹಾಗೂ ‘ಹದಿನೇಳೆಂಟು’ ತಂಡ ಮಾಡಿದೆ. ನಿರ್ದೇಶಕರಾದ ಚಂಪಾ ಪಿ.ಶೆಟ್ಟಿ ಹಾಗೂ ಪೃಥ್ವಿ ಕೊಣನೂರ್ ಅವರು ಜೊತೆಯಾಗಿ ಈ ಸಾಹಸಕ್ಕೆ ಕೈಹಾಕಿದ್ದಾರೆ.
ಈ ಎರಡೂ ಸಿನಿಮಾಗಳು 2024ರ ಜನವರಿ 26ರಂದು ರಾಜ್ಯದಾದ್ಯಂತ ಮಲ್ಟಿಪ್ಲೆಕ್ಸ್‌ಗಳಲ್ಲಿ ಬಿಡುಗಡೆಯಾಗಲಿದೆ. ಬಿಡುಗಡೆಗೆ ಲಕ್ಷಾಂತರ ರೂಪಾಯಿ ಖರ್ಚು ಬೀಳುವ ಕಾರಣ, ಹೊಸ ಮಾದರಿಯ ಪ್ರಯೋಗವೊಂದಕ್ಕೆ ಈ ತಂಡಗಳು ಸಜ್ಜಾಗಿವೆ. ₹400ಕ್ಕೆ ಈ ಎರಡೂ ಸಿನಿಮಾದ ಟಿಕೆಟ್‌ಗಳನ್ನು ಆಸಕ್ತರು ಖರೀದಿಸಬಹುದು. ಅಥವಾ ಇಂತಹ ಸದಭಿರುಚಿಯ ಚಿತ್ರಗಳಿಗೆ ಹಣದ ರೂಪದಲ್ಲಿ ಪ್ರೋತ್ಸಾಹ ನೀಡಲು ಇಚ್ಛಿಸುವವರು ಆ ಮಾರ್ಗವನ್ನು ಅನುಸರಿಸಬಹುದು. ಈ ಎರಡೂ ಪ್ರಕ್ರಿಯೆಗಳಿಗಾಗಿ ತಂಡವು ಪ್ರತ್ಯೇಕ ವೆಬ್‌ಸೈಟ್ ರೂಪಿಸಿದೆ. ಒಂದೂವರೆ ತಿಂಗಳ ಮೊದಲೇ ಈ ಪ್ರಕ್ರಿಯೆ ಆರಂಭಿಸಿರುವ ತಂಡವು ಟಿಕೆಟ್ ಹಂಚಿಕೆ ಮೂಲಕ ಕ್ರೌಡ್ ಫಂಡಿಂಗ್ ಮಾಡಲಿದೆ. ಈ ಹಣವನ್ನು ಸಿನಿಮಾ ಪ್ರಚಾರ, ವಿತರಣೆಗೆ ಬಳಸಿಕೊಳ್ಳಲಿದೆ. ಕನ್ನಡ ಚಿತ್ರರಂಗದಲ್ಲಿ ಈ ಪ್ರಯೋಗ ಹೊಸದು. ‘ಹೀಗೆ ಒಟ್ಟಿಗೇ ಎರಡೂ ಸಿನಿಮಾಗಳ ಬಿಡುಗಡೆ ಮಾಡುವುದರಿಂದ ಖರ್ಚು ಕೂಡಾ ಕಡಿಮೆ. ನಮ್ಮ ಈ ಮಾದರಿಯನ್ನು ಹೊಸಬರು ಅನುಸರಿಸಬಹುದು’ ಎನ್ನುತ್ತಾರೆ ಹದಿನೇಳೆಂಟು ಸಿನಿಮಾದ ನಿರ್ದೇಶಕ ಪೃಥ್ವಿ ಕೊಣನೂರ್.
ಹೆಚ್ಚಿನ ಮಾಹಿತಿಗೆ ಲಿಂಕ್‌ಗೆ ಭೇಟಿ ನೀಡಿ: paraspara.live
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.