ADVERTISEMENT

ಲಾಕ್‌ಡೌನ್‌ ಸಂಕಷ್ಟದಲ್ಲಿ ಕೋಮಲ್‌!

​ಪ್ರಜಾವಾಣಿ ವಾರ್ತೆ
Published 5 ಜುಲೈ 2021, 6:55 IST
Last Updated 5 ಜುಲೈ 2021, 6:55 IST
‘2020’ ಚಿತ್ರದ ಫಸ್ಟ್‌ಲುಕ್‌
‘2020’ ಚಿತ್ರದ ಫಸ್ಟ್‌ಲುಕ್‌   

ಕೋವಿಡ್‌ ಪ್ರಕರಣಗಳನ್ನು ನಿಯಂತ್ರಿಸಲು ಜಾರಿಗೊಳಿಸಲಾಗಿದ್ದ ಲಾಕ್‌ಡೌನ್‌ನಿಂದ ದೇಶದಾದ್ಯಂತ ಲಕ್ಷಾಂತರ ಜನರು ಸಂಕಷ್ಟಕ್ಕೀಡಾಗಿದ್ದರು. ಹಲವರು ಉದ್ಯೋಗ ಕಳೆದುಕೊಂಡಿದ್ದರೆ, ಇನ್ನೂ ಕೆಲವರು ವೇತನ ಕಡಿತದ ಅಡಕತ್ತರಿಯಲ್ಲಿ ಸಿಲುಕಿದ್ದರು. ಈ ಸಂಕಷ್ಟ ನಟ ಕೋಮಲ್‌ ಅವರನ್ನೂ ಬಿಟ್ಟಿಲ್ಲ. ಲಾಕ್‌ಡೌನ್‌ ಕೋಮಲ್‌ ಅವರ ಉಸಿರುಗಟ್ಟಿಸಿದೆ.

‘2020’ ಎಂಬ ಹೊಸ ಚಿತ್ರದಲ್ಲಿ ನಟ ಕೋಮಲ್‌ ನಾಯಕರಾಗಿ ನಟಿಸುತ್ತಿದ್ದು, ಕೋಮಲ್‌ ಅವರ ಜನ್ಮದಿನದಂದು ಚಿತ್ರದ ಫಸ್ಟ್‌ಲುಕ್‌ ಬಿಡುಗಡೆಯಾಗಿದೆ. ಪೋಸ್ಟರ್‌ನಲ್ಲಿ ಲಾಕ್‌ಡೌನ್‌ ಎಂಬ ಸ್ಟ್ರಿಪ್‌ ಕೋಮಲ್‌ ಅವರ ಕುತ್ತಿಗೆ ಬಿಗಿದಿದ್ದು, ಜೊತೆಯಲ್ಲಿ ಕರ್ಫ್ಯೂ ಜಾರಿಯಲ್ಲಿದೆ ಎಂಬ ಸೂಚನಾ ಫಲಕದ ಎದುರು ದಿಕ್ಕುತೋಚದಂತೆ ನಿಂತಿರುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಸಂಭಾಷಣೆಕಾರ ಕೆ.ಎಲ್‌. ರಾಜಶೇಖರ್‌ ಅವರು ನಿರ್ದೇಶಿಸುತ್ತಿರುವ ಮೊದಲ ಚಿತ್ರ ಇದಾಗಿದ್ದು, ಟಿ.ಆರ್‌.ಚಂದ್ರಶೇಖರ್‌ ಇದರ ನಿರ್ಮಾಪಕರಾಗಿದ್ದಾರೆ. ಕೋವಿಡ್‌, ಲಾಕ್‌ಡೌನ್‌ ವಿಷಯಗಳ ಸುತ್ತ ಚಿತ್ರಕಥೆ ಹೆಣೆದಂತಿದೆ. ಕೋಮಲ್‌ ಅವರಿಗೆ ಜನಪ್ರಿಯತೆ ತಂದುಕೊಟ್ಟಿದ್ದ ಕಾಮಿಡಿ ಜಾನರ್‌ ಕಳಚಿಕೊಂಡು, ಕೆಂಪೇಗೌಡ–2 ಮುಖಾಂತರ ಆ್ಯಕ್ಷನ್‌ ಮತ್ತು ಥ್ರಿಲ್ಲರ್‌ ಚಿತ್ರಗಳ ಕಡೆಗೆ ಕೋಮಲ್‌ ಮುಖ ಮಾಡಿದ್ದರು. ಕೆಂಪೇಗೌಡ–2 ಚಿತ್ರದಲ್ಲಿ ಗಂಭೀರ ಪಾತ್ರಕ್ಕೆ ಬಣ್ಣಹಚ್ಚಿದ್ದ ಕೋಮಲ್‌ ಇದೀಗ ಮತ್ತೆ ಹಾಸ್ಯಭರಿತ ಚಿತ್ರವೊಂದರಲ್ಲಿ ನಟಿಸಲಿದ್ದಾರೆ.

‘ಸದಾ ಹೀಗೆ ನಗುತ್ತಾ ನಗಿಸುತ್ತಾ ನೂರು ಕಾಲ ಸುಖವಾಗಿ ಬಾಳಿ, ಶುಭವಾಗಲಿ’ ಎಂದು ಫಸ್ಟ್‌ಲುಕ್‌ ಜೊತೆಗೆ ರಾಜಶೇಖರ್‌ ಶುಭಹಾರೈಸಿದ್ದಾರೆ.

ADVERTISEMENT

ಕೋವಿಡ್‌ ದೃಢಪಟ್ಟು ಗಂಭೀರವಾಗಿದ್ದ ಕೋಮಲ್‌: ಕೋವಿಡ್‌ ಎರಡನೇ ಅಲೆ ತೀವ್ರವಾದ ಸಂದರ್ಭದಲ್ಲಿ ನಟ ಕೋಮಲ್‌ ಅವರಿಗೂ ಕೋವಿಡ್‌ ದೃಢಪಟ್ಟಿತ್ತು. ಅವರ ಆರೋಗ್ಯ ಸ್ಥಿತಿಯೂ ಗಂಭೀರವಾಗಿತ್ತು. ಹಲವು ದಿನಗಳ ಕಾಲ ಮುಚ್ಚಿಟ್ಟಿದ್ದ ಈ ವಿಷಯವನ್ನು ಸ್ವತಃ ಕೋಮಲ್‌ ಅವರ ಅಣ್ಣ ಜಗ್ಗೇಶ್‌ ಟ್ವಿಟರ್‌ ಮೂಲಕ ಬಹಿರಂಗಪಡಿಸಿದ್ದರು.

‘ನಾನು ಇಷ್ಟು ದಿನ ಮುಚ್ಚಿಟ್ಟು ಪಡುತ್ತಿದ್ದ ಯಾತನೆ ರಾಯರಿಗೆ ಮಾತ್ರ ಗೊತ್ತು. ರಾಯರು ನನ್ನ ಹೃದಯಲ್ಲಿದ್ದರೆ ಸಾವಿನ ಮನೆ ಕದ ತಟ್ಟುತ್ತಿರುವ ನನ್ನ ತಮ್ಮನಿಗೆ ಸಾವು ಗೆಲ್ಲುವ ಶಕ್ತಿ ನೀಡಿ ಎಂದು ಬೇಡಿಕೊಂಡಿದ್ದೆ. ನನ್ನ ಈ ಬೇಡಿಕೆಗೆ ಬೃಂದಾವನದಿಂದ ಎದ್ದು ಬಂದ ರಾಯರು ಪಕ್ಕನಿಂತು ಅವನ ಉಳಿಸಿಬಿಟ್ಟರು. ಕೋಮಲ್‌ ಸುರಕ್ಷಿತವಾಗಿದ್ದಾನೆ. ತಮ್ಮನಿಗೆ ಕೊರೊನಾ ಮಾರಿ ಮೈಸೇರಿ, ಆತನ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ದೇವರಿಗೆ ಗೊತ್ತು ನಾನು ಎಲ್ಲರಿಂದ ಮುಚ್ಚಿಟ್ಟು, ಅಣ್ಣನಾಗಿ ಅವನ ಉಳಿಸಿಕೊಂಡ ಕಷ್ಟ’ ಎಂದು ಟ್ವೀಟ್‌ನಲ್ಲಿ ಜಗ್ಗೇಶ್‌ ಉಲ್ಲೇಖಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.