ನವದೆಹಲಿ: ‘ಭಾರತೀಯರು ಹಾಗೂ ಕೊರಿಯನ್ನರು ಸಿನಿಮಾಗಳನ್ನು ಬಹಳಷ್ಟು ಪ್ರೀತಿಸುತ್ತಾರೆ. ಜತೆಗೆ ಗಣಿತದಲ್ಲೂ ಸಾಕಷ್ಟು ಆಸಕ್ತಿ ಹೊಂದಿದವರಾಗಿದ್ದಾರೆ’ ಎಂದು ದಕ್ಷಿಣ ಕೊರಿಯಾದ ಚಲನಚಿತ್ರ ನಿರ್ದೇಶಕಿ ಕಿಮ್ ಶಿನ್ ಹೊ–ಸ್ಯಾನ್ ಹೇಳಿದ್ದಾರೆ.
ತಮ್ಮ ನೂತನ ಕೊರಿಯನ್ ಚಿತ್ರ ‘ಮೈ ಉನ್ನೀ’ (ನನ್ನ ಹಿರಿಯ ಸೋದರಿ) ಪ್ರದರ್ಶನ ಸಂದರ್ಭದಲ್ಲಿ ಮಾತನಾಡಿರುವ ಅವರು, ‘ನಾನು ಭಾರತಕ್ಕೆ ಈ ಹಿಂದೆ ಎಂದೂ ಬಂದಿರಲಿಲ್ಲ. ಆದರೆ ನಾನು ಅಮೆರಿಕದಲ್ಲಿದ್ದಾಗ ಬಹಳಷ್ಟು ಜನ ಭಾರತೀಯ ಸ್ನೇಹಿತರನ್ನು ಹೊಂದಿದ್ದೆ. ಭಾರತೀಯರು ಹಾಗೂ ಕೊರಿಯನ್ನರು ಸಾಂಸ್ಕೃತಿಕವಾಗಿ ಒಂದೇ ರೀತಿಯಲ್ಲಿ ಯೋಚಿಸುತ್ತಾರೆ ಮತ್ತು ಗಣಿತದಲ್ಲಿ ಹೆಚ್ಚಿನ ಜ್ಞಾನ ಹೊಂದಿರುತ್ತಾರೆ ಎಂಬುದನ್ನು ನನ್ನ ಅನುಭವದಿಂದ ಕಂಡುಕೊಂಡೆ’ ಎಂದಿದ್ದಾರೆ.
‘ಮೈ ಉನ್ನೀ ಚಿತ್ರದಲ್ಲಿ ಯೋನ್ ಎಂಬುದು ಪ್ರಮುಖ ಪಾತ್ರ. ಸಂಗೀತ ಹಾಗೂ ಧೂಮಪಾನದಲ್ಲಿ ಮುಳುಗಿರುವ ವ್ಯಕ್ತಿ. ಒಮ್ಮೆ ಆಕೆಯ ಸೋದರಿ ಡಾನ್ ಮನೆಗೆ ಬಂದಾಗ ಹಲವು ಮೂಗೇಟುಗಳಾಗಿರುತ್ತವೆ. ತಾನು ಸದಾ ದೂರ ಇರಬೇಕು ಎಂಬ ಸಂಗತಿಯೇ ಎದುರಾದಾಗ ಅದನ್ನು ನಿರ್ವಹಿಸುವ ಕಥಾವಸ್ತು ಚಿತ್ರದ್ದು’ ಎಂದು ತಮ್ಮ ಚಿತ್ರದ ಕುರಿತು ಕಿಮ್ ಶಿನ್ ಬೆಳಕು ಚೆಲ್ಲಿದರು.
ಭವಿಷ್ಯದಲ್ಲಿ ತಾನು ಓಡಾಡಬೇಕೆಂದಿರುವ ದೇಶಗಳ ಪಟ್ಟಿಯಲ್ಲಿ ಭಾರತವೂ ಇದೆ ಎಂದಿರುವ ಕಿಮ್ ಶಿನ್, ‘ಇಲ್ಲಿನ ಅದ್ಭುತ ವಾಸ್ತುಶಿಲ್ಪವನ್ನು ನೋಡಬೇಕೆಂದಿದ್ದೇನೆ. ಅದಕ್ಕಿಂತಲೂ ಹೆಚ್ಚಾಗಿ ಇಲ್ಲಿನ ವೈವಿಧ್ಯಮಯ ಪ್ರಾಕೃತಿಕ ಸೌಂದರ್ಯವನ್ನು ಸವಿಯಬೇಕೆಂದಿದ್ದೇನೆ’ ಎಂದು ಮನದಾಳವನ್ನು ಹಂಚಿಕೊಂಡಿದ್ದಾರೆ.
3 ಈಡಿಯಟ್ಸ್, ಲೈಫ್ ಆಫ್ ಪೈ, ಲಯನ್ ಇಷ್ಟಪಡುವ ಭಾರತೀಯ ಸಿನಿಮಾಗಳು ಎಂದು ಕಿಮ್ ಶಿನ್ ಹೇಳಿದ್ದಾರೆ. ‘ಜತೆಗೆ ಬಹಳಷ್ಟು ಜನ ಭಾರತೀಯರೂ ಕೊರಿಯಾದ ಚಿತ್ರಗಳನ್ನು ಮತ್ತು ಸಂಸ್ಕೃತಿಯನ್ನು ಇಷ್ಟಪಡುತ್ತಾರೆ. ಭವಿಷ್ಯದಲ್ಲಿ ಕೊರಿಯನ್ ಸಂಸ್ಕೃತಿಯನ್ನು ಭಾರತೀಯರಿಗೆ ಪರಿಚಯಿಸುವ ಕಾರ್ಯಕ್ರಮ ಹಮ್ಮಿಕೊಳ್ಳುವ ಉದ್ದೇಶವಿದೆ’ ಎಂದಿದ್ದಾರೆ.
ಕೊರಿಯಾದಲ್ಲಿ ನಡೆದ ಮಹಿಳೆಯರ ಹಕ್ಕುಗಳಿಗೆ ಸಂಬಂಧಿಸಿದ ಚಲನಚಿತ್ರಗಳ ಉತ್ಸವದಲ್ಲಿ ‘ಮೈ ಉನ್ನೀ’ ಪ್ರಶಸ್ತಿ ಪಡೆದಿದೆ. ಜತೆಗೆ ಭಾರತ ಮತ್ತು ಕೊರಿಯಾದ ಬಾಂಧವ್ಯದ 50ನೇ ವರ್ಷಾಚರಣೆ ಸಂದರ್ಭದಲ್ಲಿ ಈ ಚಿತ್ರ ಪ್ರದರ್ಶನ ಕಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.