ADVERTISEMENT

ಭಯಾನಕ ‘ಕುಲ್ಫಿ’!

​ಪ್ರಜಾವಾಣಿ ವಾರ್ತೆ
Published 28 ಜೂನ್ 2018, 16:17 IST
Last Updated 28 ಜೂನ್ 2018, 16:17 IST
ಸಿಲೋನ್
ಸಿಲೋನ್   

ವೇದಿಕೆ ಮೇಲೆ ನಟಿ ಸಿಲೋನ್‌ ಮುಗುಳುನಗುತ್ತಾ ಕುಳಿತಿದ್ದರು. ಪಕ್ಕದಲ್ಲಿಯೇ ಕೈಯಲ್ಲಿ ಚಾಕು ಹಿಡಿದು ಮುಖದಲ್ಲಿ ಕೋಪ ತುಂಬಿಕೊಂಡಿದ್ದ ಅವರ ಪೋಸ್ಟರ್‌ ರಾರಾಜಿಸುತ್ತಿತ್ತು. ‘ಚಾಕು ಹಿಡಿಯುವ ಅವಶ್ಯಕತೆ ನಿಮಗೆ ಏಕೆ ಬಂತು’ ಎಂಬ ಪ್ರಶ್ನೆ ಅವರಿಗೆ ಎದುರಾಯಿತು. ‘ಹೆಣ್ಣುಮಕ್ಕಳಿಗೆ ಎಲ್ಲರೂ ಗೌರವ ಕೊಡಬೇಕು. ಇಲ್ಲವಾದರೆ ಶಿಕ್ಷೆ ಕಟ್ಟಿಟ್ಟ ಬುತ್ತಿ’ ಎಂದು ಸೂಚ್ಯವಾಗಿ ಹೇಳಲು ಚಾಕು ಹಿಡಿದಿದ್ದೇನೆ ಎಂದ ಅವರು ಹಗುರವಾಗಿ ನಕ್ಕರು.

‘ಯುವಜನರ ತಪ್ಪುಗಳ ಬಗ್ಗೆಯೂ ಚಿತ್ರದಲ್ಲಿ ಹೇಳಲಾಗಿದೆ. ಅವರಿಗೆ ಉತ್ತಮ ಸಂದೇಶವೂ ಇದೆ’ ಎಂದರು.

ಮಂಜು ಹಾಸನ ನಿರ್ದೇಶನದ ‘ಕುಲ್ಫಿ’ ಚಿತ್ರ ಈ ವಾರ ತೆರೆ ಕಾಣುತ್ತಿದೆ. ಈ ಕುರಿತು ಮಾಹಿತಿ ಹಂಚಿಕೊಳ್ಳಲು ಚಿತ್ರತಂಡ ಸುದ್ದಿಗೋಷ್ಠಿ ಕರೆದಿತ್ತು. ಇದು ಅವರು ನಿರ್ದೇಶಿಸುತ್ತಿರುವ ಮೊದಲ ಚಿತ್ರ.

ADVERTISEMENT

ಮಂಜು ಅವರಿಗೆ ಎರಡು ವರ್ಷದ ಹಿಂದೆ ಗೆಳೆಯನಿಂದ ವಾಟ್ಸ್‌ಆ್ಯಪ್‌ ಸಂದೇಶವೊಂದು ಬಂದಿತ್ತು. ಇದನ್ನು ಆಧರಿಸಿ ‘ಕುಲ್ಫಿ’ ಚಿತ್ರದ ಕಥೆ ಹೆಣೆಯಲಾಗಿದೆಯಂತೆ. ಮದ್ಯದ ಅಂಗಡಿಯಲ್ಲಿ ಕೆಲಸ ಮಾಡುವ ಮೂವರು ಹುಡುಗರು ಕುಡಿದ ಮತ್ತಿನಲ್ಲಿ ತಪ್ಪು ಮಾಡುತ್ತಾರೆ. ಇದರಿಂದ ನೊಂದ ಕುಟುಂಬವೊಂದರ ಸದಸ್ಯರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಆ ಕುಟುಂಬದ ಸದಸ್ಯೆ ಇವರಿಗೆ ಕಿರುಕುಳ ನೀಡುವುದನ್ನೇ ಹಾರರ್‌, ಥ್ರಿಲ್ಲರ್‌ ಮೂಲಕ ತೋರಿಸಲು ನಿರ್ದೇಶಕರು ಮುಂದಾಗಿದ್ದಾರೆ.

‘ಚಿತ್ರಕ್ಕೆ ಭಿನ್ನವಾಗಿ ಶೀರ್ಷಿಕೆ ಇಡಲಾಗಿದೆ. ಕ್ಲೈಮ್ಯಾಕ್ಸ್‌ನಲ್ಲಿ ಶೀರ್ಷಿಕೆ ಹಿಂದಿರುವ ಕುತೂಹಲಕ್ಕೆ ತೆರೆಬೀಳಲಿದೆ. ಹೆಣ್ಣುಮಕ್ಕಳ ಬದುಕಿಗೆ ಬೆಲೆ ಕೊಡಬೇಕು ಎನ್ನುವುದನ್ನು ಚಿತ್ರ ಕಟ್ಟಿಕೊಡಲಿದೆ’ ಎಂದರು ಮಂಜು ಹಾಸನ.ಮಂಗಳೂರು ಮತ್ತು ಬೆಂಗಳೂರಿನ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ರಂಗಭೂಮಿ ಕಲಾವಿದರಾದ ಗಿರೀಶ್‍ ಗೌಡ, ದಿಲೀಪ್ ಹಾಗೂ ಮಂಗಳೂರಿನ ಲಾರೆನ್ಸ್ ಅವರಿಗೆ ಸಿನಿಮಾದಲ್ಲಿನ ನಟನೆ ಹೊಸ ಅನುಭವ ನೀಡಿದೆಯಂತೆ.

ಚಿತ್ರದ ಎರಡು ಹಾಡುಗಳಿಗೆ ಅಭಿಷೇಕ್ ಬಿ. ರಘುನಾಥ್ ಸಂಗೀತ ಸಂಯೋಜಿಸಿದ್ದಾರೆ. ನರಸಿಂಹಮೂರ್ತಿ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಎಸ್‌.ಡಿ. ಮುನಿಸ್ವಾಮಿ ಮತ್ತು ಎಸ್‌.ಡಿ. ಚೌಡಪ್ಪ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಎಂಬತ್ತಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆ ಕಾಣುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.