ನಟ ಕುಮಾರ್ ಗೋವಿಂದ್ ಅವರಿಗೆ ‘ಮೂಕನಾಯಕ’ ಚಿತ್ರದ ಅಭಿನಯಕ್ಕಾಗಿ ಅಮೆರಿಕದ ‘ಡಲ್ಲಾಸ್ ಆಕ್ಟಿಂಗ್ ಅಂತರಾಷ್ಟ್ರೀಯ ಚಿತ್ರೋತ್ಸವ’ದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ. ಈ ಚಿತ್ರೋತ್ಸವಕ್ಕೆ 2016ರ ನಂತರ ನಿರ್ಮಾಣಗೊಂಡ ಚಿತ್ರಗಳನ್ನು ಆಹ್ವಾನಿಸಲಾಗಿತ್ತು.
ಈ ಚಿತ್ರವನ್ನುಬರಗೂರು ರಾಮಚಂದ್ರಪ್ಪ ನಿರ್ದೇಶಿಸಿದ್ದರು. ಎಂ. ಬಾಲರಾಜ್ ಅವರು ನಿರ್ಮಿಸಿದ್ದರು.
‘ಮೂಕನಾಯಕ' ಚಿತ್ರವು ಮಾತುಬಾರದ ಚಿತ್ರಕಲಾವಿದನ ಬದುಕಿನ ಸುತ್ತ ಸಂಯೋಜಿಸಿದ ಕತೆ ಒಳಗೊಂಡಿದೆ. ಸಮಾಜದ ಆಗು ಹೋಗುಗಳನ್ನು ತನ್ನ ಚಿತ್ರಗಳ ಮೂಲಕ ಅಭಿವ್ಯಕ್ತಿಸುವ ಕಾಳಜಿಯ ಕಲಾವಿದನ ಪಾತ್ರವನ್ನು ಕುಮಾರ್ ಗೋವಿಂದ್ ನಿರ್ವಹಿಸಿದ್ದರು. ಕಲಾವಿದನ ಸಹೋದರಿ ಪಾತ್ರವನ್ನು ನಿರ್ವಹಿಸಿದ (ಸ್ಪರ್ಶ) ರೇಖಾ ಅವರು ರಾಜ್ಯ ಸರ್ಕಾರದ ಅತ್ಯುತ್ತಮ ಪೋಷಕನಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಬರಗೂರು ಚಿತ್ರಕತೆ, ಸಂಭಾಷಣೆ, ಗೀತರಚನೆಯ ಜೊತೆಗೆ ನಿರ್ದೇಶನ ಮಾಡಿದ `ಮೂಕ ನಾಯಕ’ ಚಿತ್ರವನ್ನು ‘ಸಮುದಾಯದತ್ತ ಸಿನಿಮಾ’ ಪರಿಕಲ್ಪನೆಯ ‘ಚಿತ್ರಯಾತ್ರೆ’ ಮೂಲಕ ರಾಜ್ಯದ ಅನೇಕ ಕಡೆ ಪ್ರದರ್ಶಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.