ADVERTISEMENT

ಕುರುಥಿ: ಚಿತ್ರ ಯಾವ ಬಗೆಯದ್ದು ಎಂಬುದಕ್ಕಿಂತ ವಿಷಯ ನನ್ನ ಆಯ್ಕೆ, ಪೃಥ್ವಿರಾಜ್‌‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಆಗಸ್ಟ್ 2021, 8:33 IST
Last Updated 8 ಆಗಸ್ಟ್ 2021, 8:33 IST
ಕುರುಥಿ ಚಿತ್ರದ ದೃಶ್ಯ
ಕುರುಥಿ ಚಿತ್ರದ ದೃಶ್ಯ   

ತಿರುವನಂತಪುರ: ಪೃಥ್ವಿರಾಜ್‌ ಸುಕುಮಾರನ್‌ ಅಭಿನಯದ ಮಲಯಾಳಂ ಥ್ರಿಲ್ಲರ್‌ ಸಿನಿಮಾ 'ಕುರುಥಿ' ಸಾಮಾಜಿಕ ತಾಣಗಳಲ್ಲಿ, ಒಟಿಟಿಯಲ್ಲಿ ಸದ್ದು ಮಾಡುತ್ತಿದೆ. 'ವೇಟ್ಟ ಮೃಗ್ರಂ' ಪವರ್‌ಫುಲ್‌ ಹಾಡು ಚಿತ್ರ ರಸಿಕರ ಎದೆಬಡಿತವನ್ನು ಹೆಚ್ಚಿಸಿದೆ.

ಮುಂಬೈ ಪೊಲೀಸ್‌, ಮೆಮೋರಿಸ್‌, ಕ್ಲಾಸ್‌ಮೇಟ್ಸ್‌ ಹೀಗೆ ಅತ್ಯದ್ಭುತ ಥ್ರಿಲ್ಲಿಂಗ್‌ ಸಿನಿಮಾಗಳ ಸಾಲಿಗೆ ಕುರುಥಿ ಚಿತ್ರವೂ ಸೇರ್ಪಡೆಗೊಳ್ಳಲಿದೆ ಎಂಬ ವಿಶ್ವಾಸ ಪೃಥ್ವಿರಾಜ್‌ ಅಭಿಮಾನಿಗಳದ್ದು. ಬಿಜು ಮೆನನ್‌ ಜೊತೆ ಅಯ್ಯಪ್ಪನುಂ ಕೋಶಿಯುಂ, ಸೂರಜ್‌ ವೆಂಜರಮೂಡು ಜೊತೆ ಡ್ರೈವಿಂಗ್‌ ಲೈಸೆನ್ಸ್‌ ಚಿತ್ರಗಳಲ್ಲಿ ಸಮಾನ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಜನಮೆಚ್ಚುಗೆ ಗಳಿಸಿದ್ದರು. ಎನ್ನುಂ ನಿಂಡೆ ಮೋಯಿದ್ದಿನ್‌, ಅನಾರ್ಕಲಿ ಎಂಬ ಪ್ರೇಮಕಥೆಗಳಲ್ಲಿ ಕಥಾಪಾತ್ರಕ್ಕೆ ಜೀವತುಂಬಿದ ಪೃಥ್ವಿರಾಜ್‌ ನಟನೆ ಅಭಿಮಾನಿಗಳ ಕಣ್ಣಲ್ಲಿ ಈಗಲೂ ಕಟ್ಟಿದಂತಿದೆ.

ಕಥೆಯೇ ನಾಯಕ, ನಟರು ಪಾತ್ರಗಳು ಎಂಬ ಸಾರದಲ್ಲೇ ಮುನ್ನಡೆಯುತ್ತಿರುವ ಮಲಯಾಳಂ ಸಿನಿಮಾದಲ್ಲಿ ಪೃಥ್ವಿರಾಜ್‌ ಒಂದರ ಹಿಂದೆ ಒಂದರಂತೆ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡು ರಂಜಿಸುತ್ತಿದ್ದಾರೆ.

ADVERTISEMENT

ಸಿನಿಮಾ ಆಯ್ಕೆ ಕುರಿತು ಮಾತನಾಡಿದ ಪೃಥ್ವಿರಾಜ್‌, ಸಿನಿಮಾ ಯಾವ ಬಗೆಯದ್ದು ಎಂಬುದಕ್ಕಿಂತ ಸಿನಿಮಾದ ವಿಷಯ, ಚಿತ್ರಕಥೆಯನ್ನು ತಿಳಿದು ಆಯ್ಕೆ ಮಾಡಿಕೊಳ್ಳುತ್ತೇನೆ ಎಂದು ಮಾಧ್ಯಮಕ್ಕೆ ತಿಳಿಸಿದ್ದಾರೆ. ಇದರ ಹಿಂದೆಯೇ, ಅವರ ಚಿತ್ರಗಳೇ ಈ ಮಾತನ್ನು ಹೇಳುತ್ತವೆ ಎಂಬುದು ಅಭಿಮಾನಿಗಳ ಕೂಗು ಕೇಳಿಸುತ್ತದೆ.

ಕುರುಥಿ ಎಂದರೆ ಬಲಿ ನೀಡುವವನು ಎಂಬರ್ಥವಿದೆ. ಮನುಷ್ಯ ಸಂಬಂಧಗಳಲ್ಲಿನ ದ್ವೇಷ ಮತ್ತು ಪೂರ್ವಗ್ರಹದ ಕುರಿತಾದ ಸಿನಿಮಾ ಇದಾಗಿದೆ ಎಂಬುದು ಟ್ರೈಲರ್‌ನಿಂದ ಅರ್ಥೈಸಿಕೊಳ್ಳಬಹುದಾಗಿದೆ. ಮನು ವಾರಿಯರ್‌ ನಿರ್ದೇಶನದ ಚಿತ್ರ ಇದಾಗಿದ್ದು, ಅನಿಶ್‌ ಪಾಳ್ಯಲ್‌ ಅವರ ಚಿತ್ರಕಥೆ ಇದೆ.

ಒಳ್ಳೆಯ ಸಿನಿಮಾ, ಕೆಟ್ಟ ಸಿನಿಮಾ ಎಂಬುದಿಲ್ಲ. ಒಬ್ಬ ಪಾತ್ರಧಾರಿ ಸಿನಿಮಾವನ್ನು ವಿನ್ಯಾಸ ಮಾಡಲು ಸಾಧ್ಯವಿಲ್ಲ. ಕಥೆಯನ್ನು ಹೇಳುವ ಬಗೆ ಮತ್ತು ನಿರ್ದೇಶಕ ಪಾತ್ರದಾರಿಗಳ ಮೂಲಕ ಕಥೆಯನ್ನು ಹೇಗೆ ಹೇಳಿಸಬೇಕು ಎಂದು ಎಷ್ಟು ಚೆನ್ನಾಗಿ ತಿಳಿದಿದ್ದಾರೆ ಎಂಬುದರ ಮೇಲೆ ನಿರ್ಧಾರಿತವಾಗುತ್ತದೆ ಎಂದು ಪೃಥ್ವಿರಾಜ್‌ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಕುರುಥಿ ಚಿತ್ರದಲ್ಲಿ ರೋಷನ್‌ ಮ್ಯಾಥ್ಯೂ, ಮಮ್ಮುಕ್ಕೊಯಾ, ಶೈನ್‌ ಟಾಮ್‌ ಚಾಕೊ, ಮುರಳಿ ಗೋಪಿ ಮುಂತಾದವರು ಕಾಣಿಸಿಕೊಂಡಿದ್ದಾರೆ. ಆಗಸ್ಟ್‌ 11ಕ್ಕೆ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.