ADVERTISEMENT

‘ಝಾನ್ಸಿ’ಯಾಗಿ ಮರಳಿದ ಲಕ್ಷ್ಮಿ ರೈ

ಕೆ.ಎಂ.ಸಂತೋಷ್‌ ಕುಮಾರ್‌
Published 15 ಆಗಸ್ಟ್ 2019, 19:30 IST
Last Updated 15 ಆಗಸ್ಟ್ 2019, 19:30 IST
ಲಕ್ಷ್ಮಿ ರೈ
ಲಕ್ಷ್ಮಿ ರೈ   

ಕನ್ನಡ ಮೂಲದ ಬಹುಭಾಷಾ ನಟಿ ಲಕ್ಷ್ಮಿ ರೈನಟಿ ಅನುರೂಪ ಚೆಲುವು ಮತ್ತು ಚತುರ ಅಭಿನಯದಿಂದಸಿನಿಪ್ರಿಯರ ಮನಸ್ಸು ಗೆದ್ದವರು. ‘ಹ್ಯಾಟ್ರಿಕ್‌ ಹೀರೊ’ ಶಿವರಾಜ್‌ಕುಮಾರ್‌ ಜತೆಗೆ ತೆರೆ ಹಂಚಿಕೊಳ್ಳುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದವರು ಈ ನಟಿ. ತೆಲುಗು, ತಮಿಳು ಹಾಗೂ ಹಿಂದಿ ಚಿತ್ರರಂಗದಲ್ಲಿ ಛಾಪು ಮೂಡಿಸಿದ್ದಾರೆ. ಏಳು ವರ್ಷಗಳಿಂದ ಕನ್ನಡ ಚಿತ್ರರಂಗದಿಂದ ದೂರವೇ ಉಳಿದಿದ್ದ ರೈ, ಆ್ಯಕ್ಷನ್‌ ಮತ್ತು ನಾಯಕಿ ಪ್ರಧಾನ ‘ಝಾನ್ಸಿ’ ಸಿನಿಮಾ ಮೂಲಕ ಕನ್ನಡಕ್ಕೆ ಮರಳಿ ಬಂದಿದ್ದಾರೆ. ಈ ನಡುವೆ ಅವರ ‘ಬಿಕನಿ ಬಾಡಿ’ಯ ಹೊಸ ಲುಕ್‌ ಸಾಮಾಜಿಕ ಜಾಲತಾಣದಲ್ಲೂ ಸಾಕಷ್ಟು ಸದ್ದು ಮಾಡುತ್ತಿದೆ. ಫಿಟ್‌ನೆಸ್‌ ಪ್ರಿಯರಿಗೂ ಅವರ ಈ ಹೊಸ ರೂಪ ಪ್ರೇರಣೆಯಾಗುತ್ತಿದೆ. ಈ ಹೊತ್ತಿನಲ್ಲಿ ಅವರು ತಮ್ಮ ಸಿನಿ ಬದುಕಿನ ಬಗ್ಗೆ ಹಲವು ಸಂಗತಿಗಳನ್ನು ಸಿನಿಮಾ ಪುರವಣಿ ಜತೆಗೆ ಹಂಚಿಕೊಂಡಿದ್ದಾರೆ.

ಮೊದಲ ಬಾರಿಗೆ ಆ್ಯಕ್ಷನ್‌ ಸಿನಿಮಾದಲ್ಲಿ ನಟಿಸುತ್ತಿದ್ದೇನೆ.ಪಿ.ವಿ.ಎಸ್. ಗುರುಪ್ರಸಾದ್ ನಿರ್ದೇಶಿಸಿರುವ ‘ಝಾನ್ಸಿ’ಯಲ್ಲಿ ರೌಡಿ, ಪೊಲೀಸ್‌ ಅಧಿಕಾರಿ, ಸಾಮಾನ್ಯ ಹುಡುಗಿ, ಗ್ಲಾಮರ್‌ ಹುಡುಗಿ ಹೀಗೆ ಒಂದೊಂದು ಕುತೂಹಲದ ಲುಕ್‌ ಇರಲಿದೆ. ನನ್ನದು ದ್ವಿಪಾತ್ರವೋ,ತ್ರಿಪಾತ್ರವೋ ಎನ್ನುವುದನ್ನು ಸಿನಿಮಾದಲ್ಲೇ ನೋಡಬೇಕು. ತನಗಾದ ಅನ್ಯಾಯದ ವಿರುದ್ಧ ಸೆಟೆದು ನಿಲ್ಲುವ ಕಥೆ ಝಾನ್ಸಿಯದ್ದು. ಒಂದು ಸಣ್ಣ ಪ್ರೇಮ ಕಥನವೂ ಇದೆ. ಹಾಗೆ ನೋಡಿದರೆ, ಈ ಚಿತ್ರಕ್ಕೆ ಸಾಕಷ್ಟು ತಯಾರಿ ಮಾಡಿಕೊಳ್ಳಲು ನನಗೆ ಹೆಚ್ಚಿನ ಸಮಯಾವಕಾಶವೇ ಸಿಗಲಿಲ್ಲ. ಹಿಂದಿಯ ಚಿತ್ರವೊಂದರಲ್ಲಿ ತೊಡಗಿಕೊಂಡಿದ್ದಾಗಲೇ ಬಿಡುವಿನಲ್ಲಿ ನಟಿಸಿದ್ದೇನೆ. ಈ ಸಿನಿಮಾದ ಕಥೆ ಕೇಳಿದಾಗ ಸ್ವಲ್ಪ ಭಯ ಮತ್ತು ಅಂಜಿಕೆಯಲ್ಲೇ ಒಪ್ಪಿಕೊಂಡಿದ್ದೆ ಎನ್ನುವ ಮಾತು ಸೇರಿಸಿದರು ರೈ.

ಆ್ಯಕ್ಷ‌ನ್‌ ದೃಶ್ಯಗಳನ್ನುವಾಸ್ತವಕ್ಕೆ ಹತ್ತಿರವಾಗಿಸುವುದು, ಅದರಲ್ಲೂ ಒಬ್ಬ ನಾಯಕಿಯಾದವಳಿಗೆ ಒಂದುಸವಾಲೇ ಸರಿ. ಪ್ರತಿ ಫೈಟ್‌, ಸ್ಟಂಟ್‌ಗಳನ್ನು ಮಾಡುವಾಗ ಆ ಸವಾಲನ್ನುಸುಲಭಗೊಳಿಸಿದವರುಸಾಹಸ ನಿರ್ದೇಶಕ ಥ್ರಿಲ್ಲರ್‌ ಮಂಜು. ಅವರು ನೀಡಿದ ತರಬೇತಿ, ಟಿಪ್ಸ್‌ ಯಾವತ್ತೂ ಮರೆಯುವಂತಿಲ್ಲ ಎನ್ನುವ ಮಾತು ಹೇಳಲು ಅವರು ಮರೆಯಲಿಲ್ಲ.

ADVERTISEMENT

ಆ್ಯಕ್ಷನ್‌ ಸಿನಿಮಾ ಮಾಡಲು ಸಾಕಷ್ಟು ಸಿದ್ಧತೆ ಬೇಕು. ಅದರಲ್ಲೂ ಹೆಣ್ಣುಮಗಳೊಬ್ಬಳು ಪೂರ್ವ ಸಿದ್ಧತೆ ಇಲ್ಲದೆ ಆ್ಯಕ್ಷನ್‌ ಸಿನಿಮಾ ಮಾಡಿದರೆ ಕಾಮಿಡಿಯಾಗುವುದೇ ಹೆಚ್ಚು. ‘ಝಾನ್ಸಿ’ಯ ಪಾತ್ರಕ್ಕೆ ಜೀವ ತುಂಬಲು ಮಾರ್ಷಲ್‌ ಆರ್ಟ್ ಕೂಡ ಕಲಿತೆ ಎನ್ನುತ್ತಾರೆ ಅವರು. ಒಂದು ಕೈಯಲ್ಲಿ ಬೈಕ್‌ ರೈಡಿಂಗ್‌, ಮತ್ತೊಂದು ಕೈಯಲ್ಲಿ ರಿವಾಲ್ವರ್‌ ಹಿಡಿದು ಶತ್ರುವಿನ ಗುಂಡಿಗೆ ಸೀಳುವ ದೃಶ್ಯಗಳಲ್ಲಿ ಮಿಂಚಿರುವ ರೈ, ಬೈಕ್‌ ರೈಡಿಂಗ್‌ ಮೋಹ ತೀರಿಸಿಕೊಂಡಿದ್ದಾರೆ.

ತಮ್ಮ ಮುಂದಿರುವ ಹೊಸ ಸಿನಿಮಾಗಳ ಬಗ್ಗೆ ಕೇಳಿದಾಗ, ‘ತಮಿಳಿನಲ್ಲಿ ಫ್ಯಾಂಟಸಿ ಕಥೆಯ ‘ಸಿಂಡ್ರೆಲಾ’ ಮತ್ತು ಥ್ರಿಲ್ಲರ್‌ ಕಥೆಯ ‘ಮಿರುಗಾ’, ತೆಲುಗಿನಲ್ಲಿ ‘ಆನಂದ ಭೈರವಿ’ ಹಾಗೂ ಹಿಂದಿಯಲ್ಲಿ ಒಂದು ಹೊಸ ಸಿನಿಮಾಗಳಲ್ಲಿ ನಟಿಸುತ್ತಿದ್ದೇನೆ. ಅಲ್ಲದೆ, ವೆಬ್‌ ಸರಣಿಗಳಲ್ಲೂ ತೊಡಗಿಸಿಕೊಂಡಿದ್ದೇನೆ’ ಎಂದರು.

ಈಗನೆಟ್‌ಫ್ಲಿಕ್ಸ್‌, ಅಮೆಜಾನ್‌ನಂತಹ ಹಲವುಡಿಜಿಟಲ್‌ ಫ್ಲಾಟ್‌ ಫಾರಂಗಳ ಮಾರುಕಟ್ಟೆ ವಿಸ್ತಾರವಾಗುತ್ತಿದೆ. ನಾವು ಸಿನಿಮಾ, ಧಾರಾವಾಹಿಗಳನ್ನು ಚಿತ್ರಮಂದಿರ, ಟಿ.ವಿಗಳಿಗಾಗಿ ಮಾತ್ರ ಮಾಡುವ ಕಾಲ ಹೋಗುತ್ತಿದೆ. ಡಿಜಿಟಲ್‌ ಮಿಡಿಯಾಗಳಲ್ಲೂ ಹೆಚ್ಚು ವೀಕ್ಷಕರು ಹುಟ್ಟಿಕೊಳ್ಳುತ್ತಿದ್ದಾರೆ. ಪ್ರತಿ ಸಿನಿಮಾ ಮಾಡುವಾಗ ಸಂಭಾಷಣೆ ಜತೆಗೆ ಹೆಚ್ಚು ಜನರನ್ನು ತಲುಪುವ ಭಾಷೆಗಳಲ್ಲಿ ಸಬ್‌ ಟೈಟಲ್‌ ನೀಡುವಂತೆಯೂ ಸಿನಿಮಾ ನಿರ್ಮಾಪಕರಿಗೆಸಲಹೆ ಕೊಡುತ್ತಿದ್ದೇನೆ. ಕನ್ನಡದಲ್ಲಿ ಹೆಚ್ಚು ಸಿನಿಮಾಗಳು ತಯಾರಾಗುತ್ತಿರಬಹುದು. ಸಬ್‌ ಟೈಟಲ್ ಕೊರತೆ ಇದೆ. ಈ ಕೊರತೆ ನೀಗಿದರೆ, ಕನ್ನಡ ಚಿತ್ರಗಳು ವಿಶ್ವದ ಮೂಲೆ ಮೂಲೆಗೆ ತಲುಪುತ್ತವೆ ಎನ್ನುವ ಅವರು, ಕನ್ನಡ ಚಿತ್ರಗಳು ಕಂಡುಕೊಳ್ಳಬೇಕಿರುವ ಕಡೆಗೂ ಬೊಟ್ಟು ಮಾಡುತ್ತಾರೆ.

ತಮ್ಮ ಮಾದಕ ಮೈಮಾಟದ ‘ಬಿಕನಿ ಬಾಡಿ’ಯ ಬಗ್ಗೆಯೂ ಮುಕ್ತವಾಗಿ ಮಾತನಾಡಿದ ರೈ, ‘ನನ್ನ ದೇಹದ ತೂಕ 75 ಕೆ.ಜಿಗೆ ಏರಿಕೆಯಾಗಿತ್ತು. ಕೆಲಸದ ಒತ್ತಡದಲ್ಲಿ ನಾನು ಹೇಗಾಗಿದ್ದೇನೆ ಎನ್ನುವುದನ್ನೇ ಮರೆತಿದ್ದೆ. ವರ್ಷದ ಹಿಂದೆ ನನ್ನ ಜೀವನಶೈಲಿ ಬದಲಿಸಿಕೊಂಡೆ.ಈಗ 58 ಕೆ.ಜಿ.ಗೆ ತೂಕ ಇಳಿಸಿದ್ದೇನೆ. ಮೈಮಾಟ ತೋರಿಸಲು ಆ ಚಿತ್ರಗಳನ್ನು ಹಾಕಿಲ್ಲ. ನಾನು ಹೇಗೆ ಹೊಸ ಲುಕ್ ಪಡೆದೆ, ಹೊಸ ವ್ಯಕ್ತಿಯಾದೆ ಎನ್ನುವುದು ಬೇರೆಯವರಿಗೂ ಪ್ರೇರಣೆಯಾಗಲಿದೆ ಎಂಬ ಉದ್ದೇಶದಿಂದ’ ಎಂದು ಹೆಮ್ಮೆಯಿಂದ ಹೇಳಿಕೊಂಡರು.

ಕನ್ನಡ ಚಿತ್ರರಂಗದಿಂದ ದೂರವಿದ್ದ ಬಗ್ಗೆ ಮಾತು ಹೊರಳಿದಾಗ, ‘ಚಿತ್ರರಂಗವೆಂದರೆ ನನ್ನ ದೃಷ್ಟಿಯಲ್ಲಿ ಭಾರತೀಯ ಚಿತ್ರರಂಗ ಅಷ್ಟೇ. ಕಲಾವಿದರಿಗೆ ಭಾಷೆ, ಗಡಿಯ ಹಂಗು ಇರಬಾರದು. ಹಾಗಂತ ನಾವು ಮಾತೃಭಾಷೆಯನ್ನೂಮರೆಯಬಾರದು. ಕನ್ನಡದ ಪ್ರತಿಭೆಗಳು ಸೀಮೋಲ್ಲಂಘನೆ ಮಾಡಿದರೆ ಅದು ಹೆಮ್ಮೆಯ ವಿಚಾರ ಅಲ್ಲವೇ?’ ಎಂದರು.

ಕನ್ನಡದ ಚಿತ್ರಗಳು ಸಾಗರಾದಾಚೆಯೂ ಹೋಗಿ ಪ್ರೇಕ್ಷಕರನ್ನು ಮುಟ್ಟಬೇಕು. ಕನ್ನಡದ ಕೆಜಿಎಫ್‌ ಸಿನಿಮಾ ಹಿಂದಿಯಲ್ಲಿ ಬಿಡುಗಡೆಯಾದಾಗ ನಾನು ತುಂಬಾ ಖುಷಿಪಟ್ಟೆ. ಕನ್ನಡದಲ್ಲೂ ಇಷ್ಟೊಂದು ಚೆನ್ನಾಗಿ ಸಿನಿಮಾ ಮಾಡುತ್ತಾರಾ ಎಂದು ಇಡೀ ಚಿತ್ರರಂಗ ಕಣ್ಣರಳಿಸಿ ನೋಡಿತು. ನಮ್ಮ ಸಾಧ್ಯತೆಗಳೇನಿವೆ ಎನ್ನುವುದನ್ನು ಆ ಚಿತ್ರ ತೋರಿಸಿಕೊಟ್ಟಿದೆ ಎನ್ನುವ ಮಾತು ಸೇರಿಸಿದರು.

ಮದುವೆ ಯೋಚನೆ ಯಾವಾಗ ಎಂದು ಕೇಳಿದರೆ, ‘ಸದ್ಯಕ್ಕೆ ಆ ಆಲೋಚನೆ ಇಲ್ಲ. ಗಂಡ, ಮಕ್ಕಳು, ಸಂಸಾರದ ಬಗ್ಗೆ ಆಸಕ್ತಿ ಬಂದಾಗಷ್ಟೇ ಆಗಬೇಕು. ಮದುವೆಗೂ ಮೀರಿದ ಜವಾಬ್ದಾರಿಗಳು, ವೃತ್ತಿ ಬದುಕಿನ ಸಾಧನೆಯ ಗುರಿಗಳು ಇರುವಾಗ ಮದುವೆಯ ಕಡೆಗೆ ಮನಸು ಹೊರಳುವುದಿಲ್ಲ. ಮೆಟ್ರೊ ಹುಡುಗಿಯರ ಬದುಕಿನ ಆಲೋಚನೆಗಳೇ ಬೇರೆ ಇರುತ್ತವೆ. ನಾನು ಇವತ್ತಿಗೂ ನನ್ನ ಅಪ್ಪನಿಂದ ಒಂದು ಪೈಸೆಯನ್ನು ಕೇಳುವುದಿಲ್ಲ. ಆ ಬಗ್ಗೆಯೂ ಹೆಮ್ಮೆ ಇದೆ. ಪ್ರತಿ ಹೆಣ್ಣುಮಕ್ಕಳು ಸ್ವಾವಲಂಬಿಗಳಾಗಬೇಕು’ ಎಂದರು ಲಕ್ಷ್ಮಿ ರೈ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.