‘ಕಾಲ್ ಕೇಜಿ ಪ್ರೀತಿ’ ಮತ್ತು ‘ಪಂಚತಂತ್ರ’ ಚಿತ್ರಗಳಲ್ಲಿ ಲವರ್‌ಬಾಯ್ ಆಗಿದ್ದ ವಿಹಾನ್ ಗೌಡ ‘ಲೆಗಸಿ’ ಚಿತ್ರದ ಮೂಲಕ ಬರಹಗಾರನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಗ್ರೇಟ್ ಬ್ರೋಸ್ ಪಿಕ್ಚರ್ಸ್ ಲಾಂಛನದಡಿ ನಿರ್ಮಾಣವಾಗುತ್ತಿರುವ ಚಿತ್ರ ಇದು. ಇದರ ಫಸ್ಟ್‌ಲುಕ್ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಈ ಸಿನಿಮಾದ ಮೂಲಕ ಹೊಸ ಇಮೇಜ್ ಸೃಷ್ಟಿಸಿಕೊಳ್ಳುವ ಹಾದಿಯಲ್ಲಿದ್ದಾರೆ ವಿಹಾನ್.
ಮೋಷನ್ ಪೋಸ್ಟರ್ ಕುತೂಹಲ ಹುಟ್ಟಿಸುತ್ತದೆ. ದೊಡ್ಡ ಬಂಗಲೆಯೊಂದರ ಮುಂದೆ ಕೈಲಿ ಗನ್ನು, ಆಯುಧ, ತೋಳಿನಿಂದ ಇಳಿಯುವ ರಕ್ತ, ಡಾನ್ ಥರಾ ಕುಳಿತಿರುವ ಭಂಗಿಯಲ್ಲಿ ಅವರು ಕಾಣಿಸಿಕೊಂಡಿದ್ದಾರೆ.
1990ರಿಂದ 2019ರವರೆಗೆ ನಡೆಯುವ ಬರಹಗಾರನೊಬ್ಬನ ಜೀವನ ಹಾಗೂ ಆತ ಮುಂದಿನ ಪೀಳಿಗೆ ಸಮಾಜವನ್ನು ಹೇಗೆ ಎದುರಿಸುತ್ತದೆ ಎನ್ನುವುದೇ ಕಥೆಯ ಸಾರಾಂಶ.ಪ್ರೀತಿಯ ಜೊತೆಗೆ ತಂದೆ-ಮಗನ ಸೆಂಟಿಮೆಂಟ್ ಕೂಡ ಇದೆಯಂತೆ.
ಇದನ್ನು ಆ್ಯಕ್ಷನ್ ಮತ್ತು ಥ್ರಿಲ್ಲರ್ ಮೂಲಕ ಹೇಳಲು ಹೊರಟಿದ್ದಾರೆ ನಿರ್ದೇಶಕ ಎಂ. ಸುಭಾಷ್ ಚಂದ್ರ.ದರ್ಶನ್ ನಟನೆಯ ‘ಮನಿರತ್ನ ಕುರುಕ್ಷೇತ್ರ’ ಸಿನಿಮಾಕ್ಕೆ ಸಹ ನಿರ್ದೇಶಕರಾಗಿದ್ದ ಅವರು ಇದರ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕರಾಗುತ್ತಿರುವ ಖುಷಿಯಲ್ಲಿದ್ದಾರೆ.
ತಂದೆಯ ಪಾತ್ರಕ್ಕೆ ಯಾರು ಬಣ್ಣ ಹಚ್ಚಲಿದ್ದಾರೆ ಎಂಬುದು ಇನ್ನೂ ಅಧಿಕೃತಗೊಂಡಿಲ್ಲ. ಬೆಂಗಳೂರು, ಮದ್ದೂರು, ದೊಡ್ಡಬಳ್ಳಾಪುರ, ಮಡಿಕೇರಿ ಹಾಗೂ ರಾಮನಗರದ ಸುತ್ತಮುತ್ತ ಶೂಟಿಂಗ್ ನಡೆಸಿದೆ.
ಸುರೇಶ್ ರಾಜ್ ಸಂಗೀತ ನೀಡಿದ್ದಾರೆ. ಸುಂದರ್ ಪಿ. ಅವರ ಛಾಯಾಗ್ರಹಣವಿದೆ. ಶಿವ-ಪ್ರೇಮ್ ಸಾಹಸ ನಿರ್ದೇಶಿಸಿದ್ದಾರೆ. ಸುನಿಲ್ ಎಸ್.ಎಲ್.ಆರ್. ಅವರ ಸಂಕಲನವಿದೆ. ಜಯಂತ ಕಾಯ್ಕಿಣಿ ಮತ್ತು ವಿ. ನಾಗೇಂದ್ರಪ್ರಸಾದ್ ಸಾಹಿತ್ಯ ರಚಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.