ಖ್ಯಾತ ಸ್ವರ ಸಂಯೋಜಕ ಇಳಯರಾಜಾ ಹಾಗೂ ಎಸ್‌ಪಿಬಿ ನಡುವಿನ ಅಪೂರ್ವ ಸ್ನೇಹದ ಕಥೆಯನ್ನು ಸಂಗೀತ ಲೋಕದಲ್ಲಂತೂ ಯಾರೂ ಮರೆಯುವ ಹಾಗೇ ಇಲ್ಲ. ಮೂರು ವರ್ಷಗಳ ಹಿಂದೆ ರಾಯಲ್ಟಿಗೆ ಸಂಬಂಧಿಸಿದಂತೆ ಸಣ್ಣ ಘರ್ಷಣೆಯನ್ನು ಬಿಟ್ಟರೆ ಈ ಮೈತ್ರಿ ಗಟ್ಟಿಯಾಗೇ ನಿಂತಿತ್ತು. ಕೊರೊನಾ ಸೋಂಕಿನಿಂದ ಎಸ್‌ಪಿಬಿ ಕಳೆದ ಆಗಸ್ಟ್‌ನಲ್ಲಿ ಆಸ್ಪತ್ರೆಯನ್ನು ಸೇರಿದಾಗ ವಿಡಿಯೊ ಒಂದನ್ನು ಪೋಸ್ಟ್ ಮಾಡಿದ್ದ ಇಳಯರಾಜಾ ಕೊರೊನಾ ಗೆದ್ದು ಬರುವಂತೆ ಕಣ್ಣೀರುತುಂಬಿ ಹಾರೈಸಿದ್ದರು.
ಸಿನಿಮಾಗಳಿಗೆ ಸ್ವರ ಸಂಯೋಜನೆ ಮಾಡಲು ಅವಕಾಶಗಳು ಸಿಗುವುದಕ್ಕಿಂತ ಮುನ್ನ ಇಬ್ಬರೂ ಲೈವ್ ಕನ್ಸರ್ಟ್ ಕೊಡುತ್ತಿದ್ದುದನ್ನು ಇಳಯರಾಜಾ ನೆನಪಿಸಿಕೊಂಡಿದ್ದಾರೆ. ಎಂಜಿನಿಯರಿಂಗ್ ಮುಗಿಸಿಕೊಂಡು ಚೆನ್ನೈಗೆ ತೆರಳಿದ್ದ ಎಸ್‌ಪಿಬಿ ಸ್ಟೇಜ್ ಮೇಲೆ ಹಾಡುತ್ತಿದ್ದರೆ, ಇಳಯರಾಜಾ ಹಾಗೂ ಅವರ ಸಹೋದರ ಆರ್ಕೆಸ್ಟ್ರಾ ಒದಗಿಸುತ್ತಿದ್ದರು. ಇಬ್ಬರ ಕುಟುಂಬಗಳ ಮಧ್ಯೆಯೂ ಉತ್ತಮ ಸ್ನೇಹವಿತ್ತು.
ದೊಡ್ಡ ದೊಡ್ಡ ಸ್ಟೇಜ್ ಕಾರ್ಯಕ್ರಮಗಳಲ್ಲಿ ಹಾಡುವ ಗಾಯಕರು ಸ್ವರ ಸಂಯೋಜಕರಿಗೆ ರಾಯಲ್ಟಿ ಕೊಡುವಂತೆ ಒತ್ತಾಯಿಸಿದ ಇಳಯರಾಜಾ, ಜಾಗತಿಕ ಮ್ಯೂಸಿಕ್ ಪ್ರವಾಸದಲ್ಲಿದ್ದ ಎಸ್‌ಪಿಬಿಗೆ ರಾಯಲ್ಟಿಗಾಗಿ ಲೀಗಲ್ ನೋಟಿಸ್ ನೀಡಿದ್ದರು. ಇದರಿಂದ ನೊಂದ ಎಸ್‌ಪಿಬಿ ಸ್ಟೇಜ್‌ನಲ್ಲಿ ಇಳಯರಾಜಾ ಅವರ ಹಾಡುಗಳನ್ನು ಹಾಡದಿರಲು ನಿರ್ಧರಿಸಿದರಲ್ಲದೇ ನಂತರ ಅವರಿಗೆ ರಾಯಲ್ಟಿ ನೀಡುವಂತೆ ಆಯೋಜಕರಿಗೆ ತಿಳಿಸಿದ್ದರು. ಆದರೆ ಒಂದು ಸಮಾರಂಭದಲ್ಲೇ ಈ ಮನಸ್ತಾಪಕ್ಕೆ ಇಬ್ಬರೂ ಗೆಳೆಯರು ಇತಿಶ್ರೀ ಹಾಡಿ ಎಂದಿನ ಸ್ನೇಹ ಮುಂದುವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.