ADVERTISEMENT

ಸಿನಿಮಾದತ್ತಲೇ ಲಿಯೋನಿಲ್ಲಾ ಚಿತ್ತ

​ಪ್ರಜಾವಾಣಿ ವಾರ್ತೆ
Published 19 ಜುಲೈ 2024, 0:40 IST
Last Updated 19 ಜುಲೈ 2024, 0:40 IST
ಲಿಯೋನಿಲ್ಲಾ 
ಲಿಯೋನಿಲ್ಲಾ    

ಕರಾವಳಿಯಿಂದ ಹಲವು ಕಲಾವಿದರು ಚಂದನವನಕ್ಕೆ ಹೆಜ್ಜೆ ಇಟ್ಟಿದ್ದಾರೆ. ಈ ಪೈಕಿ ‘ಖಾಸಗಿ ಪುಟಗಳು’ ಸಿನಿಮಾ ಮೂಲಕ ನಾಯಕಿಯಾಗಿದ ಲಿಯೋನಿಲ್ಲಾ ಶ್ವೇತಾ ಡಿಸೋಜಾ ಅವರೂ ಒಬ್ಬರು. ಅವರ ಕೈಯಲ್ಲಿ ಇದೀಗ ನಾಲ್ಕು ಸಿನಿಮಾಗಳಿವೆ. ಈ ಪೈಕಿ ‘ಪ್ಯಾರಲಲ್‌ ಲೈಫ್‌’ ಎಂಬ ಭಿನ್ನವಾದ ಜಾನರ್‌ನ ಹರ್ಷಪ್ರಿಯ ನಿರ್ದೇಶನದ ‘ಹೆಜ್ಜಾರು’ ಜುಲೈ 19ರಂದು ತೆರೆಕಾಣುತ್ತಿದೆ. ಈ ಹೊಸ್ತಿಲಲ್ಲಿ ಲಿಯೋನಿಲ್ಲಾ ಜೊತೆಗೊಂದು ಮಾತುಕತೆ.

‘ನಾನು ದಕ್ಷಿಣ ಕನ್ನಡದ ಬಜ್ಪೆ ಸಮೀಪದವಳು. ಮಂಗಳೂರಿನಲ್ಲೇ ಪದವಿಪೂರ್ವ ಶಿಕ್ಷಣ ಪೂರ್ಣಗೊಳಿಸಿ, ಎಂಜಿನಿಯರಿಂಗ್‌ ವಿದ್ಯಾಭ್ಯಾಸಕ್ಕೆ ರಾಜಧಾನಿಗೆ ಕಾಲಿಟ್ಟೆ. ಎಂಜಿನಿಯರಿಂಗ್‌ ಬಳಿಕ ಆ್ಯಕ್ಸೆಂಚರ್‌ ಕಂಪನಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್‌ ಆಗಿ ಕೆಲಸ ಮಾಡಿದೆ. ಕಿರುಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಾನು ‘Y’ ಎಂಬ ಹಿಂದಿ ಸಿನಿಮಾದಲ್ಲಿ ಅಭಿನಯಿಸಿದೆ.  ಇದು ನನ್ನ ಮೊದಲ ಸಿನಿಮಾ’ ಎಂದು ಮಾತು ಆರಂಭಿಸಿದರು ಲಿಯೋನಿಲ್ಲಾ. 

‘ನಟನೆ, ಸಿನಿಮಾದ ಯಾವ ಹಿನ್ನೆಲೆಯೂ ನನಗಿಲ್ಲ. ನಟಿಯಾಗಬೇಕು ಎನ್ನುವ ಕನಸೂ ಇರಲಿಲ್ಲ. ಆರಂಭದಲ್ಲಿ ಸಿನಿಮಾ ಮಾಡುತ್ತಾ ಐ.ಟಿ. ಕೆಲಸವನ್ನೂ ಮಾಡುತ್ತಿದ್ದೆ. ರಜೆ ಹಾಕಿ ಶೂಟಿಂಗ್‌ನಲ್ಲಿ ಭಾಗವಹಿಸುತ್ತಿದ್ದೆ. ಇದೀಗ ಪೂರ್ಣಪ್ರಮಾಣದಲ್ಲಿ ಸಿನಿಮಾದತ್ತಲೇ ನನ್ನ ಚಿತ್ತವಿದೆ. ‘ಖಾಸಗಿ ಪುಟಗಳು’ ಶೂಟಿಂಗ್‌ ಬಳಿಕ ಸಣ್ಣದೊಂದು ಬ್ರೇಕ್‌ ತೆಗೆದುಕೊಂಡಿದ್ದೆ. ಇದೀಗ ರಾಮ್‌ ಜಿ ಬ್ಯಾನರ್‌ನಡಿ ತಯಾರಾಗಿರುವ ‘ಹೆಜ್ಜಾರು’ ಬಿಡುಗಡೆಗೆ ಸಜ್ಜಾಗಿದೆ. ಇದೊಂದು ಭಿನ್ನವಾದ ಕಂಟೆಂಟ್‌ ಇರುವ ಸಿನಿಮಾ. ‘ರಾಜಾರಾಮ್‌’ ಮತ್ತು ‘ಭಗತ್‌’ ಎಂಬ ಇಬ್ಬರ ನಡುವಿನ ಕಥೆಯಿದು. ರಾಜಾರಾಮ್‌ ಜೀವನದಲ್ಲಿ ನಡೆದ ಘಟನೆ ಭಗತ್‌ ಜೀವನದಲ್ಲೂ ಕೆಲ ವರ್ಷಗಳ ಬಳಿಕ ಪ್ಯಾರಲಲ್‌ ಆಗಿ ನಡೆಯುತ್ತಿರುತ್ತದೆ. ಈ ಪ್ರಶ್ನೆಯನ್ನು ಹುಡುಕುತ್ತಾ ಭಗತ್‌ ಜೀವನದ ಹಿಂದೆ ರಾಜಾರಾಮ್‌ ಬೀಳುತ್ತಾರೆ. ಇದುವೇ ಚಿತ್ರದ ಕಥೆ. ನಾನು ಈ ಸಿನಿಮಾದಲ್ಲಿ ‘ಜಾನಕಿ’ ಎಂಬ ಪಾತ್ರದಲ್ಲಿ ನಟಿಸಿದ್ದೇನೆ. ಈಕೆ ಭಗತ್‌ ಪ್ರೇಯಸಿ. ಮಧ್ಯಮ ವರ್ಗದ ಹುಡುಗಿ, (ನ್ಯಾಚುರಲ್‌ ರಾ ಪಾತ್ರ ಈಕೆ.) ಕಥೆಯಲ್ಲಿ ‘ಜಾನಕಿ’ಗೆ ಆಕೆಯದ್ದೇ ಆದ ಪ್ರಾಮುಖ್ಯತೆ ಇದೆ’ ಎಂದು ತಮ್ಮ ಪಾತ್ರವನ್ನು ವಿವರಿಸಿದರು. 

ADVERTISEMENT

‘ಸುದೀಪ್‌ ಅವರು ಟ್ರೇಲರ್‌ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದು ಆತ್ಮವಿಶ್ವಾಸ ಹೆಚ್ಚಿಸಿದೆ. ಕನ್ನಡ ಸಿನಿಮಾದ ಇತಿಹಾಸದಲ್ಲಿ ‘ಹೆಜ್ಜಾರು’ ರೀತಿಯ ಕಥೆಯುಳ್ಳ ಸಿನಿಮಾ ಬಂದಿಲ್ಲ’ ಎನ್ನುತ್ತಾರೆ ಲಿಯೋನಿಲ್ಲಾ. 

‘ಸಿನಿಮಾ ಆಯ್ಕೆ ವಿಚಾರದಲ್ಲಿ ನಾನೊಂದಿಷ್ಟು ಬೌಂಡರಿಗಳನ್ನು ಹಾಕಿಕೊಂಡಿದ್ದೇನೆ. ‘ಖಾಸಗಿ ಪುಟಗಳು’ ಸಿನಿಮಾ ಬಳಿಕ ಒಳ್ಳೆಯ ಪಾತ್ರಗಳ ನಿರೀಕ್ಷೆಯಲ್ಲಿದ್ದೆ. ಆಗ ‘ಹೆಜ್ಜಾರು’ ಸಿಕ್ಕಿತು. ಗ್ಲ್ಯಾಮರ್‌ ಎನ್ನುವುದಷ್ಟೇ ಮುಖ್ಯವಲ್ಲ. ನನ್ನ ಪಾತ್ರವು ಎಷ್ಟರ ಮಟ್ಟಿಗೆ ಪ್ರಭಾವ ಬೀರುತ್ತದೆ ಎನ್ನುವುದನ್ನೂ ನೋಡುತ್ತೇನೆ. ಜನರು ಆ ಪಾತ್ರಕ್ಕೆ ಕನೆಕ್ಟ್‌ ಆಗದೇ ಇದ್ದರೆ ಸಿನಿಮಾ ಮಾಡಿ ಪ್ರಯೋಜನವೇನು? ಹೆಜ್ಜಾರಿನಲ್ಲಿ ರಿಯಲ್‌ ಲೈಫ್‌ ಪಾತ್ರ ದೊರಕಿದೆ. ‘ಹೆಜ್ಜಾರು’ ಬಳಿಕ ‘ನೆಲ್ಸನ್‌’ ಒಪ್ಪಿಕೊಂಡಿದ್ದೆ. ಈ ಸಿನಿಮಾದ ಮೊದಲ ಹಂತದ ಚಿತ್ರೀಕರಣ ಪೂರ್ಣಗೊಂಡಿದೆ. ಜೊತೆಗೆ ಅನೂಪ್‌ ಕಶ್ಯಪ್‌ ಅವರ ‘ಗಾಂಧಿ ಸ್ಕ್ವೇರ್‌’ ಸಿನಿಮಾದ ಶೂಟಿಂಗ್‌ ಶೇ 80ರಷ್ಟು ಪೂರ್ಣಗೊಂಡಿದೆ. ರಮೇಶ್‌ ಇಂದಿರಾ ಅವರು ನಿರ್ದೇಶಿಸುತ್ತಿರುವ, ಪ್ರಮೋದ್‌ ಅವರು ನಾಯಕರಾಗಿ ನಟಿಸುತ್ತಿರುವ ಸಿನಿಮಾದಲ್ಲೂ ನಟಿಸುತ್ತಿದ್ದೇನೆ. ಇದರ ಶೀರ್ಷಿಕೆ ಇನ್ನಷ್ಟೇ ಘೋಷಣೆಯಾಗಬೇಕಿದೆ. ಹೊಸ ಕಥೆಗಳನ್ನು ಕೇಳುತ್ತಿದ್ದೇನೆ. ಮಾತುಕತೆ ನಡೆಯುತ್ತಿದೆ’ ಎಂದರು.   

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.