ಹೈದರಾಬಾದ್: ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡಲು ವಿಫಲವಾದ ವಿಜಯ್ ದೇವರಕೊಂಡ ಅವರ ಲೈಗರ್ ಸಿನಿಮಾ ಇದೀಗ ಅಕ್ರಮ ಹಣದೊಂದಿಗೆ ಸಿನಿಮಾ ನಿರ್ಮಾಣ ಮಾಡಲಾಗಿದೆ ಎಂಬ ವಿಚಾರದಲ್ಲಿ ಸದ್ದು ಮಾಡುತ್ತಿದೆ.
ಇದೇ ವಿಚಾರವಾಗಿ ಇಂದು (ಬುಧವಾರ ನ30) ಹೈದರಾಬಾದ್‌ನ ಜಾರಿ ನಿರ್ದೇಶನಾಲಯದ (ಇಡಿ) ಪ್ರಾದೇಶಿಕ ಕಚೇರಿಯಲ್ಲಿ ಲೈಗರ್ ನಟ ವಿಜಯ್ ದೇವರಕೊಂಡ ವಿಚಾರಣೆಗೆ ಹಾಜರಾಗಿ ಬಂದಿದ್ದಾರೆ.
₹125 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಪೂರಿ ಜಗನ್ನಾಥ್ ನಿರ್ದೇಶನದ ಲೈಗರ್ ಆಗಸ್ಟ್‌ನಲ್ಲಿ ಬಿಡುಗಡೆಯಾಗಿ ಬಾಕ್ಸ್ ಆಫೀಸ್‌ನಲ್ಲಿ ಸೋಲುಂಡಿತ್ತು. ಚಿತ್ರ ತೆಲುಗು, ತಮಿಳು, ಹಿಂದಿ, ಮಲೆಯಾಳಂ ಹಾಗೂ ಕನ್ನಡದಲ್ಲಿ ಬಿಡುಗಡೆಯಾಗಿತ್ತು. ವಿಜಯ್‌ಗೆ ಜೊತೆಯಾಗಿ ಅನನ್ಯಾ ಪಾಂಡೆ, ಮೈಕ್ ಟೈಸನ್, ರಮ್ಯ ಕೃಷ್ಣ ತಾರಾಗಣದಲ್ಲಿದ್ದರು.
ಸಿನಿಮಾವನ್ನು ಅಕ್ರಮ ಹಣದಿಂದ ನಿರ್ಮಾಣ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದ್ದರಿಂದ ಈ ಬಗ್ಗೆ ಇ.ಡಿ ವಿಚಾರಣೆ ನಡೆಸುತ್ತಿದೆ. ಇದೇ ವಿಚಾರವಾಗಿ ಪೂರಿ ಜಗನ್ನಾಥ್ ಹಾಗೂ ಸಹ ನಿರ್ಮಾಪಕಿ ಚಾರ್ಮಿ ಕೌರ್ ಅವರು ನ.17 ರಂದು ಇಡಿ ವಿಚಾರಣೆಗೆ ಹಾಜರಾಗಿ ಬಂದಿದ್ದಾರೆ.
ತೆಲಂಗಾಣದ ಕಾಂಗ್ರೆಸ್ ನಾಯಕ ಬಕ್ಕಾ ಜುಡ್‌ಸನ್ ಅವರು ಲೈಗರ್ ಸಿನಿಮಾ ನಿರ್ಮಾಣದ ವಿರುದ್ಧ ಇಡಿಗೆ ದೂರು ನೀಡಿದ್ದರು. ಈ ಸಿನಿಮಾದಲ್ಲಿ ಕೆಲ ರಾಜಕಾರಣಿಗಳೂ ಸಹ ಕಪ್ಪು ಹಣ ಹಾಕಿದ್ದಾರೆ ಎಂದು ಆರೋಪಿಸಿದ್ದರು.
ವಿಜಯ್ ದೇವರಕೊಂಡ ಅವರ ಇ.ಡಿ ಭೇಟಿಯ ವೇಳೆ ನಡೆದ ಚರ್ಚೆಯ ಬಗ್ಗೆ ಬಹಿರಂಗವಾಗಿಲ್ಲ. ವಿದೇಶಿ ವಿನಿಮಯ ವ್ಯವಸ್ಥೆ ಕಾಯ್ದೆ ಉಲ್ಲಂಘಿಸಿ ಅಕ್ರಮ ಹಣ ವರ್ಗಾವಣೆಯಾಗಿದೆ ಎಂದು ಆರೋಪಿಸಲಾಗಿದೆ. ಇಡಿ ಅಧಿಕಾರಿಗಳು ಲೈಗರ್ ಸಿನಿಮಾದ ಹಣಕಾಸಿನ ಮೂಲಗಳನ್ನು ತಡಕಾಡುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.