ಕನ್ನಡದ ಎರಡು ಜನಪ್ರಿಯ ಚಿತ್ರಗಳು ಈಗ ಬಾಲಿವುಡ್‌ಗೆ ಹೊರಟಿವೆ. ರಾಧಿಕಾ ಪಂಡಿತ್ ಮತ್ತು ತರುಣ್ ನಟಿಸಿದ್ದ ‘ಲವ್‌ಗುರು’ ಮತ್ತು ಗಣೇಶ್-ರಾಧಿಕಾ ಪಂಡಿತ್ ಅಭಿನಯದ ‘ಜೂಮ್’ ಚಿತ್ರ ಕೂಡ ಹಿಂದಿಗೆ ರಿಮೇಕ್ ಆಗುತ್ತಿವೆ.
ಈ ಎರಡು ಚಿತ್ರಗಳನ್ನು ನಿರ್ದೇಶಿಸಿದ್ದ ಪ್ರಶಾಂತ್ ರಾಜ್ ಹಿಂದಿಯಲ್ಲೂ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಇದಕ್ಕಾಗಿ ಅವರು ಕಳೆದ ಒಂದು ತಿಂಗಳಿಂದ ಮುಂಬೈನಲ್ಲೇ ಬೀಡು ಬಿಟ್ಟಿದ್ದಾರಂತೆ. ಮಂಗಳವಾರ ಪ್ರಶಾಂತ್ ರಾಜ್ ಅವರ ಹುಟ್ಟುಹಬ್ಬವಿದ್ದು, ಈ ದಿನವೇ ದೊಡ್ಡ ಪ್ರಾಜೆಕ್ಟ್ ಪ್ರಕಟಿಸುವ ಯೋಜನೆ ಇತ್ತಂತೆ. ಆದರೆ, ನಾಲ್ವರು ನಾಯಕ ನಟರ ಜತೆ ಇನ್ನೂ ಮಾತುಕತೆ ನಡೆಯುತ್ತಿದ್ದು, ಕಾಂಟ್ರ್ಯಾಕ್ಟ್‌ಗೆ ಸಹಿ ಆಗದಿರುವ ಕಾರಣಕ್ಕೆ ಚಿತ್ರಗಳ ಪ್ರಕಟಣೆ ಎರಡು ವಾರ ಮುಂದಕ್ಕೆ ಹೋಗಿದೆಯಂತೆ.
ಈ ಎರಡು ಚಿತ್ರಗಳ ನಿರ್ಮಾಣಕ್ಕೆಬಾಲಿವುಡ್‌ನ ಎರಡು ದೊಡ್ಡ ಸ್ಟುಡಿಯೊಗಳಾದ ಫ್ಯಾಂಟಮ್ ಫಿಲಮ್ಸ್ ಮತ್ತು ಟಿಪ್ಸ್ ಕೈಜೋಡಿಸಿವೆ. ಸ್ಟ್ರಾಂಗ್ ಕಂಟೆಂಟ್ ಇರುವ ಕಾರಣಕ್ಕೆ ಬಾಲಿವುಡ್ ಸ್ಟುಡಿಯೊಗಳ ಚಿತ್ತವು ಈಗ ದಕ್ಷಿಣ ಭಾರತದ ಚಿತ್ರಗಳತ್ತ ಹೊರಳಿದೆ ಎನ್ನುತ್ತಾರೆ ಪ್ರಶಾಂತ್.
‘ಲವ್‌ಗುರು’ ಚಿತ್ರಕ್ಕೆ ನಾಯಕಿಯಾಗಿ ಬಾಲಿವುಡ್ ನಟಿ ಕೃತಿಕರಬಂಧ ಮತ್ತು ‘ಜೂಮ್’ ಚಿತ್ರಕ್ಕೆ ದಕ್ಷಿಣ ಭಾರತದ ನಟಿ ಪ್ರಿಯಾ ಆನಂದ್ ಅವರ ಹೆಸರು ಅಂತಿಮಗೊಂಡಿವೆ. ಪ್ರಿಯಾ ಆನಂದ್, ಪ್ರಶಾಂತ್ ರಾಜ್ ನಿರ್ದೇಶನ ಮತ್ತು ಗಣೇಶ್ ನಟನೆಯ ‘ಆರೆಂಜ್’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು. ಕೃತಿಕರಬಂಧ ಕೂಡ ಪ್ರಶಾಂತ್ ರಾಜ್ ನಿರ್ದೇಶನದ ‘ದಳಪತಿ’ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು.
ಇನ್ನು ನಾಯಕರಾಗಿ ರಾಜ್‌ಕುಮಾರ್ ರಾವ್, ಸನ್ನಿ ಸಿಂಗ್, ಮುಂಬೈಕರ್ ನಿಖಿಲ್,ಗಿರೀಶ್ ಕುಮಾರ್ ಅವರ ಜತೆಗೆ ಮಾತುಕತೆ ನಡೆಯುತ್ತಿದ್ದು, ಇದರಲ್ಲಿ ಮೂವರು ನಾಯಕರು ‘ಲವ್‌ಗುರು’ ಚಿತ್ರದಲ್ಲಿ ನಟಿಸಿದರೆ, ಇನ್ನೊಬ್ಬರು ‘ಜೂಮ್’ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುತ್ತವೆ ಚಿತ್ರತಂಡದ ಮೂಲಗಳು.
‘ಲವ್ ಗುರು’2009ರಲ್ಲಿ ತೆರೆಕಂಡಿತ್ತು. ಈ ಚಿತ್ರದಲ್ಲಿರಾಧಿಕಾ ಪಂಡಿತ್ ಮೊದಲ ಬಾರಿಗೆ ಸೋಲೊ ನಾಯಕಿಯಾಗಿ ಮತ್ತು ತರುಣ್ ಚಂದ್ರ ನಾಯಕನಾಗಿ ಕಾಣಿಸಿಕೊಂಡಿದ್ದರು. ಗಣೇಶ್ ಮತ್ತು ರಾಧಿಕಾ ಪಂಡಿತ್ ಜೋಡಿ ಮೋಡಿ ಮಾಡಿದ್ದ ‘ಜೂಮ್’2016ರಲ್ಲಿ ತೆರೆಕಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.