‘ಒಡೆಯ’ ಚಿತ್ರದ ಬಳಿಕ ದರ್ಶನ್ ನಟಿಸುತ್ತಿರುವ ಚಿತ್ರ ‘ರಾಜವೀರ ಮದಕರಿನಾಯಕ’. ಇದನ್ನು ನಿರ್ದೇಶಿಸುತ್ತಿರುವುದು ಎಸ್.ವಿ. ರಾಜೇಂದ್ರಸಿಂಗ್ ಬಾಬು. ಈಗಾಗಲೇ, ಕೇರಳದ ಚಾಲುಕುಡಿ ಜಲಪಾತ ಪ್ರದೇಶದಲ್ಲಿ ಮೊದಲ ಹಂತದ ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡ ಕಳೆದ ಮಾರ್ಚ್ ಎರಡನೇ ವಾರದಲ್ಲಿಯೇ ಎರಡನೇ ಹಂತದ ಶೂಟಿಂಗ್‌ಗಾಗಿ ಹೈದರಾಬಾದ್‌ಗೆ ಹೋಗಲು ನಿರ್ಧರಿಸಿತ್ತು. ಕೊರೊನಾ ಭೀತಿಯಿಂದ ಸದ್ಯಕ್ಕೆ ಚಿತ್ರೀಕರಣ ಸ್ಥಗಿತಗೊಂಡಿದೆ.
ಕರ್ನಾಟಕದಲ್ಲಿ ಇನ್ನೂ ರಾಜ್ಯ ಸರ್ಕಾರ ಸಿನಿಮಾಗಳ ಶೂಟಿಂಗ್‌ಗೆ ಅನುಮತಿ ನೀಡಿಲ್ಲ. ಅನುಮತಿ ನೀಡಿದರೂ ಎಷ್ಟು ಮಂದಿ ಚಿತ್ರೀಕರಣದಲ್ಲಿ ಭಾಗವಹಿಸಬೇಕು ಎಂಬ ಮಾರ್ಗಸೂಚಿ ಸಿದ್ಧಪಡಿಸುತ್ತದೆ ಎಂಬುದು ಗೊತ್ತಿಲ್ಲ. ಹಾಗಾಗಿ, ಚಿತ್ರತಂಡ ಕೂಡ ಗೊಂದಲದಲ್ಲಿದೆ.
‘ಸರ್ಕಾರದ ಅನುಮತಿ ಸಿಕ್ಕಿದ ಬಳಿಕ ಯಾವಾಗ ಶೂಟಿಂಗ್ ನಡೆಸಬೇಕು ಎಂಬುದನ್ನು ಅಂತಿಮಗೊಳಿಸಲಾಗುವುದು. ಅಲ್ಲದೇ, ಇಂತಿಷ್ಟೇ ಸಂಖ್ಯೆಯ ಕಲಾವಿದರು ಚಿತ್ರೀಕರಣದಲ್ಲಿ ಭಾಗವಹಿಸಬೇಕು ಎಂದು ಸೂಚಿಸುವ ಸಾಧ್ಯತೆಯಿದೆ. ಹಾಗಾಗಿ, ಸರ್ಕಾರದಿಂದ ಅಧಿಕೃತವಾಗಿ ಅನುಮತಿ ಸಿಕ್ಕಿದ ಬಳಿಕ ಎಲ್ಲೆಲ್ಲಿ ಶೂಟಿಂಗ್ ನಡೆಸಬೇಕು ಎಂಬುದನ್ನು ಚಿತ್ರತಂಡದೊಟ್ಟಿಗೆ ಚರ್ಚಿಸಲಾಗುವುದು’ ಎಂದು ನಿರ್ದೇಶಕ ರಾಜೇಂದ್ರಸಿಂಗ್ ಬಾಬು ‘ಪ್ರಜಾವಾಣಿ’ಗೆ ತಿಳಿಸಿದರು.
ಸಾಹಿತಿ ಬಿ.ಎಲ್. ವೇಣು ಅವರ ಐತಿಹಾಸಿಕ ಕಾದಂಬರಿ ಆಧಾರಿತ ಚಿತ್ರ ಇದು. ದರ್ಶನ್ ಮದಕರಿನಾಯಕನಾಗಿ ಬಣ್ಣ ಹಚ್ಚಿದ್ದಾರೆ. ಮದಕರಿನಾಯಕನಿಗೆ ಇಬ್ಬರು ರಾಣಿಯರು ಇರುತ್ತಾರೆ. ಒಬ್ಬಳು ತರೀಕೆರೆ ರಾಣಿ; ಮತ್ತೊಬ್ಬಳು ಗುಡಿಕೋಟೆ ರಾಣಿ. ಹಾಗಾಗಿ, ಸಿನಿಮಾದಲ್ಲೂ ದರ್ಶನ್‌ಗೆ ಇಬ್ಬರು ನಾಯಕಿಯರು ಇದ್ದಾರೆ.
ಮೂರು ದಶಕದ ಹಿಂದೆ ರಾಜಸ್ಥಾನದಲ್ಲಿ ರಾಜೇಂದ್ರಸಿಂಗ್ ಬಾಬು ಅವರು ವಿಷ್ಣುವರ್ಧನ್ ಮತ್ತು ಸುಹಾಸಿನಿ ನಟನೆಯ ‘ಮುತ್ತಿನಹಾರ’ ಚಿತ್ರದ ಶೂಟಿಂಗ್ ನಡೆಸಿದ್ದರು. ಅಲ್ಲಿಯೂ ‘ರಾಜವೀರ ಮದಕರಿನಾಯಕ’ ಚಿತ್ರದ ಚಿತ್ರೀಕರಣ ನಡೆಸುವ ಆಲೋಚನೆಯಲ್ಲಿದ್ದಾರೆ ಎಂಬ ಸುದ್ದಿಯಿದೆ. ಆದರೆ, ಕೊರೊನಾ ಭೀತಿಯಿಂದಾಗಿ ಅಲ್ಲಿ ಶೂಟಿಂಗ್ ನಡೆಸುತ್ತಾರೆಯೇ ಎಂಬುದು ಇನ್ನೂ ಅಧಿಕೃತಗೊಂಡಿಲ್ಲ.
ಇನ್ನೂ ಪಾತ್ರವರ್ಗ ಕೂಡ ಅಂತಿಮಗೊಂಡಿಲ್ಲ. ನಯನತಾರಾ ಮತ್ತು ಕಾಜಲ್ ಅಗರ್‌ವಾಲ್ ಅವರನ್ನು ನಾಯಕಿಯರನ್ನಾಗಿ ಕರೆತರಲು ಚಿತ್ರತಂಡ ಮುಂದಾಗಿದೆ. ಈ ಇಬ್ಬರದ್ದೂ ಸಮಯದ ಹೊಂದಾಣಿಕೆಯ ಸಮಸ್ಯೆ ಎದುರಾಗಿದೆಯಂತೆ. ಹಂಸಲೇಖ ಸಂಗೀತ ನೀಡಿರುವ ಈ ಚಿತ್ರಕ್ಕೆ ರಾಕ್‌ಲೈನ್ ವೆಂಕಟೇಶ್ ಬಂಡವಾಳ ಹೂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.