ಇಲ್ಲಿ ಹುಟ್ಟಿಬೆಳೆದವರಷ್ಟೇ ಅಲ್ಲದೇ ಬೇರೆ ಊರಿನವರಿಗೂ ಆಶ್ರಯ ನೀಡಿ ತಾಯಿಸ್ಥಾನದಲ್ಲಿದೆ ಬೆಂಗಳೂರು.
ಈ ಬೆಂಗಳೂರಿನ ಕುರಿತಂತೆ ಚಿತ್ರವೊಂದು ನಿರ್ಮಾಣವಾಗಿದೆ. ಚಿತ್ರದ ಹೆಸರು ‘ಮೇಡ್ ಇನ್ ಬೆಂಗಳೂರು’.‘A million dreams. One city’ ಎಂಬ ಅಡಿಬರಹ ಕೂಡ ಈ ಚಿತ್ರಕ್ಕಿದೆ.
ಚಿತ್ರೀಕರಣ ಮುಗಿದು, ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ.
ಅನಂತನಾಗ್, ಸಾಯಿಕುಮಾರ್ ಹಾಗೂ ಪ್ರಕಾಶ್ ಬೆಳವಾಡಿ ಮೂರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ನಾಯಕನಾಗಿ ಮಧುಸೂದನ್ ಗೋವಿಂದ್ ಅಭಿನಯಿಸಿದ್ದಾರೆ. ಪುನೀತ್ ಮಾಂಜ, ವಂಶಿಧರ್, ಹಿಮಾಂಶಿ ವರ್ಮ, ಸುಧಾ ಬೆಳವಾಡಿ, ಮಂಜುನಾಥ್ ಹೆಗ್ಡೆ, ಶಂಕರಮೂರ್ತಿ, ವಿನೀತ್, ರಮೇಶ್ ಭಟ್ ತಾರಾಬಳಗದಲ್ಲಿದ್ದಾರೆ.
ಪ್ರದೀಪ್ ಶಾಸ್ತ್ರಿ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ.
ಚಿತ್ರದ ಬಗ್ಗೆ ನಿರ್ದೇಶಕ ಪ್ರದೀಪ್ ಶಾಸ್ತ್ರಿ ವಿವರ ನೀಡಿದರು.
ನಟ ಅನಂತನಾಗ್ ವಿವರ ನೀಡಿ, ‘ಕೆಲವು ತಿಂಗಳ ಹಿಂದೆ ನಿರ್ಮಾಪಕ ಬಾಲಕೃಷ್ಣ ಮತ್ತು ನಿರ್ದೇಶಕ ಪ್ರದೀಪ್ ಶಾಸ್ತ್ರಿ ಈ ಚಿತ್ರದ ಸಂಬಂಧ ಮನೆಗೆ ಬಂದಿದ್ದರು. ಅವರು ರಾಘವೇಂದ್ರ ಸ್ವಾಮಿಗಳ ಪರಮಭಕ್ತರು. ‘ನಾ ನಿನ್ನ ಬಿಡಲಾರೆ’ ಚಿತ್ರದಲ್ಲಿ ಮೊದಲ ಬಾರಿಗೆ ಗುರು ರಾಘವೇಂದ್ರ ಕುರಿತು ಹಾಡಿತ್ತು. ಆ ನಂತರ ಅವರ ಬಗ್ಗೆ ತಿಳಿದುಕೊಳ್ಳುತ್ತಾ ಹೋದೆ. ಮನೆಯಲ್ಲಿ ಅವರ ಮೂರ್ತಿಯನ್ನಿಟ್ಟು ಪೂಜೆ ಸಹ ಪ್ರಾರಂಭವಾಯಿತು. ಅವರೇ ಈ ಪ್ರಾಜೆಕ್ಟ್ ಕೊಡಿಸಿದಾರಾ? ಎನಿಸುವಂತಿದೆ’ ಎಂದರು.
‘ಪ್ರದೀಪ್ ಕೊಟ್ಟ ಸ್ಕ್ರಿಪ್ಟ್ ಓದಿದೆ. ಬಹಳ ಖುಷಿಯಾಯಿತು. ನನ್ನದು ಇದರಲ್ಲಿ ಹೀರಾ ನಂದಾನಿ ಎಂಬ ಸಿಂಧಿ ವ್ಯಾಪಾರಿಯ ಪಾತ್ರ. ಬಹಳ ಚೆನ್ನಾಗಿ ಈ ಪಾತ್ರವನ್ನು ಬರೆದಿದ್ದಾರೆ. ನನಗೆ ಒಬ್ಬ ಸಿಂಧಿ ವ್ಯಾಪಾರಿಯ ಪರಿಚಯವಿತ್ತು. ಅವರೇ ಖ್ಯಾತ ನಿರ್ಮಾಪಕ ಮತ್ತು ವಿತರಕ ಪಾಲ್ ಚಂದಾನಿ. ನನ್ನ ಅದೆಷ್ಟೋ ಚಿತ್ರಗಳ ವಿತರಣೆ ಮಾಡಿದ್ದಾರೆ ಅವರು. ಅವರನ್ನು ಹತ್ತಿರದಿಂದ ನೋಡಿದ್ದೆನಾದ್ದರಿಂದ ಅವರ ಮ್ಯಾನರಿಸಂ ಬಳಸಿಕೊಳ್ಳಬಹುದಾ ಎಂದು ನಿರ್ದೇಶಕರನ್ನು ಕೇಳಿದೆ. ಅವರು ಒಪ್ಪಿದರು. ಅವರ ಮಾತಿನ ಧಾಟಿ ಮತ್ತು ಮ್ಯಾನರಸಿಂಗಳನ್ನು ಈ ಚಿತ್ರದಲ್ಲಿ ಸ್ವಲ್ಪ ಮಟ್ಟಿಗೆ ಬಳಸಿಕೊಂಡಿದ್ದೇನೆ’ ಎಂದರು ಅನಂತನಾಗ್.
ಈ ಚಿತ್ರ ರಜನಿ ‘ಥರ್ಸ್ಡೇ ಸ್ಟೋರೀಸ್’ ಸಂಸ್ಥೆಯಡಿ ನಿರ್ಮಾಣವಾಗಿದೆ. ಚಿತ್ರ ಯಶಸ್ವಿಯಾಗಲಿ, ನಿರ್ಮಾಪಕರು ಹಾಕಿದ ದುಡ್ಡು ಮರಳಲಿ ಎಂದು ಅವರು ಹಾರೈಸಿದರು.
‘ಈ ಚಿತ್ರದ ಹೆಸರಿನಂತೆ ನಾನು ಸಹ ‘ಮೇಡ್ ಇನ್ ಬೆಂಗಳೂರು’. ಸ್ವರ ಅಪ್ಪನದ್ದು, ಸಂಸ್ಕಾರ ಅಮ್ಮನದ್ದು, ಅನುಗ್ರಹ ದೇವರದ್ದು, ಅಭಿಮಾನ ನಿಮ್ಮದು’ ಎನ್ನುತ್ತಾ ಮಾತಿಗಿಳಿದರು ನಟ ಸಾಯಿಕುಮಾರ್. ಇಲ್ಲಿ ನನಗೆ ಸಂಭಾಷಣೆ ಕಡಿಮೆ. ಅಭಿವ್ಯಕ್ತಿ ಜಾಸ್ತಿ. ಬರೀ ಭಾವನೆಗಳ ಮೂಲಕ ಅಭಿವ್ಯಕ್ತಿ ಮಾಡುವಂತಹ ಪಾತ್ರ ನನ್ನದು. ಇತ್ತೀಚಿನ ವರ್ಷಗಳಲ್ಲಿ ಯುವ ನಿರ್ದೇಶಕರ ಚಿತ್ರಗಳಲ್ಲಿ ಹೆಚ್ಚು ಕೆಲಸ ಮಾಡುವುದಕ್ಕೆ ಅವಕಾಶ ಸಿಗುತ್ತಿವೆ. ‘ರಂಗಿತರಂಗ’ ನಂತರ ಹಲವು ಹೊಸ ನಿರ್ದೇಶಕರ ಚಿತ್ರಗಳಲ್ಲಿ ವಿಭಿನ್ನ ಪಾತ್ರ ಮಾಡುವ ಅವಕಾಶ ಸಿಕ್ಕಿದೆ. ಈ ಚಿತ್ರದಲ್ಲೂ ಅಂಥದ್ದೊಂದು ಅವಕಾಶ ಸಿಕ್ಕಿದೆ. ಇದೊಂದು ಅದ್ಭುತವಾದ ಕಥೆ’ ಎಂದರು ನಟ ಸಾಯಿಕುಮಾರ್.
ಪ್ರಕಾಶ್ ಬೆಳವಾಡಿ ತಮ್ಮ ಪಾತ್ರದ ಪರಿಚಯ ಮಾಡಿಕೊಳುತ್ತಾ, ‘ಈ ಕಥೆ ತುಂಬಾ ಚೆನ್ನಾಗಿದೆ. ಇಂತಹ ಸಿನಿಮಾಗಳ ನಿರ್ಮಾಣ ಜಾಸ್ತಿಯಾದರೆ ಕನ್ನಡ ಚಿತ್ರರಂಗದ ಹಿಂದಿನ ವೈಭವದ ದಿನಗಳು ಮತ್ತೆ ಮರುಕಳಿಸಲಿದೆ’ ಎಂದರು.
ನನಗೆ ನಿರ್ದೇಶಕ ಪ್ರದೀಪ್ ಶಾಸ್ತ್ರಿ ಏಳು ವರ್ಷಗಳ ಪರಿಚಯ. ನನ್ನ ಬಳಿ ಉತ್ತಮ ಕಥೆಯಿದೆ. ಸಿನಿಮಾ ಮಾಡೋಣ ಎಂದರು. ಕಥೆ ಕೇಳಿದ ನಾನು, ಸಮಾಜಕ್ಕೆ ಏನಾದರೂ ಉತ್ತಮ ಸಂದೇಶ ನೀಡುವ ಸಲುವಾಗಿ ಈ ಚಿತ್ರ ನಿರ್ಮಾಣ ಮಾಡಿದ್ದೇನೆ ಎನ್ನುತ್ತಾರೆ ನಿರ್ಮಾಪಕ ಬಾಲಕೃಷ್ಣ.
ಸಾಹಿತಿ -ಪತ್ರಕರ್ತ ಜೋಗಿ ಇದ್ದರು. ಅಶ್ವಿನ್ ಪಿ ಕುಮಾರ್ ಅವರ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಭಜರಂಗ್ ಕೊಣತಮ್ ಛಾಯಾಗ್ರಹಣ ಹಾಗೂ ಶಾಂತಕುಮಾರ್ ಅವರ ಸಂಕಲನ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.