ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ವರ್ಚುವಲ್ ಸಭೆ ಸಮಾರಂಭಗಳು, ವಿಡಿಯೊ ಕರೆಯಲ್ಲೇ ಮದುವೆ ಕಾರ್ಯಕ್ರಮ ವೀಕ್ಷಣೆ ಹೀಗೆ ಜನರು ಪರಸ್ಪರ ಸಂಪರ್ಕದಲ್ಲಿರಲು ಆನ್‌ಲೈನ್‌ಗೇ ಮೊರೆ ಹೋಗಿದ್ದರು. ಇದೇ ವಿಷಯವಿಟ್ಟುಕೊಂಡು ಇದೀಗ ಕನ್ನಡದ ಮೊದಲ ವರ್ಚುವಲ್ ಸಿನಿಮಾವೊಂದು ಸಿದ್ಧವಾಗಿದೆ.
ಒಟಿಟಿ ವೇದಿಕೆಯಲ್ಲಿ ಬಿಡುಗಡೆಗೊಂಡು, ಮನರಂಜನೆಯ ರಸದೌತಣ ಬಡಿಸಿದ್ದ ‘ಇಕ್ಕಟ್’ ಸಿನಿಮಾ ಬಳಿಕ, ಇದೀಗ ವಿಭಿನ್ನವಾದ ಸಿನಿಮಾವೊಂದರಲ್ಲಿ ನಟ ನಾಗಭೂಷಣ್ ಕಾಣಿಸಿಕೊಳ್ಳುತ್ತಿದ್ದಾರೆ. ಅವರು ನಟಿಸಿರುವ ‘ಮೇಡ್ ಇನ್ ಚೈನಾ’ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು, ವಿಭಿನ್ನವಾದ ಪ್ರಯತ್ನ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.
ಲಾಕ್‌ಡೌನ್ ಸಂದರ್ಭದಲ್ಲಿ ವಿದೇಶದಲ್ಲಿ ಪತಿ(ಅಭಿರಾಮ್ ಶಾಸ್ತ್ರಿ) ಸಿಲುಕಿಕೊಳ್ಳುತ್ತಾನೆ. ಇತ್ತ, ತುಂಬು ಗರ್ಭಿಣಿಯಾಗಿರುವ ಆತನ ಪತ್ನಿ(ಮೈಥಿಲಿ) ಭಾರತದಲ್ಲಿರುತ್ತಾಳೆ. ಈ ಗಂಡ ಹೆಂಡತಿ, ಅಳಿಯ–ಮಾವ, ಗೆಳೆಯರ ಜೊತೆ ಆನ್‌ಲೈನ್ ವಿಡಿಯೊ ಕರೆಯಲ್ಲೇ ನಡೆಯುವ ಮಾತುಕತೆ, ಪ್ರೀತಿ ಮತ್ತು ಒಂದಿಷ್ಟು ಜಗಳ ಹೀಗೆ ಕಂಪ್ಯೂಟರ್, ಮೊಬೈಲ್ ಸ್ಕ್ರೀನ್‌ನಲ್ಲೇ ಇಡೀ ಸಿನಿಮಾ ಸೆರೆಯಾಗಿದೆ. ಇದೊಂದು ಫ್ಯಾಮಿಲಿ ಡ್ರಾಮಾ. ನಾಗಭೂಷಣ್ ಟೀಸರ್‌ನಲ್ಲೇ ನಗುವಿನ ಕಚಗುಳಿ ಇಟ್ಟಿದ್ದಾರೆ. ಪ್ರಿಯಾಂಕಾ ತಿಮ್ಮೇಶ್ ನಟನೆ ಪ್ರೇಕ್ಷಕರನ್ನು ಸೆಳೆದಿದೆ.
‘ಅಯೋಗ್ಯ’, ‘ರತ್ನಮಂಜರಿ’ ಸಿನಿಮಾಗಳಿಗೆ ಸಿನಿಮಾಟೋಗ್ರಾಫರ್ ಆಗಿದ್ದ ಪ್ರೀತಮ್ ತೆಗ್ಗಿನಮನೆ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುವುದರ ಜೊತೆಗೆ ಗ್ರಾಫಿಕ್, ಸಂಕಲನ ಹಾಗೂ ಸಿನಿಮಾಟೋಗ್ರಾಫಿ ಜವಾಬ್ದಾರಿಯನ್ನು ನಿಭಾಯಿಸಿದ್ದಾರೆ. ಗೌರವ್ ಶೆಟ್ಟಿ, ಅಶ್ವಿನಿ ರಾವ್ ಪಲ್ಲಕ್ಕಿ, ಅರುಣ ಬಾಲರಾಜ್, ರವಿ ಭಟ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.
ನಿಶ್ಚಲ್ ವಿ. ಹಾಗೂ ಪ್ರೀತಮ್ ತೆಗ್ಗಿನಮನೆ ‘ಮೇಡ್ ಇನ್ ಚೈನಾ’ ಸಿನಿಮಾಗೆ ಕಥೆ ಬರೆದಿದ್ದು, ವೀವಾನ್ ರಾಧಾಕೃಷ್ಣ ಸಂಗೀತ ನೀಡಿದ್ದಾರೆ. ಎನ್. ಕೆ. ಸ್ಟುಡಿಯೋಸ್ ಬ್ಯಾನರ್‌ನಡಿ ನಂದಕಿಶೋರ್ ಸಿನಿಮಾಗೆ ಬಂಡವಾಳ ಹೂಡಿದ್ದು, ಕ್ರಿಸ್ಟಲ್ ಪಾರ್ಕ್ ಸಿನಿಮಾಸ್‌ನಡಿ ಟಿ.ಆರ್.ಚಂದ್ರಶೇಖರ್ ಸಿನಿಮಾವನ್ನು ಪ್ರಸ್ತುತಪಡಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.