ಆಯುರ್ವೇದ ಮತ್ತು ಅಲೋಪತಿ ವೈದ್ಯಕೀಯ ಪದ್ಧತಿ ಕುರಿತಾದ ಕಥೆ ಹೊಂದಿರುವ ‘ಮಧುರ ಕಾವ್ಯ’ ಚಿತ್ರ ಜುಲೈ 21ರಂದು ತೆರೆ ಕಾಣಲಿದೆ. ಚಿತ್ರದ ಟ್ರೇಲರ್ ಅನ್ನು ಹಿರಿಯ ನಟ ದೇವರಾಜ್ ಇತ್ತೀಚೆಗಷ್ಟೇ ಬಿಡುಗಡೆಗೊಳಿಸಿದರು.
‘ಟ್ರೇಲರ್‌ನಲ್ಲಿ ತಂಡ ಕಥೆಯ ಎಳೆಯನ್ನು ಬಿಟ್ಟುಕೊಡದೆ ಕುತೂಹಲ ಕಾಯ್ದುಕೊಂಡಿದೆ. ಅಲೋಪತಿ ಕುರಿತು ನಂಬಿಕೆ ಕಡಿಮೆಯಾಗುತ್ತಿದೆ. ಕೋವಿಡ್ ಲಸಿಕೆ ಕುರಿತು ಜಗತ್ತಿನೆಲ್ಲೆಡೆ ನಡೆದ ಸಂಗತಿಗಳನ್ನು ನಾವು ನೋಡಿದ್ದೇವೆ. ಆಯುರ್ವೇದಕ್ಕೆ ಮೊರೆ ಹೋಗುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದೆ. ನಾಟಿ ವೈದ್ಯ ಪದ್ಧತಿಯನ್ನು ನಂಬಿಕೊಂಡು ಬಂದ ಒಂದು ಇಡೀ ಕುಟುಂಬ ಒಟ್ಟಾಗಿ ಈ ಸಿನಿಮಾ ನಿರ್ಮಾಣ ಮಾಡಿರುವುದು ಖುಷಿಯ ವಿಷಯ. ಸಮಾಜಕ್ಕೆ ಸಂದೇಶ ಕೊಡಬೇಕು, ರೋಗಿಗಳಲ್ಲಿ ಜಾಗೃತಿ ಮೂಡಿಸಬೇಕೆಂಬ ಉದ್ದೇಶದಿಂದ ಮಾಡಿರುವ ಚಿತ್ರವನ್ನು ನಾವೆಲ್ಲ ಬೆಂಬಲಿಸಬೇಕು ಎಂದು ದೇವರಾಜ್ ಹೇಳಿದರು.
ಚಿತ್ರದ ನಾಯಕ ಹಾಗೂ ನಿರ್ದೇಶಕ ಮಧುಸೂದನ್ ಮಾತನಾಡಿ, ‘ಅಲೋಪತಿಯಲ್ಲಿ ರೋಗಿಗಳಿಗೆ ಧೈರ್ಯ ತುಂಬುವುದಕ್ಕಿಂತ ಹೆಚ್ಚಾಗಿ ಭಯಪಡಿಸುತ್ತಾರೆ. ಹಣಕ್ಕಾಗಿ ಔಷಧ ಕಂಪನಿಗಳು ಜನರಿಗೆ ಯಾವ ರೀತಿ ಮೋಸ ಮಾಡುತ್ತಿವೆ ಎಂಬುದನ್ನು ಚಿತ್ರದಲ್ಲಿ ಹೇಳಿದ್ದೇವೆ. ಕೆಲವಷ್ಟು ಅಲೋಪತಿ ಔಷಧಗಳಿಗೆ ಅಗತ್ಯ ರಾಸಾಯನಿಕಗಳನ್ನು ಗಿಡದಿಂದಲೇ ತೆಗೆಯಲಾಗುತ್ತದೆ. ನಾವು ನಾಟಿ ವೈದ್ಯಕೀಯ ಪದ್ಧತಿಯಲ್ಲಿ ಅದೇ ಗಿಡಮೂಲಿಕೆಯನ್ನು ಔಷಧವಾಗಿ ಕೊಡುತ್ತೇವೆ. ನಮ್ಮ ಆಹಾರ ಪದ್ಧತಿಗಿಂತ ಉತ್ತಮ ಔಷಧವಿಲ್ಲ. ಇದನ್ನು ಜನರಿಗೆ ಮನವರಿಕೆ ಮಾಡಿಕೊಡಲು ಈ ಸಿನಿಮಾ ನಿರ್ಮಿಸಿದ್ದೇವೆ ಎಂದರು.
ಉಡುಪಿ, ಮಂಗಳೂರು, ಶಿರಸಿ ಸುತ್ತಮುತ್ತ ಚಿತ್ರೀಕರಣಗೊಂಡಿದೆ. ಸತೀಶ್ ಮೌರ್ಯ ಅವರ ಸಂಗೀತ ಈ ಚಿತ್ರಕ್ಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.