ಕಳೆದ ವರ್ಷ ತೆರೆಕಂಡ ಮಹೇಶ್ ಬಾಬು ನಟನೆಯ ತೆಲುಗಿನ 'ಮಹರ್ಷಿ' ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಒಳ್ಳೆಯ ಫಸಲು ತೆಗೆದಿತ್ತು. ಈ ವರ್ಷ ತೆರೆಕಂಡ ಅನಿಲ್ ರವಿಪುಡಿ ನಿರ್ದೇಶನದ 'ಸರಿಲೇರು ನೀಕೆವ್ವರು' ಸಿನಿಮಾವೂ ಸೂಪರ್ ಹಿಟ್ ಆಗಿದೆ.
ಇದರಲ್ಲಿ ಮಹೇಶ್ ಬಾಬು ಅವರದು ಸಂಕಷ್ಟಕ್ಕೆ ಸಿಲುಕಿದ ಸ್ನೇಹಿತನ ಕುಟುಂಬವನ್ನು ರಕ್ಷಿಸುವ ಮೇಜರ್ ಪಾತ್ರ. ಭಾವುಕ ಕಥನದೊಳಗೆ ನವೀರಾದ ಪ್ರೇಮಕಥೆ ಹಾಗೂ ಕಾಮಿಡಿಯೂ ಇದರೊಳಗೆ ಮಿಳಿತಗೊಂಡಿದೆ.
'ಸರಿಲೇರು ನೀಕೆವ್ವರು' ಬಳಿಕ ಮಹೇಶ್ ಬಾಬು ಯಾವ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಕೌತುಕ ಅವರ ಅಭಿಮಾನಿಗಳಲ್ಲಿತ್ತು. ಈ ನಡುವೆಯೇ 'ಕೆಜಿಎಫ್ ಚಾಪ್ಟರ್ 1' ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಕೂಡ 'ಟಾಲಿವುಡ್ ಪ್ರಿನ್ಸ್'ಗೆ ಕಥೆ ಹೇಳಿದ್ದೂ ಆಯಿತು.
ಅದೇಕೊ ಆ ಕಥನದ ಎಳೆಯು ಅವರಿಗೆ ರುಚಿಸಲಿಲ್ಲ. ಈಗ 'ಗೀತ ಗೋವಿಂದಂ' ಚಿತ್ರದ ನಿರ್ದೇಶಕ ಪರಶುರಾಮ್ ಅವರು ಮಹೇಶ್ ಬಾಬು ನಟನೆಯ ಹೊಸ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳುವುದು ಖಾತ್ರಿಯಾಗಿದೆ. ಜೂನ್‌ನಲ್ಲಿ ಈ ಚಿತ್ರ ಸೆಟ್ಟೇರುವ ನಿರೀಕ್ಷೆಯಿದೆ.
ಅಂದಹಾಗೆ ನಟಿ ಕೀರ್ತಿ ಸುರೇಶ್ ಅವರನ್ನು ಈ ಚಿತ್ರದ ನಾಯಕಿಯನ್ನಾಗಿ ಕರೆತರುವ ಇರಾದೆ ಚಿತ್ರತಂಡದ್ದು. ಪ್ರಸ್ತುತ ಆಕೆ ತಮಿಳಿನ 'ಅಣ್ಣಾತೆ' ಚಿತ್ರದಲ್ಲಿ 'ಸೂಪರ್ ಸ್ಟಾರ್' ರಜನಿಕಾಂತ್ ಅವರ ಮಗಳ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಕೀರ್ತಿ ಅವರು ದಕ್ಷಿಣ ಭಾರತದ ಪ್ರತಿಭಾನ್ವಿತ ನಟಿ ಎಂಬುದರಲ್ಲಿ ಎರಡು ಮಾತಿಲ್ಲ. 'ಮಹಾನಟಿ' ಚಿತ್ರದಲ್ಲಿನ ಅಭಿನಯವೇ ಇದಕ್ಕೆ ಸಾಕ್ಷಿ. ಆದರೆ, ಸ್ಟಾರ್ ನಟರ ಜೊತೆಗೆ ಆಕೆ ನಟಿಸಿರುವ ಕಮರ್ಷಿಯಲ್ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿರುವುದು ಮಹೇಶ್ ಬಾಬು ಅವರ ಅಭಿಮಾನಿಗಳಲ್ಲಿ ಚಿಂತೆಯ ಗೆರೆಗಳನ್ನು ಮೂಡಿಸಿವೆ.
2017ರಲ್ಲಿ ನಟ ವಿಜಯ್ ಜೊತೆಗೆ ಆಕೆ ತೆರೆ ಹಂಚಿಕೊಂಡ ತಮಿಳಿನ 'ಭೈರವ' ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಯಶಸ್ಸು ಕಾಣಲಿಲ್ಲ. ಮರುವರ್ಷ ತೆರೆಕಂಡ ಪವನ್ ಕಲ್ಯಾಣ್ ಜೊತೆಗಿನ ತೆಲುಗಿನ 'ಅಜ್ಞಾತವಾಸಿ' ಮತ್ತು ವಿಕ್ರಮ್ ನಾಯಕರಾಗಿದ್ದ ತಮಿಳಿನ 'ಸಾಮಿ ಸ್ಕ್ವೇರ್' ಸಿನಿಮಾಗಳು ಒಳ್ಳೆಯ ಗಳಿಕೆ ಕಾಣಲಿಲ್ಲ. ಪ್ರಸ್ತುತ 'ಭರತ ಅನೆ ನೇನು', 'ಮಹರ್ಷಿ' ಮತ್ತು 'ಸರಿಲೇರು ನೀಕೆವ್ವರು' ಸಿನಿಮಾಗಳ ಮೂಲಕ ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್ ನೀಡಿ ಬೀಗುತ್ತಿರುವ ಮಹೇಶ್ ಬಾಬು ಸೋಲಿನ ಸುಳಿಗೆ ಜಾರಿದರೆ ಹೇಗೆಂಬುದು ಅವರ ಅಭಿಮಾನಿಗಳ ಚಿಂತೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.