ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್‌ಬಾಬು ಬಹುನಿರೀಕ್ಷಿತ ತೆಲುಗು ಸಿನಿಮಾ ‘ಮೇಜರ್’ನ ಬಿಡುಗಡೆ ದಿನಾಂಕವನ್ನು ಬಹಿರಂಗ ಪಡಿಸಿದ್ದಾರೆ. ಮೇಜರ್ ಸಂದೀಪ್ ಉನ್ನಿಕೃಷ್ಣನ್ ಜೀವನಾಧಾರಿತ ಈ ಸಿನಿಮಾವೂ ಪ್ರಪಂಚದಾದ್ಯಂತ ಜುಲೈ 2ಕ್ಕೆ ಬಿಡುಗಡೆಯಾಗಲಿದೆ. ಅಡವಿ ಶೇಷ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಸಿನಿಮಾಕ್ಕೆ ಮಹೇಶ್ ಬಾಬು ಸಹ ನಿರ್ಮಾಪಕರಾಗಿದ್ದಾರೆ.
ಈ ಹಿಂದೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಅಡವಿ ಶೇಷ್ ‘ಸಂದೀಪ್ ಉನ್ನಿಕೃಷ್ಣನ್ ಅವರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಅವರ ಜೀವನಚರಿತ್ರೆಯನ್ನು ತೆರೆ ಮೇಲೆ ತರಲು ಯೋಚಿಸಿದ್ದೇನೆ’ ಎಂದಿದ್ದರು.
‘ಸಂದೀಪ್ ಅವರು ದೇಶಕ್ಕಾಗಿ ಕೊನೆಯ ಕ್ಷಣದವರೆಗೂ ಹೋರಾಡಿ ಜೀವ ತ್ಯಾಗ ಮಾಡಿದ್ದಾರೆ. ಆದರೆ ನನಗೆ ಅವರು ಬದುಕಿದ ರೀತಿ ನಿಜಕ್ಕೂ ಇಷ್ಟವಾಗಿತ್ತು. ಅವರ ಬಗ್ಗೆ ವಿವರಿಸಲು ನವೆಂಬರ್ 26 ಒಂದು ಚಾಪ್ಟರ್ ಅಲ್ಲ, ಆದರೆ ಅದು ಅವರ ಜೀವನದ ಮುಖ್ಯ ಭಾಗ. ಇಂತಹ ಹಲವು ಚಾಪ್ಟರ್‌ಗಳಿರುವ ಒಂದು ಪುಸ್ತಕ ಅವರ ಕಥೆ. ಆ ಕಾರಣಕ್ಕೆ ಅವರ ಬಗ್ಗೆ ಚಿತ್ರ ಮಾಡಲು ಹೊರಟಿದ್ದೇನೆ’ ಎಂದು ಅಡವಿ ಶೇಷ್ ಆಂಗ್ಲ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದರು.
ಈ ಚಿತ್ರದ ಚಿತ್ರಕಥೆಯನ್ನೂ ಅಡವಿ ಶೇಷ್ ಅವರೇ ಬರೆದಿದ್ದಾರೆ. ಈ ಸಿನಿಮಾಕ್ಕಾಗಿ ವರ್ಷಗಳ ಕಾಲ ಸಂದೀಪ್ ಉನ್ನಿಕೃಷ್ಣನ್ ಅವರ ಜೀವನದ ಕುರಿತು ಸಂಶೋಧನೆ ನಡೆಸಿದ್ದರು.
ಈ ಸಿನಿಮಾವನ್ನು ತೆಲುಗು ಹಾಗೂ ಹಿಂದಿಯಲ್ಲಿ ಏಕಕಾಲಕ್ಕೆ ಶೂಟಿಂಗ್ ಮಾಡಲಾಗಿದೆ. ಚಿತ್ರಕ್ಕೆ ಸೋನಿ ಪಿಕ್ಚರ್ಸ್ ರಿಲೀಸಿಂಗ್ ಇಂಟರ್‌ನ್ಯಾಷನಲ್, ಜಿ. ಮಹೇಶ್ ಬಾಬು ಎಂಟರ್‌ಟ್ರೈನ್‌ಮೆಂಟ್ ಹಾಗೂ ಎ ಪ್ಲಸ್ ಎಸ್ ಮೂವೀಸ್ ಸಂಸ್ಥೆಗಳು ಹಣ ಹೂಡಿಕೆ ಮಾಡಿವೆ. ಶಶಿ ಕಿರಣ್ ಟಿಕ್ಕಾ ನಿರ್ದೇಶನದ ಈ ಸಿನಿಮಾದಲ್ಲಿ ಶೋಭಿತಾ ಧುಲಿಪಾಲಾ ಹಾಗೂ ಸಾಯಿ ಮಂಜ್ರೇಕರ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.