ADVERTISEMENT

ನಟ ಮಹೇಶ್‌ ಬಾಬುಗೆ ಕೋವಿಡ್‌, ಇತ್ತ ಅಣ್ಣ ರಮೇಶ್‌ ಬಾಬು ನಿಧನ: ದುಃಖದಲ್ಲಿ ಕುಟುಂಬ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಜನವರಿ 2022, 6:39 IST
Last Updated 9 ಜನವರಿ 2022, 6:39 IST
ರಮೇಶ್ ಬಾಬು ಮತ್ತು ಮಹೇಶ್ ಬಾಬು -ಐಎಎನ್‌ಎಸ್‌ ಚಿತ್ರ
ರಮೇಶ್ ಬಾಬು ಮತ್ತು ಮಹೇಶ್ ಬಾಬು -ಐಎಎನ್‌ಎಸ್‌ ಚಿತ್ರ   

ಹೈದರಾಬಾದ್: ತೆಲುಗು ಹಿರಿಯ ನಟ ಕೃಷ್ಣ ಅವರ ಹಿರಿಯ ಪುತ್ರ, ನಟ ಮಹೇಶ್ ಬಾಬು ಅವರ ಸಹೋದರ ಘಟ್ಟಮನೇನಿ ರಮೇಶ್ ಬಾಬು (56) ಅನಾರೋಗ್ಯದಿಂದ ನಿಧನರಾಗಿದ್ದಾರೆ.

ಯಕೃತ್ತಿಗೆ (ಲಿವರ್) ಸಂಬಂಧಿತ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಶನಿವಾರ ತಡರಾತ್ರಿ ನಿಧನರಾಗಿದ್ದಾರೆ. ರಮೇಶ್‌ ನಿಧನಕ್ಕೆ ತೆಲುಗು ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಕುಟುಂಬದಿಂದ ಪತ್ರ: ರಮೇಶ್‌ ಬಾಬು ನಿಧನದ ಹಿನ್ನೆಲೆಯಲ್ಲಿ ಘಟ್ಟಮನೇನಿ ಕುಟುಂಬ ಪತ್ರ ಬರೆದಿದೆ. 'ನಮ್ಮ ಪ್ರೀತಿಯ ರಮೇಶ್ ಬಾಬು ಅವರ ನಿಧನದ ಸಂಗತಿಯನ್ನು ನಾವು ತೀವ್ರ ದುಃಖದಿಂದ ಹೇಳುತ್ತಿದ್ದೇವೆ. ಅವರು ನಮ್ಮೆಲ್ಲರ ಹೃದಯದಲ್ಲಿ ಶಾಶ್ವತವಾಗಿ ಇರುತ್ತಾರೆ. ನಮ್ಮ ಎಲ್ಲಾ ಹಿತೈಷಿಗಳು ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಬೇಕು ಮತ್ತು ಅಂತ್ಯಕ್ರಿಯೆಯ ಸ್ಥಳದಲ್ಲಿ ಗುಂಪು ಸೇರುವುದನ್ನು ತಪ್ಪಿಸುವಂತೆ ನಾವು ವಿನಂತಿ ಮಾಡುತ್ತಿದ್ದೇವೆ' ಎಂದು ಕುಟುಂಬದ ಕಡೆಯಿಂದ ತಿಳಿಸಲಾಗಿದೆ.

ADVERTISEMENT

ನಟ, ನಿರ್ಮಾಪಕರಾಗಿ ‘ರಮೇಶ್’

ಹಿರಿಯ ನಟ ಕೃಷ್ಣ ಅವರ ಮೊದಲ ಪುತ್ರನಾಗಿದ್ದ ರಮೇಶ್‌ ಬಾಬು ಬಾಲ ನಟನಾಗಿ ಚಿತ್ರರಂಗ ಪ್ರವೇಶ ಮಾಡಿದ್ದರು. 1974ರಲ್ಲಿ ತೆರೆಕಂಡ 'ಅಲ್ಲೂರಿ ಸೀತಾರಾಮರಾಜು' ಚಿತ್ರದಲ್ಲಿ ಮೊದಲು ಬಣ್ಣ ಹಚ್ಚಿದ್ದರು. ಬಳಿಕ ನಿರ್ಮಾಪಕರಾಗಿ ಕೆಲಸ ಮಾಡಿದ ಅವರು, ಸಹೋದರ ಮಹೇಶ್‌ ಬಾಬು ಅವರ ಸಿನಿಮಾಗಳನ್ನು ನಿರ್ಮಿಸಿದ್ದರು. ಮಹೇಶ್ ನಟಿಸಿದ್ದ ‘ಅರ್ಜುನ್’, ‘ಅತಿಥಿ’, ‘ಆಗಡು‘ ಚಿತ್ರಗಳನ್ನು ನಿರ್ಮಿಸಿದ್ದರು.

ರಮೇಶ್ ಬಾಬು ನಿಧನಕ್ಕೆ ನಟ ಚಿರಂಜೀವಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

ಶನಿವಾರ ಮಹೇಶ್‌ ಬಾಬು (46) ಅವರಿಗೆ ಕೋವಿಡ್‌ ದೃಢಪಟ್ಟಿತ್ತು. ಮನೆಯಲ್ಲಿಯೇ ಪ್ರತ್ಯೇಕ ವಾಸದಲ್ಲಿದ್ದು, ಸೂಕ್ತ ವೈದ್ಯಕೀಯ ಸಲಹೆಗಳನ್ನು ಪಡೆಯುತ್ತಿರುವುದಾಗಿ ಅವರು ತಿಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.