ಕನ್ನಡ ಚಿತ್ರರಂಗ ಗಟ್ಟಿಯಾದ ಕಥೆಗಳ ಕೊರತೆಯಿಂದ ಬಳಲುತ್ತಿರುವ ಹೊತ್ತಿನಲ್ಲಿ ಮಲಯಾಳಂ ಚಿತ್ರರಂಗದವರು ನಮ್ಮ ನಾಡಿನ ಕಥೆಗಳನ್ನಿಟ್ಟುಕೊಂಡು ಗಲ್ಲಾಪೆಟ್ಟಿಗೆಯನ್ನು ತುಂಬಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಬಿಡುಗಡೆಗೊಂಡ ಫಹಾದ್ ಫಾಸಿಲ್ ನಟನೆಯ ‘ಆವೇಶಂ’ ಚಿತ್ರ ಆ ಸಾಲಿಗೆ ಮತ್ತೊಂದು ಸೇರ್ಪಡೆ...
ಮಲಯಾಳಂ ಚಿತ್ರರಂಗದವರು ಬೆಂಗಳೂರು, ಮೈಸೂರು, ಮಂಗಳೂರು ಭಾಗಗಳಲ್ಲಿ ನಡೆಯುವ ಮಲಯಾಳಿಗಳ ಕಥೆಗಳನ್ನು ತಮ್ಮ ಭಾಷೆಯಲ್ಲಿ ಸಿನಿಮಾ ಮಾಡಿ ಗೆದ್ದ ಉದಾಹರಣೆಗಳು ಸಾಕಷ್ಟು ಸಿಗುತ್ತವೆ. ಮೊನ್ನೆ ತಾನೆ ತೆರೆಕಂಡು, ಈಗಲೂ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡುತ್ತಿರುವ ಫಹಾದ್ ಫಾಸಿಲ್ ನಟನೆಯ ‘ಆವೇಶಂ’ ಸಿನಿಮಾ ಈ ಸಾಲಿಗೆ ಮತ್ತೊಂದು ಸೇರ್ಪಡೆ. ಈಗಾಗಲೇ ₹100 ಕೋಟಿಗಿಂತ ಹೆಚ್ಚು ಬಾಚಿರುವ ಈ ಚಿತ್ರದ ನಿರ್ದೇಶಕ ಜಿತ್ತು ಮಾಧವನ್ ಅವರ ಹಿಂದಿನ ಸಿನಿಮಾ ‘ರೋಮಾಂಚಂ’ ಕೂಡ ಪೂರ್ತಿಯಾಗಿ ಬೆಂಗಳೂರಿನಲ್ಲಿ ನಡೆದ ಕಥೆ. ದೊಡ್ಡನಕುಂದಿಯಲ್ಲಿ ನಡೆದ ನೈಜ ಘಟನೆಯೊಂದನ್ನಿಟ್ಟುಕೊಂಡು ಸಿದ್ಧಗೊಂಡಿದ್ದ ಈ ಸಿನಿಮಾ ಕಳೆದ ವರ್ಷ ₹50 ಕೋಟಿ ಗಳಿಸಿತ್ತು.
‘ನಾನು ಹನ್ನೆರಡು ವರ್ಷ ಬೆಂಗಳೂರಿನಲ್ಲಿದ್ದೆ. ಓದಿದ್ದು, ಮೊದಲು ಕೆಲಸ ಮಾಡಿದ್ದು ಇಲ್ಲಿಯೇ. ತಿಳಿವಳಿಕೆ ಬಂದಾಗ ಇಲ್ಲಿದ್ದೆ. ಹೀಗಾಗಿ ಇಲ್ಲಿನ ಎಷ್ಟೋ ನೆನಪುಗಳು ಈಗಲೂ ಕಣ್ಣೆದುರಿಗಿವೆ. ನನ್ನದೇ ಸುತ್ತ ನಡೆದ ನೈಜ ಘಟನೆಯನ್ನಿಟ್ಟುಕೊಂಡು ‘ರೋಮಾಂಚಂ’ ಸಿನಿಮಾ ಮಾಡಿದೆ. ಜನಕ್ಕೆ ಇಷ್ಟವಾಯ್ತು. ‘ರೋಮಾಂಚಂ’ ಚಿತ್ರದ ಕೊನೆಯಲ್ಲಿ ಬೆಂಗಳೂರಿನ ರೂಮಿನಲ್ಲಿ ವಾಸವಿದ್ದ ನನ್ನ ಆ ನಾಲ್ವರು ಗೆಳೆಯರ ಚಿತ್ರವನ್ನು ಹಾಕಿದ್ದೇನೆ’ ಎನ್ನುತ್ತಾರೆ ನಿರ್ದೇಶಕ ಜಿತ್ತು ಮಾಧವನ್.
2018ರಲ್ಲಿ ವಿನೀತ್ ಶ್ರೀನಿವಾಸನ್ ಅವರ ‘ಅರವಿಂದಂಡೆ ಅತಿಥಿಗಳ್’ ಚಿತ್ರ ತೆರೆಕಂಡು ಯಶಸ್ವಿ ಆಗಿತ್ತು. ಕೊಲ್ಲೂರು ಮೂಕಾಂಬಿಕೆಯ ಸುತ್ತಲೂ ನಡೆಯುವ ಕಥೆಯನ್ನಾಧರಿಸಿದ ಸಿನಿಮಾವಿದು. ಕೊಲ್ಲೂರು, ನಿಟ್ಟೂರು, ಉಡುಪಿಯ ಸುತ್ತಲಿನ ಪರಿಸರವನ್ನು ಬಹಳ ಚೆಂದವಾಗಿ ಚಿತ್ರಿಸಿದ್ದರು.
ಕರುನಾಡಿನ ಕಥೆಗಳೊಂದಿಗೆ ಮಲೆಯಾಳಂ ಚಿತ್ರರಂಗದ ಈ ನಂಟು ಹೊಸತೇನಲ್ಲ. 1989ರಲ್ಲಿ ತೆರೆಕಂಡ ಮೋಹನ್ ಲಾಲ್ ನಟನೆಯ ಸೂಪರ್ ಹಿಟ್ ‘ನಾಡು ವಾಳಿಕಳ್’ ಚಿತ್ರದ ಪಾತ್ರದಲ್ಲಿ ಮೋಹನ್ ಲಾಲ್ ಬೆಂಗಳೂರಿನವರಾಗಿರುತ್ತಾರೆ. ಇವರದ್ದೇ ನಟನೆಯ ‘ವಂದನಂ’, ‘ಬಟರ್‌ಫ್ಲೈಸ್’ ಚಿತ್ರಗಳ ಕಥೆಯೂ ಸಿಲಿಕಾನ್ ಸಿಟಿಯಲ್ಲಿಯೇ ನಡೆಯುವಂಥದ್ದು.
ಬೆಂಗಳೂರು, ಮೈಸೂರು, ಮಂಗಳೂರು ಭಾಗದ ಕಥೆಗಳನ್ನಿಟ್ಟುಕೊಂಡು ಗೆದ್ದ ಮಲಯಾಳಂ ಸಿನಿಮಾಗಳ ಪಟ್ಟಿ ದೊಡ್ಡದಿದೆ. ಅಂಜಲಿ ಮೆನನ್ ನಿರ್ದೇಶನದ ‘ಬೆಂಗಳೂರು ಡೇಸ್’ ಸಂಚಲನ ಮೂಡಿಸಿತ್ತು. ನಿವಿನ್ ಪೌಲಿ, ದುಲ್ಕರ್ ಸಲ್ಮಾನ್, ಫಹಾದ್, ಪಾರ್ವತಿ ಮೆನನ್ ನಟನೆಯ ಸಿನಿಮಾ ಈಗ ನೋಡಿದರೂ ಬೆಂಗಳೂರು ಕುರಿತು ನವಿರು ಭಾವ ಮೂಡಿಸುತ್ತದೆ.
ಮಮ್ಮುಟಿ ಅಭಿನಯದ ‘ಸೈಲೆನ್ಸ್’, ದುಲ್ಕರ್ ನಟನೆಯ ‘ಹಂಡ್ರೆಡ್ ಡೇಸ್ ಆಫ್ ಲವ್’,ಟೋವಿನೊ ಥಾಮಸ್ ಅಭಿನಯದ ‘ಡಿಯರ್ ಫ್ರೆಂಡ್’, ‘ಮರಡೋನ’, ದಿಲೀಪ್ ಅವರ ‘ಡಾರ್ಲಿಂಗ್ ಡಾರ್ಲಿಂಗ್’, ಮುಕೇಶ್ ನಟನೆಯ ‘ಫಿಲಿಪ್ಸ್’, ಫಹಾದ್ ಅಭಿನಯದ ‘ಅಯಾಳ್ ನಾನಲ್ಲ’, ‘22 ಫೀಮೇಲ್ ಕೊಟ್ಟಾಯಂ’ ಸಿನಿಮಾಗಳಲ್ಲಿ ಬೆಂಗಳೂರು ಕಥಾಕೇಂದ್ರ. ಇಲ್ಲಿ ಚಿತ್ರೀಕರಣಗೊಳ್ಳದಿದ್ದರೂ, ‘ಜನಗಣಮನ’ ಸಿನಿಮಾದ ಕಥೆಯಲ್ಲಿ ರಾಮನಗರ ಬರುತ್ತದೆ. ‘ಪ್ರೇಮಂ’ ಚಿತ್ರದಲ್ಲಿ ಬೆಂಗಳೂರಿನ ಉಲ್ಲೇಖ ಬರುತ್ತದೆ. ಇದಲ್ಲದೇ ಮೈಸೂರನ್ನು ಕಥೆಯ ಭಾಗವಾಗಿಸಿಕೊಂಡ ಒಂದಷ್ಟು ಚಿತ್ರಗಳೂ ಸಿಗುತ್ತವೆ.
‘ಬೆಂಗಳೂರಿನ ಐಟಿ ಜಗತ್ತಿನ ಕಥೆ ಹೇಳುವ ಸಾಕಷ್ಟು ಸಿನಿಮಾಗಳು ಮಲಯಾಳದಲ್ಲಿ ಬಂದಿವೆ. ಕೊಲ್ಲೂರು ಮೂಕಾಂಬಿಕೆ ಕೇರಳದ ಹಲವರಿಗೆ ಮನೆ ದೇವರು. ಹೀಗಾಗಿ ದೇವಿಯ ಕುರಿತಾದ ಚಿತ್ರಗಳೂ ಒಂದಷ್ಟಿವೆ. ಮಂಗಳೂರು, ಕಾಸರಗೋಡು, ಕೊಡಗಿನ ಕಥೆಯನ್ನು ಹೊಂದಿರುವ ಚಿತ್ರಗಳಿಗೆ ಲೆಕ್ಕವಿಲ್ಲ. ವಿನೀತ್ ಶ್ರೀನಿವಾಸನ್ ನಿರ್ದೇಶನದ ‘ತಿರ’ ಸಿನಿಮಾ ಕರ್ನಾಟಕ–ಗೋವಾ ಗಡಿ ಬೆಳಗಾವಿಯಲ್ಲಿ ನಡೆಯುವ ಕಥೆಯನ್ನು ಹೊಂದಿದೆ. ಕೇರಳದಲ್ಲಿ ಓದು ಮುಗಿದ ನಂತರ ದುಬೈಗೆ ಹೋಗಬೇಕು, ಇಲ್ಲವಾದರೆ ಬೆಂಗಳೂರಿಗೆ ಹೋಗಬೇಕು ಎಂಬುದು ಬಹುತೇಕರ ಗುರಿಯಾಗಿರುತ್ತದೆ. ಅಷ್ಟರಮಟ್ಟಿಗೆ ಬೆಂಗಳೂರು ನಮ್ಮಗಳ ಮನಸ್ಸಿನಾಳಕ್ಕೆ ಇಳಿದಿದೆ. ನನ್ನ ಅಣ್ಣ 1995ರಲ್ಲಿ ಬೆಂಗಳೂರಿಗೆ ಬಂದು ವಾಸವಾಗಿದ್ದರು. ಆಗ ನಾನು ವಯನಾಡಿನಿಂದ ಬೆಂಗಳೂರಿಗೆ ಬರುತ್ತಿದ್ದೆ. ‘ಆವೇಶಂ’ ಸಿನಿಮಾ ನೋಡುವಾಗ ಆಗ ನೋಡಿದ ಸಾಕಷ್ಟು ಪಾತ್ರಗಳು, ಸ್ಥಳಗಳು ನೆನಪಾದವು. ಮುಖ್ಯವಾಗಿ ಈ ಸಿನಿಮಾಗಳ ಪಾತ್ರಗಳು ಕನೆಕ್ಟ್ ಆಗುತ್ತವೆ. ಬದುಕಿಗೆ ಬಹಳ ಹತ್ತಿರವೆನಿಸುತ್ತವೆ. ನಮ್ಮದೇ ಬಳಗದಲ್ಲಿನ ಪಾತ್ರಗಳಂತಿರುತ್ತವೆ. ಆ ಕಾರಣಕ್ಕೆ ಸಿನಿಮಾ ಇಷ್ಟವಾಗುತ್ತದೆ’ ಎನ್ನುತ್ತಾರೆ ಕನ್ನಡ ಚಿತ್ರರಂಗದಲ್ಲಿ ಜನಪ್ರಿಯ ಡಿಐ ಮತ್ತು ಕಲರಿಸ್ಟ್ ಆಗಿರುವ ಕೇರಳ ಮೂಲದ ಟಾಮ್ ಸಿ ಜೋಸ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.