ಒಟಿಟಿ ಪ್ಲಾಟ್‌ಫಾರ್ಮ್‌ಗಳನ್ನು ತುಂಬ ಚೆನ್ನಾಗಿ ಬಳಕೆ ಮಾಡಿಕೊಳ್ಳುತ್ತಿರುವ ಸಿನಿಮಾ ಇಂಡಸ್ಟ್ರಿಗಳ ಪೈಕಿ ಮಲಯಾಳಂ ಚಿತ್ರರಂಗ ಮುನ್ನೆಲೆಗೆ ಬಂದು ನಿಂತಿದೆ. ಕೊರೊನಾ ವೈರಸ್ ಮತ್ತು ಲಾಕ್‌ಡೌನ್‌ನಂತಹ ಸಂಕಷ್ಟ ಕಾಲದಲ್ಲೂ ಮಲಯಾಳಂ ಚಿತ್ರರಂಗ ಒಂದರ ಮೇಲೊಂದು ಸಿನಿಮಾಗಳನ್ನು ಓಟಿಟಿಯಲ್ಲೇ ಬಿಡುಗಡೆ ಮಾಡುತ್ತಿದೆ.
ಒಟಿಟಿ ಪ್ಲಾಟ್‌ಫಾರ್ಮ್‌ಗಳು ಥಿಯೇಟರ್‌ಗಳಂತೆ ನಿರ್ಮಾಪಕರಿಗೆ ಆರ್ಥಿಕವಾಗಿ ಜೇಬು ತುಂಬುವ ವಿಚಾರದಲ್ಲಿ ಹಿನ್ನಡೆಯಿದ್ದಿರಬಹುದು. ಆದರೆ ಮಲಯಾಳಂ ಚಿತ್ರಗಳ ಪ್ರಸಿದ್ಧಿ ಹೆಚ್ಚಾಗುತ್ತಿದೆ. ಲಾಕ್‌ಡೌನ್‌ನಂತಹ ಕೈಕಟ್ಟಿದ ಪರಿಸ್ಥಿತಿಯಲ್ಲೂ ದಿ ಗ್ರೇಟ್ ಇಂಡಿಯನ್ ಕಿಚನ್, ಜೋಜಿ, ಇರುಳ್, ಸಿ ಯು ಸೂನ್, ನಾಯಟ್ಟುಗಳಂತಹ ಅದ್ಭುತ ಕಥೆಗಳುಳ್ಳ ಸಿನಿಮಾಗಳನ್ನು ಚಿತ್ರಿಕರಿಸಿದ್ದು ಮಲಯಾಳಂ ಚಿತ್ರರಂಗದ ಕ್ರಿಯಾಶೀಲತೆಗೆ ಹಿಡಿದ ಕೈಗನ್ನಡಿ. ವೆಳ್ಳಾಂ, ಆರಕ್ಕರಿಯಂ, ಒನ್, ದಿ ಪ್ರೀಸ್ಟ್, ದೃಶ್ಯಂ 2 ಮುಂತಾದ ಚಿತ್ರಗಳು ಒಟಿಟಿಯಲ್ಲಿ ಸಾಕಷ್ಟು ಸದ್ದು ಮಾಡಿದವು.
ಇದೀಗ ಏಪ್ರಿಲ್ ತಿಂಗಳ ನಂತರ ಪುನಃ ಲಾಕ್‌ಡೌನ್ ಎದುರಾಗಿರುವ ಹಿನ್ನೆಲೆ ಮಲಯಾಳಂ ಚಿತ್ರರಂಗ ಮತ್ತಷ್ಟು ಹೊಸ ಸಿನಿಮಾಗಳನ್ನು ಒಟಿಟಿಯಲ್ಲೇ ಬಿಡುಗಡೆ ಮಾಡಲು ಚಿಂತಿಸಿವೆ. ಈ ಸಾಲಿನಲ್ಲಿ ಫಹದ್ ಫಾಜಿಲ್ ನಟನೆಯ ಮಲಿಕ್, ಪೃಥ್ವಿರಾಜ್ ಸುಕುಮಾರ್ ನಟನೆಯ ಕೋಲ್ಡ್ ಕೇಸ್ ಹಾಗೂ ಮೋಹನ್ ಲಾಲ್ ಅಭಿನಯದ ಮರಕ್ಕರ್: ಅರಬ್ಬಿಕಡಲಿಂಡೆ ಸಿಂಹಂ ಸೇರಿದಂತೆ ಅನೇಕ ಚಿತ್ರಗಳು ಒಟಿಟಿಯಲ್ಲಿ ಬಿಡುಗಡೆಗೊಳ್ಳಲು ಸಿದ್ಧಗೊಂಡಿವೆ.
ನೇರವಾಗಿ ಒಟಿಟಿಯಲ್ಲಿ ಮಲಿಕ್ ಮತ್ತು ಕೋಲ್ಡ್ ಕೇಸ್ ಸಿನಿಮಾಗಳನ್ನು ಬಿಡುಗಡೆ ಮಾಡುವುದಾಗಿ ಎರಡು ಚಿತ್ರಗಳ ನಿರ್ಮಾಪಕ ಆ್ಯಂಟೊ ಜೋಸೆಫ್ ಫಿಲ್ಮ್ ಎಕ್ಸಿಬಿಟರ್ಸ್ ಯುನೈಟೆಡ್ ಆರ್ಗನೈಸೇಷನ್ ಆಫ್ ಕೇರಳ(FEUOK)ಗೆ ಪತ್ರ ಬರೆದಿದ್ದಾರೆ ಎಂದು ದಿ ಹಿಂದೂ ವರದಿ ಮಾಡಿದೆ.
ಮಹೇಶ್ ನಾರಾಯಣನ್ ನಿರ್ದೇಶನದ ಮಲಿಕ್ ಚಿತ್ರವು ಮೇ 13ಕ್ಕೆ ಬಿಡುಗಡೆ ಮಾಡಲು ನಿಗದಿ ಪಡಿಸಲಾಗಿತ್ತು. ಪ್ರಿಯದರ್ಶನ್ ನಿರ್ದೇಶನದ ಮರಕ್ಕರ್: ಅರಬ್ಬಿಕಡಲಿಂಡೆ ಸಿಂಹಂ ಚಿತ್ರವೂ ಮೇ 13ಕ್ಕೆ ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಥ್ರಿಲ್ಲರ್ ಸಿನಿಮಾ ಕೋಲ್ಡ್ ಕೇಸ್ ತನು ಬಾಲಕ್ ನಿರ್ದೇಶನದಲ್ಲಿ ಮೂಡಿಬಂದಿದೆ.
ಕಳೆದ ವರ್ಷ ಜುಲೈ 3ರಂದು ಶನವಾಸ್ ನಾರಣಿಪುಳ ನಿರ್ದೇಶನದ ಸೂಫಿಯುಂ ಸುಜಾತೆಯುಂ ಮಲಯಾಳಂ ಚಿತ್ರವು ನೇರವಾಗಿ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆಯಾಗಿತ್ತು. ಕೇರಳ ಮಾತ್ರವಲ್ಲದೆ ದಕ್ಷಿಣ ಭಾರತದಾದ್ಯಂತ ಸೂಫಿಯುಂ ಸುಜಾತೆಯುಂ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಮಲಯಾಳಂ ಚಿತ್ರರಂಗದಲ್ಲಿ ಒಟಿಟಿಯಲ್ಲಿ ನೇರವಾಗಿ ಬಿಡುಗಡೆ ಮಾಡಿದ ಚಿತ್ರಗಳು ಗೆಲ್ಲುವ ಭರವಸೆ ತಂದುಕೊಟ್ಟಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.