ನಟ ವಿಜಯ್ ರಾಘವೇಂದ್ರ ನಾಯಕನಾಗಿರುವ ‘ಮಾಲ್ಗುಡಿ ಡೇಸ್’ ಚಂದನವನದಲ್ಲಿ ಕುತೂಹಲ ಹೆಚ್ಚಿಸಿರುವ ಚಿತ್ರ. ಈ ಚಿತ್ರ ನಿರ್ದೇಶಿಸಿರುವುದು ಕಿಶೋರ್ ಮೂಡಬಿದ್ರೆ.
ಬಾಲನಟನಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದ ವಿಜಯ್ ರಾಘವೇಂದ್ರ ಆ್ಯಕ್ಷನ್, ರೊಮ್ಯಾಂಟಿಕ್ ಸೇರಿದಂತೆ ಹಲವು ಬಗೆಯ ಪಾತ್ರಗಳಿಗೆ ಜೀವ ತುಂಬಿದ್ದಾರೆ. ‘ಮಾಲ್ಗುಡಿ ಡೇಸ್’ ಚಿತ್ರದಲ್ಲಿ ಮೊದಲ ಬಾರಿಗೆ ಯುವ ಸಾಹಿತಿ ಹಾಗೂ 75 ವರ್ಷದ ಮುತ್ಸದಿಯಾಗಿ ಅವರು ಕಾಣಿಸಿಕೊಂಡಿದ್ದಾರೆ. ಅವರ ವಯಸ್ಸಾದ ಗೆಟಪ್ ನಿರೀಕ್ಷೆ ಹೆಚ್ಚಿಸಿದೆ. ಈ ಸಿನಿಮಾದ ಚಿತ್ರೀಕರಣ ಮುಗಿದಿದ್ದು, ಬಿಡುಗಡೆಗೆ ಚಿತ್ರತಂಡ ಸಿದ್ಧತೆ ನಡೆಸಿದೆ.
ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಯೂಟ್ಯೂಬ್‌ನಲ್ಲಿ ಸದ್ದು ಮಾಡುತ್ತಿದೆ. ಬಿಡುಗಡೆಯಾದ ಒಂದು ದಿನದೊಳಗೆ ಮೂರು ಲಕ್ಷಕ್ಕೂ ಹೆಚ್ಚು ಜನರು ಇದನ್ನು ವೀಕ್ಷಿಸಿದ್ದಾರೆ. ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಯ ಬಳಿಕ ಕುತೂಹಲ ಜಾಸ್ತಿಯಾಗಿತ್ತು. ಈಗ ಟೀಸರ್ ಸಿನಿಮಾದ ಮೇಲೆ ನಿರೀಕ್ಷೆಯನ್ನು ದ್ವಿಗುಣಗೊಳಿಸಿದೆ.
ವಿಜಯ್ ರಾಘವೇಂದ್ರ ಅವರ ಪ್ರಾಸ್ತೆಟಿಕ್ ಮೇಕಪ್ ಈ ಚಿತ್ರದ ವಿಶೇಷ. ಬಾಗಿಲ ಬಳಿ ನಿಂತಿರುವ ಸಾಹಿತಿ ಲಕ್ಷ್ಮಿನಾರಾಯಣ ಮಾಲ್ಗುಡಿ (ವಿಜಯ್ ರಾಘವೇಂದ್ರ) ಗಾಢ ಆಲೋಚನೆಯಲ್ಲಿರುತ್ತಾರೆ. ಆಗ ಜೋರಾಗಿ ಮಳೆ ಸುರಿಯಲಾರಂಭಿಸುತ್ತದೆ. ಮೊಮ್ಮಕ್ಕಳು ಮಳೆಯಲ್ಲಿ ಆಟ ಆಡಲು ಹೋಗುತ್ತಾರೆ. ಅವರನ್ನು ಲಕ್ಷ್ಮಿನಾರಾಯಣ ಮಾಲ್ಗುಡಿ ಕರೆಯುತ್ತಾರೆ. ಕೊನೆಗೆ, ಅವರೂ ಮಳೆಯನ್ನು ಆಸ್ವಾದಿಸುತ್ತಾರೆ. ಒಂದು ನಿಮಿಷದ ಈ ಟೀಸರ್‌ನ ಹಿನ್ನೆಲೆ ಸಂಗೀತ ಮುದ ನೀಡುತ್ತದೆ.
ಟೀಸರ್ ಬಿಡುಗಡೆಗೊಳಿಸಿದ ನಟ ಶಿವರಾಜ್‌ಕುಮಾರ್. ‘ಇದು ಉತ್ತಮ ಚಿತ್ರ. ಕನ್ನಡಿಗರು ಇಂತಹ ಸಿನಿಮಾಗಳಿಗೆ ಬೆಂಬಲ ನೀಡಬೇಕು. ವಿಜಯ್ ರಾಘವೇಂದ್ರ ಅವರಿಗೂ ಈ ಚಿತ್ರದಿಂದ ಒಳ್ಳೆಯದಾಗಲಿ. ನಾನು ಕೂಡ ಸಿನಿಮಾ ನೋಡಲು ಉತ್ಸುಕನಾಗಿದ್ದೇನೆ’ ಎಂದು ಚಿತ್ರತಂಡಕ್ಕೆ ಶುಭ ಕೋರಿದರು.
ಮುಂದಿನ ವಾರ ಹಾಡುಗಳ ಬಿಡುಗಡೆಗೆ ಚಿತ್ರತಂಡ ಸಿದ್ಧತೆ ನಡೆಸಿದೆ. ಗ್ರೀಷ್ಮಾ ಶ್ರೀಧರ್ ಈ ಚಿತ್ರದ ನಾಯಕಿ. ಗಗನ್ ಬಡೇರಿಯಾ ಸಂಗೀತ ಸಂಯೋಜಿಸಿದ್ದಾರೆ. ಉದಯ್ ಲೀಲಾ ಅವರ ಛಾಯಾಗ್ರಹಣವಿದೆ. ಕೆ. ರತ್ನಾಕರ್ ಕಾಮತ್ ಬಂಡವಾಳ ಹೂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.