ADVERTISEMENT

‘ಮಾಮಿ’ ಉತ್ಸವದಲ್ಲಿ ಕನ್ನಡ ಚಿತ್ರಗಳ ಕಂಪು

ಶಶಿಕುಮಾರ್ ಸಿ.
Published 26 ಸೆಪ್ಟೆಂಬರ್ 2018, 12:58 IST
Last Updated 26 ಸೆಪ್ಟೆಂಬರ್ 2018, 12:58 IST
ನಾತಿಚರಾಮಿ ಸಿನಿಮಾದಲ್ಲಿ ಶೃತಿ ಹರಿಹರನ್ ಹಾಗೂ ಸಂಚಾರಿ ವಿಜಯ್
ನಾತಿಚರಾಮಿ ಸಿನಿಮಾದಲ್ಲಿ ಶೃತಿ ಹರಿಹರನ್ ಹಾಗೂ ಸಂಚಾರಿ ವಿಜಯ್   

ದೇಶದ ಪ್ರತಿಷ್ಠಿತ ಚಿತ್ರೋತ್ಸವಗಳಲ್ಲಿ ಒಂದಾದ ‘ಜಿಯೊ ಮಾಮಿ ಮುಂಬೈ ಫಿಲ್ಮ್ ಫೆಸ್ಟಿವಲ್’ನಲ್ಲಿ ಈ ಬಾರಿ ಕನ್ನಡದ ಕಂಪು ಪಸರಿಸಲಿದೆ. ‘ಬಳೆಕೆಂಪ’ ಸಿನಿಮಾ ಹಾಗೂ ‘ನಾತಿಚರಾಮಿ’ ಸಿನಿಮಾವು ಈ ಚಿತ್ರೋತ್ಸವದಲ್ಲಿ ಪ್ರದರ್ಶನಕ್ಕೆ ಆಯ್ಕೆಯಾಗಿದೆ.

ಇಂಡಿಯಾ ಗೋಲ್ಡ್ ವಿಭಾಗದಲ್ಲಿ ಕನ್ನಡ ಸಿನಿಮಾ ನಿರ್ದೇಶದ ಈರೇಗೌಡ ನಿರ್ದೇಶನದ ‘ಬಳೆಕೆಂಪ’ ಸಿನಿಮಾವು ಭಾರತದ ಕೆಲವು ಅಪರೂಪದ ಅತ್ಯುತ್ತಮ ಚಿತ್ರಗಳೊಂದಿಗೆ ಸ್ಪರ್ದಿಸುತ್ತಿದೆ. ನಿರ್ದೇಶಕ ಮಂಸೋರೆ ನಿರ್ದೇಶನದ ‘ನಾತಿಚರಾಮಿ’ ಚಿತ್ರವುಇಂಡಿಯನ್ ಸ್ಟೋರೀಸ್ ವಿಭಾಗದಲ್ಲಿ ಪ್ರದರ್ಶನಗೊಳ್ಳಲಿದೆ. ಈ ಚಿತ್ರೋತ್ಸವಕ್ಕೆ ತಮ್ಮ ಸಿನಿಮಾಗಳು ಆಯ್ಕೆಯಾಗಿರುವುದು ಈ ಇಬ್ಬರೂ ನಿರ್ದೇಶಕರ ಸಂತಸವನ್ನು ಇಮ್ಮಡಿಗೊಳಿಸಿದೆ.

‘ಮಾಮಿ ಮುಂಬೈ ಫಿಲ್ಮ್‌ ಫೆಸ್ಟಿವಲ್’ ಸಹಯೋಗದಲ್ಲಿಆಕ್ಸ್‌ಫಾಮ್ ಇಂಡಿಯಾ ಸಂಸ್ಥೆಯು ‘ಬೆಸ್ಟ್‌ ಫೀಲ್ಮ್ ಆನ್ ಜೆಂಡರ್ ಇಕ್ವಿಲಿಟಿ’ (ಲಿಂಗಸಮಾನತೆ ಸಾರುವ ಉತ್ತಮ ಸಿನಿಮಾ) ಶೀರ್ಷಿಕೆಯಡಿ ಆಕ್ಸ್‌ಫಾಮ್ ಸ್ಪರ್ಧೆಗೆ ‘ಬಳೆಕೆಂಪ’ ಹಾಗೂ ‘ನಾತಿಚರಾಮಿ’ ಚಿತ್ರಗಳು ಆಯ್ಕೆಯಾಗಿವೆ. ಈ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆಯುವ ಚಿತ್ರಕ್ಕೆ ₹10 ಲಕ್ಷ ನಗದು ಬಹುಮಾನ ನೀಡಲಾಗುತ್ತದೆ. ಸಾಮಾಜಿಕ ಸಮಾನತೆ ಮತ್ತು ಸಾಮರಸ್ಯ ಸ್ಥಾಪನೆಯಲ್ಲಿ ಚಲನಚಿತ್ರದ ಪ್ರಾಮುಖ್ಯತೆ ಹಾಗೂಲಿಂಗಸಮಾನತೆಯ ದಿಸೆಯಲ್ಲಿ, ಸಾಮಾಜಿಕ ರೂಢಿಗಳ ಕುರಿತು ಧನಾತ್ಮಕ ಚಿತ್ರಗಳನ್ನು ಮಾಡುವ ಚಿತ್ರನಿರ್ಮಾಪಕ, ನಿರ್ದೇಶಕರಿಗೆ ಈ ಬಹುಮಾನವನ್ನು ಕೊಡಲಾಗುತ್ತದೆ.

ADVERTISEMENT
ಬಳೆಕೆಂಪ ಸಿನಿಮಾದ ದೃಶ್ಯ

ಸಾಮಾನ್ಯರ ಜೀವನ ಕಥೆ

ಬಳೆ ಮಾರಾಟ ಮಾಡುವ ಕೆಂಪಣ್ಣ ಹಾಗೂ ಸೌಭಾಗ್ಯ ದಂಪತಿಯ ಜೀವನದ ಏಳುಬೀಳುಗಳ ಕಥಾಹಂದರವುಳ್ಳ ಸಿನಿಮಾ ‘ಬಳೆಕೆಂಪ’. 103 ನಿಮಿಷಗಳುಳ್ಳ ಈ ಸಿನಿಮಾವು ನಿರ್ದೇಶಕ ಈರೇಗೌಡ ಅವರ ಕನಸಿನ ಕೂಸು.

ಜ್ಞಾನೇಶ್, ಭಾಗ್ಯಶ್ರೀ, ಸಿ.ಎಸ್.ಚಂದ್ರಶೇಖರ್ ಹಾಗೂ ಡಿ.ಪಿ.ನಾಗರಾಜು ಅವರು ಸಿನಿಮಾದಲ್ಲಿ ನಟಿಸಿದ್ದಾರೆ. ಭಾಗ್ಯಶ್ರೀ ಅವರ ಹೊರತಾಗಿ ಉಳಿದವರು ಇದೇ ಮೊದಲ ಬಾರಿಗೆ ಬಣ್ಣ ಹಚ್ಚಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನದ ನೊಗವನ್ನು ಈರೇಗೌಡ ಅವರು ಹೊತ್ತಿದ್ದಾರೆ.

‘ದೇಶದ ನಾನಾ ಕಡೆಗಳಿಂದ ಅತ್ಯುತ್ತಮ ಸಿನಿಮಾಗಳು ಈ ಚಿತ್ರೋತ್ಸವದಲ್ಲಿ ಭಾಗಿಯಾಗಿವೆ. ಅವುಗಳ ಪೈಕಿ ‘ಬಳೆಕೆಂಪ’ವೂ ಪ್ರದರ್ಶನ ಕಾಣುತ್ತಿರುವುದೇ ಹೆಮ್ಮೆಯ ವಿಚಾರ. ಅತ್ಯುತ್ತಮ ಸಿನಿಮಾಗಳನ್ನು ಹೊರತರಲು, ಇದರಿಂದ ನನಗೆ ಪ್ರೋತ್ಸಾಹ ಸಿಕ್ಕಂತಾಗಿದೆ’ ಎನ್ನುತ್ತಾರೆ ಈರೇಗೌಡ.

‌ಕನಸು ನನಸು

‘ಕೇರಳ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ನನ್ನ ಸಿನಿಮಾ ಪ್ರದರ್ಶನ ಕಾಣಬೇಕು ಎಂಬುದು ನನ್ನ ಕನಸಾಗಿತ್ತು. ಪ್ರವಾಹದಿಂದಾಗಿ ಈ ಬಾರಿ ಕೇರಳ ಫೀಲ್ಮ್ ಫೆಸ್ಟಿವಲ್ ರದ್ದುಗೊಳಿಸಲಾಗಿತ್ತು. ಇದರಿಂದ ನಿರಾಸೆಗೊಂಡಿದ್ದೆ.ಮಾಮಿ ಮುಂಬೈ ಫಿಲ್ಮ್‌ ಫೆಸ್ಟಿವಲ್‌ ಕೇರಳದಷ್ಟೇ ಪ್ರತಿಷ್ಠಿತವಾದದ್ದು. ಹೀಗಾಗಿ, ಅಲ್ಲಿ ಪ್ರಯತ್ನಿಸಿದೆ. ಪ್ರದರ್ಶನಕ್ಕೆ ಆಯ್ಕೆಯಾಗಿರುವುದು ತುಂಬಾ ಖುಷಿ ಕೊಟ್ಟಿದೆ’ ಎನ್ನುತ್ತಾರೆ ‘ನಾತಿಚರಾಮಿ’ ಸಿನಿಮಾದ ನಿರ್ದೇಶಕ ಮಂಸೋರೆ.

‘113 ನಿಮಿಷಗಳ ಈ ಸಿನಿಮಾದಲ್ಲಿ ನಟ ಸಂಚಾರಿ ವಿಜಯ್ ಹಾಗೂ ನಟಿ ಶೃತಿ ಹರಿಹರನ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಪ್ರಮುಖ ಪಾತ್ರದಲ್ಲಿ ಶರಣ್ಯ ನಟಿಸಿದ್ದಾರೆ. ಇದೇ ಮೊದಲ ಬಾರಿಗೆ ಚಿತ್ರೋತ್ಸವದಲ್ಲಿ ಸಿನಿಮಾ ಪ್ರದರ್ಶನಗೊಳ್ಳಲಿದ್ದು, ವೀಕ್ಷಕರ ಪ್ರತಿಕ್ರಿಯೆಗೆ ಕಾತುರನಾಗಿದ್ದೇನೆ’ ಎಂದರು.

‘ಐಟಿ ಕಂಪನಿಯಲ್ಲಿ ಕೆಲಸ ಮಾಡುವ ಸಾಫ್ಟ್‌ವೇರ್ ಎಂಜಿನಿಯರ್ ಹಾಗೂ ಸಿವಿಲ್ ಎಂಜಿನಿಯರ್‌ ನಡುವಿನ ಕಥೆಗಳು ಈ ಸಿನಿಮಾದ ಕಥಾಹಂದರ. ಸಣ್ಣ ಎಳೆಯೊಂದು ಕಥೆಯಾಗಿ, ದೃಶ್ಯ ಮಾಧ್ಯಮದಲ್ಲಿ ರೂಪ ತಳೆದು, ಚಲನಚಿತ್ರವಾಗುತ್ತದೆ. ಆ ಚಿತ್ರಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನದ ಅವಕಾಶ ಸಿಕ್ಕಿದೆ ಎನ್ನುವುದಕ್ಕಿಂತ ಹೆಚ್ಚಿನ ಸಾರ್ಥಕತೆ ಇನ್ನೇನಿದೆ’ ಎನ್ನುವ ಅವರು‘ನಾತಿಚರಾಮಿ’ ಎನ್ನುವ ಕನಸಿಗೆ ಜೀವ ತುಂಬಿ ನನಸಾಗಿಸಿದವರಿಗೆ ಧನ್ಯವಾದ ಅರ್ಪಿಸುವುದನ್ನು ಮರೆಯಲಿಲ್ಲ.

ಚಿತ್ರೋತ್ಸವದ ಬಗ್ಗೆ ಒಂದಿಷ್ಟು

ದೇಶದಲ್ಲಿ ಸಾಕಷ್ಟು ಚಿತ್ರೋತ್ಸವಗಳು ನಡೆಯುತ್ತಲೇ ಇರುತ್ತವೆ. ಆದರೆ, ಕೇರಳ, ಗೋವಾ, ಪುಣೆ, ಕೋಲ್ಕತ್ತಾ ಹಾಗೂ ಮಾಮಿ ಮುಂಬೈ ಚಿತ್ರೋತ್ಸವಗಳಿಗೆ ಹೆಚ್ಚು ಮಹತ್ವ ಇದೆ.ದೇಶದ ಎಲ್ಲ ರಾಜ್ಯಗಳ ಸಿನಿಮಾ ನಿರ್ದೇಶಕರು ಈ ಸಿನಿಮೋತ್ಸವಗಳಲ್ಲಿ ತಮ್ಮ ಚಿತ್ರಗಳ ಪ್ರದರ್ಶನಕ್ಕೆ ಹಾತೊರೆಯುತ್ತಾರೆ. ಆದರೆ, ಅವಕಾಶ ಸಿಗುವುದು ಕೆಲವರಿಗೆ ಮಾತ್ರ.

ಮಾಮಿ ಮುಂಬೈ ಫಿಲ್ಮ್‌ ಫೆಸ್ಟಿವಲ್ ದೇಶದ ಅತಿ ದೊಡ್ಡ ಸಿನಿಮೋತ್ಸವವಾಗಿದ್ದು, ಈ ಬಾರಿ ಇದು ತನ್ನ 20ನೇ ವರ್ಷದ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಭಾರತೀಯ ಸಿನಿಮಾಗಳನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ವೇದಿಕೆ ಕಲ್ಪಿಸಿಕೊಡಲು ಇದು ಸಹಕಾರಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.