ರಾಯಪುರ: ಬಾಲಿವುಡ್ ನಟ ಶಾರುಖ್ ಖಾನ್ ಅವರಿಗೆ ಜೀವಬೆದರಿಕೆ ಸಂದೇಶ ಕಳುಹಿಸಿದ್ದ ಪ್ರಕರಣ ಸಂಬಂಧ, ಮುಂಬೈ ಪೊಲೀಸರು ಮಂಗಳವಾರ ಛತ್ತೀಸಗಢದ ರಾಜಧಾನಿ ರಾಯಪುರದಲ್ಲಿ ವಕೀಲರೊಬ್ಬರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಪ್ರಕರಣದ ತನಿಖೆಗಾಗಿ ಮುಂಬೈ ಪೊಲೀಸರು ನವೆಂಬರ್ 7ರಂದು ರಾಯಪುರಕ್ಕೆ ತೆರಳಿದ್ದರು. ವಕೀಲ ಫೈಜಾನ್ ಖಾನ್ ಅವರಿಗೆ ವಿಚಾರಣೆಗಾಗಿ ಸಮನ್ಸ್ ನೀಡಿದ್ದರು.
‘ಫೈಜಾನ್ ಅವರನ್ನು ಬಂಧಿಸಿರುವುದಾಗಿ ಮುಂಬೈ ಪೊಲೀಸರು ಮಂಗಳವಾರ ರಾಯಪುರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ’ ಎಂದು ರಾಯಪುರ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಸಿಂಗ್ ತಿಳಿಸಿದರು.
‘ಪ್ರಾಥಮಿಕ ಮಾಹಿತಿ ಪ್ರಕಾರ, ಫೈಜಾನ್ ಅವರ ಹೆಸರಿನಲ್ಲಿ ನೋಂದಣಿಯಾದ ಫೋನ್ ನಂಬರ್ ಮೂಲಕ ಶಾರುಖ್ ಖಾನ್ ಅವರಿಗೆ ಬೆದರಿಕೆ ಕರೆ ಮಾಡಲಾಗಿದೆ’ ಎಂದು ಹೇಳಿದರು.
ವಿಚಾರಣೆ ವೇಳೆ ಫೈಜಾನ್ ಅವರು, ‘ನನ್ನ ಫೋನ್ ಕಳೆದುಹೋಗಿದೆ ಮತ್ತು ಈ ಸಂಬಂಧ ನವೆಂಬರ್ 2ರಂದು ದೂರು ನೀಡಿದ್ದೇನೆ’ ಎಂಬುದಾಗಿ ತಿಳಿಸಿದ್ದಾರೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.