ADVERTISEMENT

ಮನೀಶಾ ದಿಲ್‌ಸೆ ಮಾತು

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2020, 19:45 IST
Last Updated 31 ಮಾರ್ಚ್ 2020, 19:45 IST
ಮನೀಶಾ ಕೊಯಿರಾಲಾ
ಮನೀಶಾ ಕೊಯಿರಾಲಾ   

ನಟನೆಯ ವಿಚಾರದಲ್ಲಿ ತಾವು ಈಗ ಮೊದಲಿಗಿಂತ ಬಹಳಷ್ಟು ಬದಲಾಗಿರುವುದಾಗಿ ಮನೀಶಾ ಕೊಯಿರಾಲಾ ಭಾವಿಸಿದ್ದಾರೆ. ಭಾವನಾತ್ಮಕ ಅಭಿವ್ಯಕ್ತಿ ಹೆಚ್ಚು ಬೇಕಿರುವ ಪಾತ್ರಗಳನ್ನು ಅವರು ನಿಭಾಯಿಸುತ್ತಿದ್ದಾರೆ.

1990ರ ಹಾಗೂ 2000ನೆಯ ದಶಕದಲ್ಲಿ ಮನೀಶಾ ಅವರ ಹೆಸರು ಮನೆಮಾತಾಗಿತ್ತು. ‘ಬಾಂಬೆ’, ‘ಖಾಮೋಶಿ’, ‘ದಿಲ್‌ ಸೆ’ ಸಿನಿಮಾಗಳಲ್ಲಿ ಮರೆಯಲಾಗದ ಅಭಿನಯ ತೋರಿದ್ದ ಮನೀಶಾ ಅವರು ಈಗ ತಾವು ನಿಭಾಯಿಸುತ್ತಿರುವ ಪಾತ್ರಗಳು ಖುಷಿ ಕೊಡುತ್ತಿವೆ ಎಂದು ಹೇಳಿದ್ದಾರೆ.

‘ನಾನು ಹಿಂದೆ ನಿಭಾಯಿಸುತ್ತಿದ್ದ ಪಾತ್ರಗಳು ನನ್ನಿಂದ ವಿಶೇಷ ಕೌಶಲ ಬಯಸುತ್ತಿರಲಿಲ್ಲ. ಆದರೆ ನಾನು ಇಂದು ನಿಭಾಯಿಸುತ್ತಿರುವ ಪಾತ್ರಗಳಿಗಾಗಿ ನಾನು ವಿಶೇಷ ಆಸಕ್ತಿ ವಹಿಸಬೇಕಾಗುತ್ತದೆ. ಸವಾಲುಗಳು ಎದುರಾದಾಗ ನೀವು ನಿಮ್ಮ ಮಿತಿಗಳನ್ನು ಮೀರಿ ನಿಲ್ಲುತ್ತೀರಿ. ಒಳ್ಳೆಯ ಸಾಧನೆ ನೀಡುತ್ತೀರಿ’ ಎನ್ನುವುದು ಮನೀಶಾ ಅವರು ಕಂಡುಕೊಂಡ ಸತ್ಯ.

ADVERTISEMENT

ಸಿನಿಮಾಗಳಲ್ಲಿ ಕಥೆಯ ನಿರೂಪಣೆ ವಿಧಾನ ಬದಲಾಗುತ್ತಿದೆ. ಹಾಗಾಗಿ, ತಮಗೆ ಎದುರಾಗುವ ಯಾವುದೇ ಬದಲಾವಣೆ ಹಾಗೂ ಸವಾಲುಗಳಿಗೆ ಸ್ಪಂದಿಸುವ ಮನೋಭಾವ ಕಲಾವಿದರಿಗೆ ಇರಬೇಕು ಎಂದು 49 ವರ್ಷ ವಯಸ್ಸಿನ ಇವರು ಹೇಳುತ್ತಾರೆ. ‘ನಾವು ಕಲಾವಿದರಾಗಿ ಬೆಳೆಯಬೇಕು ಎಂದಾದರೆ, ನಿರಂತರವಾಗಿ ಹೊಸದನ್ನು ಕಲಿಯುತ್ತಿರಬೇಕು. ಅನಗತ್ಯವಾದ ಕೆಲವನ್ನು ಮರೆಯುತ್ತ ಇರಬೇಕು ಕೂಡ’ ಎಂದು ಹೇಳಿದ್ದಾರೆ.

ನೆಟ್‌ಫ್ಲಿಕ್ಸ್‌ ವೇದಿಕೆಗಾಗಿ 2018ರಲ್ಲಿ ಸಿದ್ಧಪಡಿಸಲಾದ ‘ಲಸ್ಟ್‌ ಸ್ಟೋರಿಸ್‌’ ಕಾರ್ಯಕ್ರಮದಲ್ಲಿ ಮನೀಶಾ ನಿಭಾಯಿಸಿದ ಪಾತ್ರವು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಈಗ ಮನೀಶಾ ಅವರು ‘ಮಸ್ಕಾ’ ಎನ್ನುವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ನಿರ್ದೇಶಕ ದಿಬಾಕರ್ ಬ್ಯಾನರ್ಜಿ ಅವರು ನೆಟ್‌ಫ್ಲಿಕ್ಸ್‌ಗಾಗಿ ಸಿದ್ಧಪಡಿಸುತ್ತಿರುವ ‘ಫ್ರೀಡಂ’ ಕಾರ್ಯಕ್ರಮದಲ್ಲಿ ಕೂಡ ಮನೀಶಾ ಕಾಣಿಸಿಕೊಳ್ಳಲಿದ್ದಾರೆ.

ಮನೀಶಾ ಅವರು ಹಿರಿತೆರೆಯ ಮೇಲೆ ಪ್ರದರ್ಶನಗೊಳ್ಳುವ ಸಿನಿಮಾಗಳಿಂದ ವೆಬ್ ವೇದಿಕೆಗಳ ಕಡೆ ಮುಖ ಮಾಡಿದ್ದು ಆಕಸ್ಮಿಕ. ‘ನಾನು ಯಾವತ್ತೂ ಎಲ್ಲವನ್ನೂ ಯೋಜಿಸಿ ಕಾರ್ಯರೂಪಕ್ಕೆ ತರುವವಳಲ್ಲ. ನನಗೆ ಸಿಕ್ಕ ಅವಕಾಶಗಳನ್ನು ಚೆನ್ನಾಗಿ ಬಳಸಿಕೊಂಡಿದ್ದೆ, ಅಷ್ಟೇ’ ಎಂದು ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.