ADVERTISEMENT

ಮಂಸೋರೆ ಸಂದರ್ಶನ: ‘ಕಾಮ ಹೆಣ್ಣಿನ ಗೌರವ ನಿರ್ಧರಿಸಬಾರದು’

ಜಗದೀಶ ಅಂಗಡಿ
Published 18 ಆಗಸ್ಟ್ 2019, 19:30 IST
Last Updated 18 ಆಗಸ್ಟ್ 2019, 19:30 IST
ಮಂಸೋರೆ
ಮಂಸೋರೆ   

ತಮ್ಮ ಎರಡನೇ ಚಲನಚಿತ್ರ ‘ನಾತಿಚರಾಮಿ’ಯ ಮೂಲಕ ಕನ್ನಡಕ್ಕೆ ಐದು ರಾಷ್ಟ್ರ ಪ್ರಶಸ್ತಿಗಳನ್ನು ತಂದಿತ್ತ ಪ್ರತಿಭಾವಂತ ನಿರ್ದೇಶಕ ಮಂಸೋರೆ. ಅವರ ಮೊದಲನೆಯ ಚಿತ್ರ ‘ಹರಿವು’ ರಾಷ್ಟ್ರ ಪ್ರಶಸ್ತಿಗೆ ಭಾಜನವಾಗಿತ್ತು. ಒಂದೇ ಚಿತ್ರಕ್ಕೆ ಐದು ಪ್ರಶಸ್ತಿಗಳು ಸಂದಿದ್ದು ಅನೇಕ ವರ್ಷಗಳ ನಂತರ. ಹೆಣ್ಣಿನ ಮುಕ್ತ ಜೀವನ ಹಾಗೂ ಕಾಮದ ಬಗ್ಗೆ ಸೂಕ್ಷ್ಮವಾಗಿ ಚರ್ಚಿಸುವ ‘ನಾತಿಚರಾಮಿ’ ಸಮಾಜದ ಎಲ್ಲಾ ವಲಯಗಳ ಗಮನ ಸೆಳೆದಿತ್ತು. ಪ್ರಶಸ್ತಿ ಹಾಗೂ ಸಿನಿಮಾದ ಕುರಿತಾಗಿ ‘ಚೌಚೌ’ ಜೊತೆ ಮಂಸೋರೆ ಮುಕ್ತವಾಗಿ ಮಾತನಾಡಿದ್ದಾರೆ

***

ಪ್ರಶಸ್ತಿ ಯಾರಿಗಾಗಿ ಹಾಗೂ ಏತಕ್ಕಾಗಿ ಸಮರ್ಪಣೆ?

ADVERTISEMENT

ಪುರುಷ ಪ್ರಧಾನ ಸಮಾಜ ಗಂಡು ಹೆಣ್ಣಿಗೆ ಕೊಡುತ್ತಾನೆ ಎಂದೇ ತಿಳಿದಿದೆ. ಪುರುಷ ಹೆಣ್ಣಿಗೆ ಕೊಡುವುದು ಏನೂ ಇಲ್ಲ. ಅವಳಿಗೆ ಸಿಗಬೇಕಾದ ಅಷ್ಟೂ ಅವಳ ಹಕ್ಕು. ‘ನಾತಿಚರಾಮಿ’ಗೆ ಸಂದ ಅಷ್ಟೂ ಪ್ರಶಸ್ತಿಗಳು ಹೆಣ್ಣಿಗೆ ಸಮರ್ಪಣೆ.

‘ನಾತಿಚರಾಮಿ’ ಕಲ್ಪನೆ ಮೂಡಿದಾಗ ಈ ಚಿತ್ರ ಪ್ರಶಸ್ತಿ ಪಡೆಯುತ್ತದೆಯೆಂದು ಅನಿಸಿತ್ತಾ?

ಖಂಡಿತ ಇಲ್ಲ. ಕತೆ ಕಾಮಕ್ಕೆ ಸಂಬಂಧಿಸಿದ್ದು. ತೀರ್ಪುಗಾರರು ಬಹುತೇಕ ಗಂಡಸರೇ ಆಗಿರುತ್ತಾರೆ. ಹೀಗಾಗಿ ಈ ಚಿತ್ರಕ್ಕೆ ಪ್ರಶಸ್ತಿ ಬರುತ್ತದೆ ಎಂದು ಊಹಿಸಿರಲೇ ಇಲ್ಲ. ನನಗೆ ಪ್ರಶಸ್ತಿಗಿಂತ ಅನ್ನಿಸಿದ ಕತೆ ಹೇಳಬೇಕಿತ್ತು. ಹೇಳಿದೆ.

ಹೆಚ್ಚಿನ ನಿರೀಕ್ಷೆ ಇದ್ದಾಗಲೂ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಓಡಲಿಲ್ಲ. ಹೀಗೇಕೆ?

ನಮ್ಮ ವೀಕ್ಷಕರಲ್ಲಿ ತಪ್ಪು ಕಲ್ಪನೆಯೊಂದು ಇದ್ದಂತಿದೆ. ಕಲಾತ್ಮಕ ಚಿತ್ರಗಳಲ್ಲಿ ಮನರಂಜನೆ ಇರಲಾರದು ಎಂದು ಅವರು ತಿಳಿದಂತಿದೆ. ಈ ಕಲ್ಪನೆ ಕಳೆದ ಎರಡು ದಶಕಗಳಿಂದೀಚೆಗೆ ಬಲವಾದಂತಿದೆ. ಎರಡು ದಶಕಗಳ ಮೊದಲು ಗಂಭೀರವಾದ ಪರ್ಯಾಯ ಚಿತ್ರಗಳಲ್ಲೂ ಮನರಂಜನೆ ಇತ್ತು. ಇತ್ತೀಚಿನ ದಶಕಗಳಲ್ಲಿ ಜನಪ್ರಿಯ ಹಾಗು ಪರ್ಯಾಯ ಚಿತ್ರಗಳ ಪರಿಭಾಷೆ ಹಾಗೂ ಮನರಂಜನೆ ಬದಲಾದಂತಿದೆ. ‘ನಾತಿಚರಾಮಿ’ಯಲ್ಲಿ ಗಂಭೀರವಾದ ಕತೆ ಹೇಳುತ್ತಲೇ ಮನರಂಜನೆಗೆ ಒತ್ತು ಕೊಟ್ಟಿದ್ದೆ. ಆದರೆ, ಪ್ರೇಕ್ಷಕರು ಈ ಅಂಶವನ್ನು ಗಮನಿಸಿದಂತೆ ಕಾಣಲಿಲ್ಲ. ಹೀಗಾಗಿ ನಿರೀಕ್ಷೆಗೆ ತಕ್ಕ ಹಾಗೆ ಇದು ಓಡಲಿಲ್ಲ.

‘ನಾತಿಚರಾಮಿ’ ಬದುಕಿಗಾಗಿ ಹೋರಾಟವಾ? ದೈಹಿಕ ಸುಖದ ಅಗತ್ಯವಾ?

ಎರಡೂ ಅಲ್ಲ. ಆಹಾರದಂತೆ ಕಾಮವೂ ದೇಹಕ್ಕೆ ಅಗತ್ಯ. ಈ ಎರಡೂ ಅಗತ್ಯಗಳು ಪೂರೈಕೆಗೊಂಡರೆ ಆರೋಗ್ಯವಂತ ಸಮಾಜ ಕಟ್ಟಬಹುದು. ‘ನಾತಿಚರಾಮಿ’ ಉತ್ತಮ ಹಾಗೂ ಮುಕ್ತವಾದ ಜೀವನದ ಸಲುವಾಗಿನ ಹೋರಾಟ.

ಮನಸ್ಸನ್ನು ದೂರ ಸರಿಸಿದ ದೈಹಿಕ ಕಾಮನೆ ನೆಮ್ಮದಿ ತರಬಹುದಾ?

ಸಾಧ್ಯವಿಲ್ಲ. ದೇಹ, ಮನಸ್ಸು ಹಾಗೂ ಕಾಮನೆಗಳು ಪರಸ್ಪರ ಬೆಸೆದುಕೊಂಡಿವೆ. ಹೀಗಾಗಿಯೇ ‘ನಾತಿಚರಾಮಿ’ಯಲ್ಲಿ ಪ್ರೀತಿಯಿಲ್ಲದ ಕಾಮ, ಕಾಮವಿಲ್ಲದ ಪ್ರೀತಿ ಎರಡೂ ಅಪೂರ್ಣ ಎಂಬ ಸಂದೇಶವನ್ನು ಒತ್ತಿ ಹೇಳಿದ್ದೇವೆ.

ಹೆಣ್ಣಿನ ಸುತ್ತ ಸುತ್ತಿದರೂ ಚಿತ್ರ ‘ಫೆಮಿನಿಸಮ್’ (ಸ್ತ್ರೀ ವಾದಿ)ಗೆ ಓಳಪಟ್ಟಂತಿಲ್ಲ. ಏಕೆ?

ಇನ್ನೂ ನನಗೆ ‘ಫೆಮಿನಿಸಮ್‌’ನ ಒಟ್ಟಾರೆ ಚೌಕಟ್ಟು ಹಾಗೂ ಮಾನದಂಡಗಳು ಸಂಪೂರ್ಣವಾಗಿ ಅರ್ಥವಾಗಿಲ್ಲ. ಇದು ನನಗೆ ಕಲಿಕಾ ಹಂತ. ಮೇಲಾಗಿ ಈ ಚಿತ್ರದ ನಿರ್ದೇಶಕ ಒಬ್ಬ ಗಂಡಸು. ಇದು ಚಿತ್ರದ ಒಟ್ಟಾರೆ ಕೊರತೆ. ನನಗನ್ನಿಸಿದಂತೆ ಹೆಣ್ಣು ಇನ್ನೂ ಒಂದು ಚೌಕಟ್ಟಿನಲ್ಲಿ ಬಂಧಿಯಾಗಿದ್ದಾಳೆ. ಮನೋಭಾವದಲ್ಲಿ ಇನ್ನೂ ಹೆಣ್ಣಿಗೆ ಮುಕ್ತತೆ ಬೇಕಿದೆ. ಹೆಣ್ಣು ಕಾಮದ ಬಗ್ಗೆ ಚರ್ಚಿಸಲು ಹಿಂದೇಟು ಹಾಕುತ್ತಾಳೆ. ಹೆಣ್ಣಿನ ಮನೋಭಾವನೆಯಲ್ಲಾಗಬಹುದಾದ ಮುಕ್ತತೆ ಮಾತ್ರ ಫೆಮಿನಿಸಮ್ ಆಗಬಲ್ಲದು. ಕಾಮ ಹೆಣ್ಣಿನ ಗೌರವವನ್ನು ನಿರ್ಧರಿಸುವ ಮಾನದಂಡವಾಗಬಾರದು ಎಂಬುದನ್ನು ಗಂಡು ಸ್ಪಷ್ಟವಾಗಿ ಅರಿಯಬೇಕಿದೆ. ‘ಪ್ರಜಾವಾಣಿ’ಯಲ್ಲಿ ಪ್ರಕಟವಾದ ಲೇಖಕಿ ಆಶಾ ಕೆ ಅವರ ಲೇಖನಗಳು ನನ್ನನ್ನು ಸ್ತ್ರೀವಾದಿ ವಿಚಾರಕ್ಕೆ ಪ್ರೋತ್ಸಾಹಿಸಿದವು. ಫೆಮಿನಿಸಮ್ ನನಗೆ ಸರಿಯಾಗಿ ಅರ್ಥವಾಗಬೇಕಿತ್ತು. ಹೀಗಾಗಿ ಹೆಣ್ಣಿಗೆ ಒಂದು ಚಿಕ್ಕ ನ್ಯಾಯ ಒದಗಿಸುವ ಪ್ರಯತ್ನವನ್ನು ‘ನಾತಿಚರಾಮಿ’ ಮೂಲಕ ಮಾಡಿದ್ದೇನೆ.

ಲಾಬಿ ಮಾಡದೇ ಪ್ರಶಸ್ತಿ ಪಡೆಯಲು ಸಾಧ್ಯವಿಲ್ಲ ಎಂಬ ಮಾತು ನಿಜವಾ?

ನನಗೆ ಗೊತ್ತಿಲ್ಲ. ಲಾಬಿ ಎಂದರೇನು ಎಂದು ನನಗೆ ತಿಳಿದಿಲ್ಲ. ಜನ ನನ್ನ ಸಿನಿಮಾ ಮೆಚ್ಚಬೇಕು ಅಷ್ಟೇ. ‘ನಾತಿಚರಾಮಿ’ಗೆ ಬಂದ ಪ್ರಶಸ್ತಿಗಳು ನಾನು ಸರಿಯಾದ ಮಾರ್ಗದಲ್ಲಿ ನಡೆಯುತ್ತಿದ್ದೇನೆ ಎಂಬುದರ ಪ್ರತೀಕ. ಸರಿಯಾದ ಮಾರ್ಗವೇ ನನ್ನ ಅಂತಿಮ ಗುರಿ, ಪ್ರಶಸ್ತಿಯಲ್ಲ.

ಜನಪ್ರಿಯ ಸಿನಿಮಾ ಮಾಡುವ ಹಂಬಲ ಇದೆಯಾ?

ನನಗೆ ಪ್ರಯೋಗಶೀಲತೆ ಮುಖ್ಯ. ‘ಹರಿವು’ ಚಿತ್ರದ ನಂತರ ಸುಮಾರು 15 ಜನ ನಿರ್ಮಾಪಕರು ಅದೇ ರೀತಿಯ ಸಿನಿಮಾ ಮಾಡಿಕೊಡುವಂತೆ ನನಗೆ ಕೇಳಿದರು. ನಾನು ಒಪ್ಪಲಿಲ್ಲ. ಯಾವುದೇ ಪ್ರಯತ್ನವನ್ನು ಮರುಕಳಿಸುವುದು ನನಗೆ ಬೇಕಿಲ್ಲ. ಹೊಸತನ ಹಾಗೂ ಸ್ವಂತದ್ದು ಮಾಡುವ ಹಂಬಲ ನನ್ನದು.

ಈ ಸಲ ಗುಜರಾತಿ ಸಿನಿಮಾಗಳಿಗೆ ಹೆಚ್ಚಿನ ಪ್ರಶಸ್ತಿಗಳು ಸಂದಂತಿವೆ. ಇದು ಕಾಣದ ಕೈಗಳ ಕೆಲಸವಾ?

ಗೊತ್ತಿಲ್ಲ, ಗೊತ್ತಿಲ್ಲ, ಗೊತ್ತಿಲ್ಲ!!

ಚಂದನವನದಲ್ಲಿ ಜನಪ್ರಿಯ ಹಾಗೂ ಪರ್ಯಾಯ ವರ್ಗಗಳ ನಡುವೆ ತುಂಬಾ ಗ್ಯಾಪ್. ಇದನ್ನು ಮುಚ್ಚುವ ಬಗೆ?

ನನ್ನ ಅನುಭವದಲ್ಲಿ ಈ ಎರಡೂ ವರ್ಗಗಳಲ್ಲಿ ಪರಸ್ಪರರ ಬಗೆಗೆ ತಾತ್ಸಾರವಿದೆ. ನಾವೇ ಶ್ರೇಷ್ಠರು ಎಂಬ ಕಲ್ಪನೆ ಬಲವಾಗಿದೆ. ನಾನು ಎರಡೂ ವರ್ಗದವರ ಜೊತೆ ಕೆಲಸ ಮಾಡಿದ್ದೇನೆ. ಜನಪ್ರಿಯ ವರ್ಗದ ಪ್ರೇಕ್ಷಕರಿಗೆ ಮನರಂಜನೆ ಒದಗಿಸುವುದು ಮುಖ್ಯವಾದರೆ, ಪರ್ಯಾಯದವರಿಗೆ ಸಮಸ್ಯೆಗಳನ್ನು ಹೇಳುತ್ತಲೇ ಸಮಾಜದ ಓರೆಕೋರೆಗಳನ್ನು ತಿದ್ದಬೇಕಿದೆ. ಎರಡೂ ನಿಲುವುಗಳು ಸರಿ ಹಾಗೂ ತಪ್ಪು. ಇತ್ತೀಚಿನ ದಿನಗಳಲ್ಲಿ ತೆಲುಗು ಹಾಗೂ ಮಲಯಾಳಂ ಚಿತ್ರರಂಗದಲ್ಲಿ ತುಸು ಹೆಚ್ಚೆ ಎನ್ನುವಂತೆ ಜನಪ್ರಿಯ ಹಾಗೂ ಪರ್ಯಾಯ ಅಂಶಗಳನ್ನು ಸೇರಿಸಿ ಚಿತ್ರಗಳನ್ನು ನಿರ್ಮಿಸುವ ಪ್ರಯೋಗಶೀಲತೆ ಕಂಡುಬರುತ್ತಿದೆ. ಅಲ್ಲಿನ ಪ್ರೇಕ್ಷಕ ಅಂತಹ ಪ್ರಯೋಗಶೀಲತೆಯನ್ನು ಅಪ್ಪಿ-ಒಪ್ಪಿಕೊಂಡಿದ್ದಾನೆ. ಇದು ನಮಗೆ ಮಾದರಿಯಂತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.