ADVERTISEMENT

ಪ್ರೇಮಕಥೆಯತ್ತ ಹೊರಳಿದ ಮಂಸೋರೆ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2024, 23:44 IST
Last Updated 23 ಆಗಸ್ಟ್ 2024, 23:44 IST
ಪ್ರಿಯಾಂಕ 
ಪ್ರಿಯಾಂಕ    

‘19.20.21’ ಸಿನಿಮಾ ಬಳಿಕ ನಿರ್ದೇಶಕ ಮಂಸೋರೆ ಅವರು ಹೊಸ ಪ್ರಾಜೆಕ್ಟ್‌ ಕೈಗೆತ್ತಿಕೊಂಡಿದ್ದಾರೆ. ‘ದೂರ ತೀರ ಯಾನ’ ಎಂಬ ಪ್ರೇಮಕಥೆಯನ್ನು ಹಿಡಿದು ಪ್ರೇಕ್ಷಕರೆದುರಿಗೆ ಬರಲಿರುವ ಮಂಸೋರೆ, ಸೆ.3ರಿಂದ ಶೂಟಿಂಗ್‌ ಆರಂಭಿಸಲಿದ್ದಾರೆ. 

ಡಿ.ಕ್ರಿಯೇಷನ್ಸ್‌ನ ದೇವರಾಜ್‌ ಆರ್‌. ನಿರ್ಮಾಣ ಮಾಡುತ್ತಿರುವ ಈ ಸಿನಿಮಾದ ಶೀರ್ಷಿಕೆ ಟೀಸರ್‌ ಇತ್ತೀಚೆಗೆ ಅನಾವರಣಗೊಂಡಿತು. ‘ನಾನು ಇಲ್ಲಿಯವರೆಗೆ ಮಾಡಿರುವ ಸಿನಿಮಾಗಳು ನನಗೆ ತೃಪ್ತಿಕೊಟ್ಟಿವೆ. ಕಥೆ ಹೇಳುವ ರೀತಿಯಲ್ಲಿ ಹೊಸತನ ರೂಢಿಸಿಕೊಳ್ಳಬೇಕು ಎಂದು ಒಂದು ವರ್ಷ ಅವಧಿ ತೆಗೆದುಕೊಂಡೆ. ನನ್ನದೊಂದು ಹೊಸ ಪಯಣ ಎನ್ನಬಹುದು. ಇದೊಂದು ಪ್ರೇಮಕಥೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರನ್ನು ತಲುಪೋಣ ಎಂದು ಈ ಕಥೆ ಆರಿಸಿಕೊಂಡಿದ್ದೇನೆ. ಇದೊಂದು ನ್ಯೂಜನರೇಷನ್‌ ಪ್ರೇಮಕಥೆ. ಕಳೆದ ಒಂದು ವರ್ಷದ ಅಧ್ಯಯನ ನನ್ನ ಬದಲಾವಣೆ ಹಿಂದಿದೆ. ಪ್ರೇಕ್ಷಕರು ಯಾವ ವಿಷಯಗಳನ್ನು ತೆಗೆದುಕೊಳ್ಳುತ್ತಾರೆ ಎನ್ನುವುದನ್ನು ಅರಿತಿದ್ದೇನೆ. ಸಿನಿಮಾದಲ್ಲಿ ಮಂಸೋರೆ ಸಿಗ್ನೇಚರ್‌ ಇದ್ದರೂ ಹೇಳುವ ರೀತಿ ಹೊಸತಾಗಿದೆ. ನಾಲ್ಕು ಸಿನಿಮಾಗಳನ್ನು ಬಿಟ್ಟು ಹೊಸ ರೀತಿ ಸಿನಿಮಾ ಇದು.’ ಎನ್ನುತ್ತಾರೆ ಮಂಸೋರೆ. 

ಕಥೆಯ ಬಗ್ಗೆ ಸುಳಿವು ನೀಡಿದ ಮಂಸೋರೆ, ‘ಇದೊಂದು ಟ್ರಾವೆಲಿಂಗ್‌ ಸ್ಟೋರಿ. ಚಿತ್ರದ ಮೊದಲ ಹತ್ತು ನಿಮಿಷ ಮಾತ್ರ ಬೆಂಗಳೂರಿನಲ್ಲಿ ನಡೆಯುತ್ತದೆ. ಉಳಿದೆಲ್ಲಾ ಕಥೆ ದಾರಿಯಲ್ಲಿ ಸಾಗುತ್ತದೆ. ಬೆಂಗಳೂರಿನಿಂದ ಗೋವಾಕ್ಕೆ ಹೊರಟ ಹುಡುಗ - ಹುಡುಗಿ ತಮ್ಮ ಪ್ರೀತಿಯನ್ನು ಹೊಸ ರೀತಿಯಲ್ಲಿ ಕಂಡುಕೊಳ್ಳುವ ಕಥೆ ಇದಾಗಿದೆ. ಇದನ್ನು ಮ್ಯೂಸಿಕಲ್‌ ಜರ್ನಿ ಸಿನಿಮಾ ಎನ್ನಲೂಬಹುದು. ವೃತ್ತಿ–ಪ್ರವೃತ್ತಿ ನಡುವೆ ಪ್ರೀತಿಯ ಹುಡುಕಾಟವಿದು’ ಎಂದರು. 

ADVERTISEMENT

ಚಿತ್ರದಲ್ಲಿ ವಿಜಯ್ ಕೃಷ್ಣ ನಾಯಕರಾಗಿ ಹಾಗೂ ಪ್ರಿಯಾಂಕ ಕುಮಾರ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಬಕೇಶ್ ಹಾಗೂ ಕಾರ್ತಿಕ್ ಸಂಗೀತ ಸಂಯೋಜಿಸುತ್ತಿರುವ ಆರು ಹಾಡುಗಳು ಸಿನಿಮಾದಲ್ಲಿರಲಿವೆ. ಶೇಖರ್‌ಚಂದ್ರ ಛಾಯಾಚಿತ್ರಗ್ರಹಣ, ನಾಗೇಂದ್ರ ಕೆ. ಉಜ್ಜನಿ ಸಂಕಲನ, ಚೇತನ ತೀರ್ಥಹಳ್ಳಿ ಸಂಭಾಷಣೆ ಚಿತ್ರಕ್ಕಿದೆ. 

ವಿಜಯ್ ಕೃಷ್ಣ
ಮಂಸೋರೆ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.