ADVERTISEMENT

ಮಾನುಷಿ ಚಿಲ್ಲರ್‌ ಫಿಟ್‌ನೆಸ್‌ ಚಿತ್ತಾಪಾರಿ

ಕೆ.ಎಂ.ಸಂತೋಷ್‌ ಕುಮಾರ್‌
Published 22 ಡಿಸೆಂಬರ್ 2019, 19:45 IST
Last Updated 22 ಡಿಸೆಂಬರ್ 2019, 19:45 IST
ಮಾನುಷಿ ಚಿಲ್ಲರ್‌
ಮಾನುಷಿ ಚಿಲ್ಲರ್‌   

ಸೌಂದರ್ಯದ ಜತೆಗೆ ಸೂಕ್ಷ್ಮ ಬುದ್ಧಿಯಿಂದಲೂ ‘ಜಗದೇಕ ಸುಂದರಿ’ ಪಟ್ಟವನ್ನು 2017ರಲ್ಲಿ ಮುಡಿಗೇರಿಸಿಕೊಂಡವರು ಹರಿಯಾಣದ ಚೆಲುವೆ ಮಾನುಷಿ ಚಿಲ್ಲರ್‌. ತನ್ನ ಸೌಂದರ್ಯದಿಂದಲೇ ಜಗತ್ತಿನ ಸೌಂದರ್ಯ ಪ್ರಿಯರ ಕಣ್ಮನ, ಸೌಂದರ್ಯವರ್ಧಕ ಉತ್ಪನ್ನಗಳ ತಯಾರಿಕಾ ಕಂಪನಿಗಳ ಕಣ್ಣುಗಳೂ ತನ್ನತ್ತ ನೆಡುವಂತೆ ಮಾಡಿದ್ದಾರೆ. ಈಗ ಬಾಲಿವುಡ್ ಸಿನಿ ಮೇಕರ್‌ಗಳ ಕಣ್ಣುಗಳೂ ಅವರತ್ತ ನೆಟ್ಟಿವೆ.

ಬಾಲಿವುಡ್‌ನ ಲಕ್ಕಿಮ್ಯಾನ್‌ ಎನ್ನಬಹುದಾದ ಅಕ್ಷಯ್‌ಕುಮಾರ್‌ ನಟನೆಯ ‘ಸಾಮ್ರಾಟ್‌ ಪೃಥ್ವಿರಾಜ್‌ ಚೌಹಾಣ್‌’ ಚಿತ್ರದಲ್ಲಿ ಮಾನುಷಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದು ಮಾನುಷಿಗೆ ಡೆಬು ಸಿನಿಮಾ.ರಾಣಿ ಸಂಯೋಗಿತಾ (ಸಂಯುಕ್ತ) ಪಾತ್ರದಲ್ಲಿ ಅವರು ಚಿತ್ರರಸಿಕರನ್ನು ರಂಜಿಸಲು ರೆಡಿಯಾಗಿದ್ದಾರೆ. ತೆರೆಯ ಮೇಲೆ ಚಿಲ್ಲರ್‌ ಸೌಂದರ್ಯ ಮತ್ತು ನಟನೆ ಕಣ್ತುಂಬಿಕೊಳ್ಳಲು ಸಿನಿಪ್ರಿಯರೂ ಕಾತರರಾಗಿದ್ದಾರೆ.

ಬಳುಕುವ ಬಳ್ಳಿಯಂತಹ ದೇಹಕಾಯದ ‌ಈ ಚೆಲುವೆ, ವಿಶ್ವದಾದ್ಯಂತ ಅದೆಷ್ಟೋ ಮಂದಿ ಫಿಟ್‌ನೆಸ್‌ ಪ್ರಿಯರ ಪಾಲಿಗೂ ರೋಲ್‌ ಮಾಡೆಲ್‌. ಮಾನುಷಿಯಂತಾಗಲು ನಿತ್ಯ ಡಯಟ್‌ ಮಾಡುತ್ತಾ, ಜಿಮ್‌ನಲ್ಲಿ ಬೆವರು ಹರಿಸುವ ಯವತಿಯರ ಸಂಖ್ಯೆಯೂ ಕಡಿಮೆ ಇಲ್ಲ.ಇವತ್ತಿಗೂ ಒಂದಿನಿತು ಕುಂದದ ಮಾನುಷಿಯವರ ಸೌಂದರ್ಯ ಮತ್ತು ಫಿಟ್‌ನೆಸ್‌ ಗುಟ್ಟು ಅನುಕರಿಸುವಂತಿದೆ.

ADVERTISEMENT

ಮಾನುಷಿ ಫಿಟ್‌ನೆಸ್‌ಗೆತಾನೆಷ್ಟು ಒತ್ತು ನೀಡುತ್ತೇನೆ, ಜಿಮ್‌ನಲ್ಲಿಯಾವ ರೀತಿ ವರ್ಕೌಟ್‌ ಮಾಡುತ್ತೇನೆ ಎನ್ನುವುದನ್ನು ತಮ್ಮ ಅಭಿಮಾನಿಗಳಿಗೆ ತಿಳಿಸಲು ಮತ್ತು ಇದು ಯುವಜನರಿಗೂ ಪ್ರೇರಣೆಯಾಗಲೆಂದು ತಮ್ಮವರ್ಕೌಟ್‌ ಚಿತ್ರಗಳನ್ನು ಟ್ವಿಟರ್‌, ಇನ್‌ಸ್ಟಾಗ್ರಾಮ್‌ನಲ್ಲೂ ಆಗಾಗಹಂಚಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಫಿಟ್‌ನೆಸ್‌ ಫೋಟೊಗಳು ನೆಟ್ಟಿಗರ ಚಿತ್ತ ಸೆಳೆದಿವೆ.

ವೈದ್ಯಕೀಯ ಶಿಕ್ಷಣ ಪಡೆದಿರುವ ಮಾನುಷಿ, ಸಾಮಾಜಿಕ ಚಟುವಟಿಕೆಗಳು ಮತ್ತು ನಟನೆ ಜತೆಗೆ ತಾವು ರಾಯಭಾರಿಯಾಗಿರುವ ಉತ್ಪನ್ನಗಳ ಪ್ರಚಾರ ಹೀಗೆ ಹತ್ತು ಹಲವು ಕೆಲಸ– ಕಾರ್ಯಗಳ ನಿಮಿತ್ತ ಸದಾ ಪ್ರಯಾಣ ಮಾಡುತ್ತಲೇ ಇರಬೇಕು. ಇದರ ನಡುವೆ ತಮ್ಮ ತಾರಾ ವರ್ಚಸ್ಸು ಮತ್ತು ತಮಗಿರುವ ಬೇಡಿಕೆ ಉಳಿಸಿಕೊಳ್ಳುವ ಸಲುವಾಗಿ ಆರೋಗ್ಯ ಮತ್ತು ದೈಹಿಕ ಫಿಟ್‌ನೆಸ್‌ ಕಾಯ್ದುಕೊಳ್ಳಲು ನಿರಂತರ ಪ್ರಯತ್ನಿಸಲೇಬೇಕು ಸಹ. ಅದಕ್ಕಾಗಿ ಅವರು ದೈಹಿಕ ಕಸರತ್ತು ಮತ್ತು ಯೋಗದ ಬಗ್ಗೆ ವಾರದಲ್ಲಿ ಕನಿಷ್ಠ ಐದು ಬಾರಿಯಾದರೂ ಪರಿಣತರಿಂದಲೂ ತರಬೇತಿ ಪಡೆದುಕೊಳ್ಳುತ್ತಾರೆ.

ದೇಹವನ್ನು ಬಳುಕುವಂತೆ, ಸೂಪೂರವಾಗಿ ಮತ್ತು ಕಟ್ಟು ಮಸ್ತಾಗಿಇಟ್ಟುಕೊಳ್ಳಲು ಯೋಗಕ್ಕಿಂತ ಸಹಕಾರಿಯಾದ ಅಭ್ಯಾಸ ಮತ್ತೊಂದಿಲ್ಲ ಎಂದು ನಂಬಿರುವ ಮಾನುಷಿ, ನಿತ್ಯ ಯೋಗಾಭ್ಯಾಸಿ.ರನ್ನಿಂಗ್‌ ಮತ್ತು ಡಾನ್ಸ್‌ ಕೂಡ ಇವರಿಗೆ ಇಷ್ಟದ ಅಭ್ಯಾಸಗಳು. ಈ ಎರಡು ಅಭ್ಯಾಸಗಳು ದೇಹ ಮತ್ತು ಮನಸಿನ ಮೇಲಿನ ಒತ್ತಡ ನಿವಾರಿಸುತ್ತವೆ ಎನ್ನುವುದು ಇವರ ನಿಲುವು.ಹಾಗೆಯೇ ಇವರು ಒಳ್ಳೆಯ ಈಜು ಪಟು ಕೂಡ. ಬಿಡುವಿನ ವೇಳೆಯನ್ನು ಈಜಾಟಕ್ಕೂ ಬಳಸಿಕೊಳ್ಳುತ್ತಾರೆ.ಫಿಟ್‌ನೆಸ್‌ಗಾಗಿಫಿಟ್‌ಪಾಸ್‌ (ಎಫ್‌ಐಟಿಪಿಎಎಸ್‌ಎಸ್‌) ಸಹ ಸಂಸ್ಥಾಪಕಿ ಅರುಷಿ ವರ್ಮಾ ಮತ್ತು ಸೆಲೆಬ್ರಿಟಿ ನ್ಯೂಟ್ರಿಷಿಯನಿಸ್ಟ್‌ ನಮಾಮಿ ಅಗರ್‌ವಾಲ್‌ ಅವರ ಬಳಿಯೂ ಮಾರ್ಗದರ್ಶನ ಪಡೆಯುತ್ತಾರೆ.

ಮಾನುಷಿಯ ಡಯಟ್‌ ಮತ್ತು ವರ್ಕೌಟ್‌ ಹೀಗಿದೆ

ಮುಂಜಾನೆ ಬೇಗ ಎದ್ದು ಉಗುರು ಬೆಚ್ಚನೆಯ ಎರಡರಿಂದ ಮೂರು ಲೋಟ ನೀರು ಕುಡಿಯುತ್ತಾರೆ. ಮಾನುಷಿಯೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿರುವಂತೆ ಈ ಅಭ್ಯಾಸವನ್ನು ಅವರ ಶಾಲಾ ದಿನಗಳಿಂದಲೂ ರೂಢಿಸಿಕೊಂಡಿದ್ದಾರೆ. ಬಿಸಿ ನೀರಿಗೆ ನಿಂಬೆ ರಸ ಬೆರೆಸಿ ಕುಡಿಯುವುದರಿಂದ ದೇಹದಲ್ಲಿನ ಟಾಕ್ಸಿನ್‌ ಹೊರಹಾಕಲ್ಪಡುತ್ತದೆಯಂತೆ.

ಅವರು ಬೆಳಗಿನ ಉಪಾಹಾರವನ್ನು ಯಾವತ್ತೂ ತಪ್ಪಿಸಿಕೊಂಡಿಲ್ಲವಂತೆ.ಇನ್ನು ಸಕ್ಕರೆ ಅವರಿಗೆ ವರ್ಜ್ಯ. ಅದರಲ್ಲೂ ಸಕ್ಕರೆ ಸೇರಿಸಿದ ಆಹಾರವನ್ನು ಅವರು ತಿನ್ನುವುದೇ ಇಲ್ಲ. ಬೆಳಗಿನ ಉಪಾಹಾರವಾಗಿ ತಾಜಾ ಮೊಸರಿನ ಜತೆಗೆ ಓಟ್‌ಮೀಲ್‌ ಅಥವಾ ತಾಜಾ ಹಣ್ಣುಗಳು ಮತ್ತು ಕಾಳುಗಳು ಅಥವಾ ಎರಡರಿಂದ ಮೂರು ಮೊಟ್ಟೆಗಳ ಬಿಳಿ ಭಾಗವನ್ನು ಕ್ಯಾರೆಟ್‌, ಬೀಟ್ರೂಟ್‌, ಸಿಹಿ ಗೆಣಸು, ಬೆಣ್ಣೆ ಹಣ್ಣಿನೊಂದಿಗೆ ಸೇವಿಸುತ್ತಾರೆ.

ಪ್ರತಿದಿನದ ಊಟವನ್ನು ಸಣ್ಣ ಸಣ್ಣ ಪ್ರಮಾಣದಲ್ಲಿ ತಿನ್ನುತ್ತಾರೆ. ಮೂರು ಹೊತ್ತು ತಿನ್ನುವ ಆಹಾರವನ್ನು ‌ಆರು ಹೊತ್ತಿಗೆ ವಿಭಾಗಿಸಿ, ಸೇವಿಸುವ ಕ್ರಮ ಅನುಸರಿಸುತ್ತಾರೆ.

ಮಧ್ಯಾಹ್ನ ಊಟಕ್ಕೂ ಮುಂಚಿತವಾಗಿ ಹಣ್ಣುಗಳ ಜತೆಗೆ ಎಳನೀರು ಕುಡಿಯುತ್ತಾರೆ. ಮಧ್ಯಾಹ್ನದ ಊಟದಲ್ಲಿ ಒಂದು ಬಟ್ಟಲು ತರಕಾರಿ ಮತ್ತು ಚಿಕನ್‌ ಜತೆಗೆ ಸಿರಿಧಾನ್ಯ/ ಅನ್ನ/ಚಪಾತಿ, ಸಂಜೆ ಹಣ್ಣುಗಳ ಜತೆಗೆ ಉಪ್ಪು ಬೆರೆಸದ ನಟ್ಸ್‌ ಅಥವಾ ಅಂಜೂರದ ಸ್ಮೂತಿ ಮತ್ತು ಬಾಳೆಹಣ್ಣು ಸೇವಿಸುತ್ತಾರೆ. ರಾತ್ರಿಯ ಊಟದಲ್ಲಿ ತರಕಾರಿ ಜತೆಗೆ ಚಿಕನ್‌ ಅಥವಾ ಮೀನು (ಬೇಯಿಸಿದ/ ಹುರಿದ) ತಿನ್ನುತ್ತಾರೆ.

ಇನ್ನು ಪ್ರಯಾಣದ ವೇಳೆಡಯಟ್‌ ಬಗ್ಗೆ ಹೆಚ್ಚು ಕಾಳಜಿ ತೆಗೆದುಕೊಳ್ಳುತ್ತಾರೆ. ಹೊರಗೆ ಹೋಟೆಲ್‌ಗಳಲ್ಲಿ ತಿಂಡಿ, ಊಟ ಆರ್ಡರ್‌ ಮಾಡುವಾಗ ಕಡಿಮೆ ಕೊಬ್ಬಿನಂಶ ಇರುವ ಆಹಾರ ಮತ್ತು ಸಲಾಡ್‌ಗೆ ಒತ್ತುನೀಡುತ್ತಾರೆ. ಹುರಿದ ಚಿಕನ್‌ ಅಥವಾ ಮೀನು ಮಾತ್ರ ಸೇವಿಸುತ್ತಾರೆ.ರಾತ್ರಿ ಮಲಗುವುದಕ್ಕೂ ಮೂರು ತಾಸು ಮುಂಚಿತವಾಗಿ ಊಟ ಮುಗಿಸಬೇಕು ಮತ್ತು ಊಟ ಲಘುವಾಗಿರಬೇಕೆನ್ನುವುದು ಅವರ ಸಲಹೆ.

ಫಿಟ್‌ನೆಸ್‌ ಸಾಧಿಸಲು ವಯಸ್ಸು, ಲಿಂಗದ ಭೇದವಿಲ್ಲ. ಆರೋಗ್ಯ ಮತ್ತು ದೇಹದ ಸದೃಢತೆ ನಮ್ಮ ನಿಯಂತ್ರಣದಲ್ಲಿರಬೇಕು. ಇಡೀ ದೇಹ ಹುರಿಗೊಳಿಸಿಕೊಳ್ಳಬೇಕೆಂದರೆ ಟ್ವಿಸ್ಟಿಂಗ್‌, ಸ್ಕ್ವಾಟ್‌ ಕಸರತ್ತು ಕೂಡ ಅವಶ್ಯ. ಈ ಕಸರತ್ತು ಕಾಲುಗಳು, ತೊಡೆ, ಕಾಲಿನ ಮೀನುಖಂಡಗಳಿಗೂ ಬಲ ತುಂಬುತ್ತದೆ. ಇಡೀ ದೇಹದ ಶಕ್ತಿ ಸಾಮರ್ಥ್ಯ ಹೆಚ್ಚಿಸುತ್ತದೆ ಎನ್ನುವುದು ಅವರ ನಂಬಿಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.