ADVERTISEMENT

ಆ್ಯಂಬುಲೆನ್ಸ್‌ ಸಿಗದೆ ಕೊನೆಯುಸಿರೆಳೆದ ನಟಿ, ಆಕೆಯ ಮಗು

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2019, 5:56 IST
Last Updated 22 ಅಕ್ಟೋಬರ್ 2019, 5:56 IST
ಆ್ಯಂಬುಲೆನ್ಸ್‌ :ಸಾಂದರ್ಭಿಕ ಚಿತ್ರ
ಆ್ಯಂಬುಲೆನ್ಸ್‌ :ಸಾಂದರ್ಭಿಕ ಚಿತ್ರ   

ಮುಂಬೈ: ಆ್ಯಂಬುಲೆನ್ಸ್‌ ಸಿಗದೆ ಗರ್ಭಿಣಿಯನ್ನು ಬೈಕ್‌ನಲ್ಲಿ ಕರೆದೊಯ್ದದ್ದು, ಹೆಗಲ ಮೇಲೆ ಶವ ಹೊತ್ತು ಸಾಗಿದ, ಅನಾರೋಗ್ಯ ಪೀಡಿತ ಪತಿಯನ್ನುಎತ್ತಿನಗಾಡಿಯಲ್ಲಿ ಆಸ್ಪತ್ರೆಗೆ ಕರೆದೊಯ್ದ ಘಟನೆಗಳು ಮಾಸುವ ಮುನ್ನವೇ, ಸರಿಯಾದ ಸಮಯಕ್ಕೆ ಆ್ಯಂಬುಲೆನ್ಸ್‌ ಸಿಗದೆ ನಟಿ ಹಾಗೂ ಆಕೆಯ ಮಗು ಮೃತಪಟ್ಟಘಟನೆಹಿಂಗೊಲಿ ಜಿಲ್ಲೆಯಲ್ಲಿ ನಡೆದಿದೆ.

ಸರಿಯಾದ ಸಮಯಕ್ಕೆ ಆ್ಯಂಬುಲೆನ್ಸ್‌ ಸಿಗದಿದ್ದರಿಂದ 25 ವರ್ಷದ ಮರಾಠಿ ನಟಿಪುಜಾ ಜುಂಜಾರ್ ಮೃತಪಟ್ಟಿದ್ದಾರೆ. ಭಾನುವಾರ ಬೆಳಿಗ್ಗೆ ಮುಂಬೈನಿಂದ ಸುಮಾರು 600 ಕಿ.ಮೀ ದೂರದಲ್ಲಿರುವ ಹಿಂಗೊಲಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.

‘ಸಮಯಕ್ಕೆ ಸರಿಯಾಗಿ ಆ್ಯಂಬುಲೆನ್ಸ್‌ ಸಿಕ್ಕಿದಿದ್ದರೆ, ಆಕೆ ಬದುಕಿರುತ್ತಿದ್ದಳು’ ಎಂದುನಟಿ ಪುಜಾ ಜುಂಜಾರ್ ಸಂಬಂಧಿಕರು ಬೇಸರ ವ್ಯಕ್ತಪಡಿಸಿದ್ದಾರೆ.

‘ಜುಂಜಾರ್‌ಗೆ ಮಧ್ಯರಾತ್ರಿ 2 ಗಂಟೆಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ತಕ್ಷಣ ಗೊರೆಗಾಂವ್‌ನಲ್ಲಿನ ಪ್ರಾಥಮಿಕ ಚಿಕಿತ್ಸಾ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಆದರೆ, ಹೆರಿಗೆಯಾದ ಮರುಕ್ಷಣವೇ ಮಗು ಮೃತಪಟ್ಟಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಪ್ರಾಥಮಿಕ ಚಿಕಿತ್ಸಾ ಕೇಂದ್ರದ ವೈದ್ಯರು, ಜುಂಜಾರ್‌ ಅನ್ನು ತಕ್ಷಣ ಹಿಂಗೊಲಿಯಲ್ಲಿನ ಆಸ್ಪತ್ರೆಗೆ ಕರೆದೊಯ್ಯಲು ಆಕೆಯ ಕುಟುಂಬ ಸದಸ್ಯರಿಗೆ ತಿಳಿಸಿದರು. ಅಲ್ಲಿಂದ 40 ಕಿ.ಮೀ ದೂರದಲ್ಲಿನ ಆಸ್ಪತ್ರೆಗೆ ಹೋಗಲು ಆ್ಯಂಬುಲೆನ್ಸ್‌ಗಾಗಿ ಕುಟುಂಬದವರು ಸಾಕಷ್ಟು ಪರದಾಡಿದರು. ಕಷ್ಟಪಟ್ಟು ಖಾಸಗಿ ಆ್ಯಂಬುಲೆನ್ಸ್‌ ಮಾಡಿ, ಕರೆದೊಯ್ಯುತ್ತಿರುವಾಗ ಮಾರ್ಗ ಮಧ್ಯೆ ಜುಂಜಾರ್‌ ಮೃತಪಟ್ಟಿದ್ದಾರೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.