ADVERTISEMENT

ಮದುವೆಯಾಗಲು ಕಾಲ ಕೂಡಿ ಬರಬೇಕು: ನಟಿ ರಾಗಿಣಿ

ಕೆ.ಎಂ.ಸಂತೋಷ್‌ ಕುಮಾರ್‌
Published 4 ಅಕ್ಟೋಬರ್ 2019, 4:26 IST
Last Updated 4 ಅಕ್ಟೋಬರ್ 2019, 4:26 IST
ರಾಗಿಣಿ ದ್ವಿವೇದಿ
ರಾಗಿಣಿ ದ್ವಿವೇದಿ   

ಸ್ಯಾಂಡಲ್‌ವುಡ್‌ ನಟಿ ರಾಗಿಣಿ ದ್ವಿವೇದಿ ಚಿತ್ರರಂಗಕ್ಕೆ ಕಾಲಿಟ್ಟು ದಶಕ ಕಳೆದಿದೆ.ಇನ್ನೂ ಬೇಡಿಕೆ ಕಾಯ್ದುಕೊಂಡಿರುವಸ್ಟಾರ್‌ ನಟಿ,ಈಗ ಮತ್ತೆ ಗ್ಲಾಮರ್‌, ಬೋಲ್ಡ್‌ ಪಾತ್ರಗಳಲ್ಲಿ ಮಿನುಗುತ್ತಿದ್ದಾರೆ.

‘ತುಪ್ಪಾ ಬೇಕಾ ತುಪ್ಪಾ’ ಎಂದು ಐಟಂ ಸಾಂಗ್‌ನಲ್ಲೂ ಕುಣಿದು‘ತುಪ್ಪದ ಹುಡುಗಿ’ ಎಂದೇ ಗುರುತಿಸಿಕೊಂಡು,ನಾಯಕಿ ಪ್ರಧಾನ ಆ್ಯಕ್ಷನ್ ಚಿತ್ರಗಳಲ್ಲೂ ಗಮನ ಸೆಳೆದವರು ರಾಗಿಣಿ. ಒಬ್ಬ ನಟ ಅಥವಾ ನಟಿಯ ಬದುಕಿನಲ್ಲಿ ಹತ್ತು ವರ್ಷಗಳ ಜರ್ನಿ ಎನ್ನುವುದು ಒಂದು ಮೈಲುಗಲ್ಲು ಕೂಡ ಹೌದು. ಜತೆಗೆ ಕರ್ನಾಟಕ ಕ್ರಿಕೆಟ್‌ ಪ್ರೀಮಿಯರ್‌ ಲೀಗ್‌ನ (ಕೆಪಿಎಲ್‌) ಪ್ರಚಾರ ರಾಯಭಾರಿಯೂ ಆಗಿ ರಾಗಿಣಿ ಕ್ರಿಕೆಟಿಗರಿಗೆ ಪರಿಚಿತೆ. ಸಾಕಷ್ಟು ವಿಭಿನ್ನ ಪಾತ್ರಗಳಲ್ಲಿ ನಟಿಸಿ, ವೃತ್ತಿ ಬದುಕನ್ನು ಗಟ್ಟಿಯಾಗಿ ರೂಪಿಸಿಕೊಂಡಿದ್ದು, ಈಗಲೂ ನಟನೆಯಲ್ಲಿಬ್ಯುಸಿಯಾಗಿದ್ದಾರೆ.

ತೆರೆಗೆ ಬರಲು ಸಜ್ಜಾಗಿರುವ ಅವರ ಬಹು ನಿರೀಕ್ಷಿತ ಕಾಮಿಡಿ ಚಿತ್ರದ ಬಗ್ಗೆ ‘ತುಂಬಾ ನರ್ವಸ್‌ ಆಗಿದ್ದೀನಿ’ ಎನ್ನುತ್ತಲೇ ಮಾತಿಗಿಳಿದರು ರಾಗಿಣಿ ದ್ವಿವೇದಿ. ‘ಅಧ್ಯಕ್ಷ ಇನ್‌ ಅಮೆರಿಕಾ ಸಿನಿಮಾ ನನಗೆ ತುಂಬಾ ವಿಶೇಷ ಎನ್ನಲು ಹಲವು ಕಾರಣಗಳಿವೆ. ಚಿತ್ರರಂಗದಲ್ಲಿಒಂದು ದಶಕ ಪೂರ್ಣಗೊಳಿಸಿದ ಹಂತದಲ್ಲಿ ಈ ಸಿನಿಮಾದಲ್ಲಿ ನಟಿಸಿದ್ದೇನೆ. ಇದರಲ್ಲಿ ನನ್ನ ಪಾತ್ರದ ಹೆಸರು ನಂದಿನಿ. ಈ ಹೆಸರೇ ಒಂದು ಅದೃಷ್ಟ. ಈ ಹಿಂದೆಯೂ ನನ್ನ ಹಲವು ಸಿನಿಮಾಗಳಲ್ಲಿ ನಾನು ನಟಿಸಿದ ಪಾತ್ರಗಳ ಹೆಸರು ನಂದಿನಿಯೇ ಆಗಿದೆ. ಈ ಹೆಸರಿಗೂ ನನಗೂ ಏನೋ ವಿಶೇಷ ನಂಟು ಇದೆ. ಇದು ನನ್ನ ಹೃದಯಕ್ಕೂ ಹತ್ತಿರವಾಗಿದೆ. ನನ್ನದು ಎನ್‌ಆರ್‌ಐ ಯುವತಿಯ ಪಾತ್ರ.ಒಂದು ವರ್ಷದ ನಂತರ ಬೋಲ್ಡ್‌ ಮತ್ತು ಗ್ಲಾಮರಸ್‌ ಪಾತ್ರಕ್ಕೆ ಬಣ್ಣ ಹಚ್ಚಿದ್ದೇನೆ. ಹಿಂದೆಂದೂ ನಾನು ಕಾಣಿಸಿಕೊಳ್ಳದಿದ್ದಷ್ಟು ಬೋಲ್ಡ್‌ ಮತ್ತು ಗ್ಲಾಮರಸ್ಸಾಗಿನಟಿಸಿದ್ದೇನೆ’ಎಂದು ಅವರು ಮಾತು ವಿಸ್ತರಿಸಿದರು.

ಪೂರ್ಣ ಪ್ರಮಾಣದ ಹಾಸ್ಯ ಚಿತ್ರದಲ್ಲಿ ನಟಿಸಲು ಅವರಿಗೆ ಆರಂಭದಲ್ಲಿ ತುಂಬಾಅಳುಕು ಇತ್ತಂತೆ. ಅವರಪ್ರಕಾರ ಕಾಮಿಡಿ ಸಿನಿಮಾ ತುಂಬಾ ಸವಾಲಿನ ಜಾನರ್‌ ಕೂಡ ಹೌದಂತೆ. ಅದೂ ಅಲ್ಲದೆ, ಕಾಮಿಡಿ ದಿಗ್ಗಜರಾದ ಶರಣ್‌, ಸಾಧುಕೋಕಿಲ,ರಂಗಾಯಣ ರಘು, ತಬಲಾ ನಾಣಿ ಅವರ ಎದುರು ನಟಿಸಲು ನರ್ವಸ್‌ ಕೂಡ ಆಗಿದ್ದೆ ಎಂದರು ರಾಗಿಣಿ. ‘ನನ್ನ ಪಾಲಿಗೆ ಈ ಜಾನರ್‌ ಸಿನಿಮಾ ಹೊಸತು. ನಟ ಶರಣ್‌ ಜತೆಗೆ ಸಾಕಷ್ಟು ಕಲಿಯುವ ಅವಕಾಶವೂ ಸಿಕ್ಕಿತು. ಇದು ತುಂಬಾನೇಖುಷಿ ನೀಡಿತು’ ಎಂದು ವಿನಮ್ರವಾಗಿ ನುಡಿದರು.

ರಿಮೇಕ್‌ ಬೆಂಬಲಿಸುವ ಈ ನಟಿ, ‘ಮಲಯಾಳದ ‘ಟು ಕಂಟ್ರೀಸ್‌’ ಸಿನಿಮಾವನ್ನುನಿರ್ದೇಶಕ ಯೋಗಾನಂದ ಮುದ್ದಾನ್‌, ಯಥಾವತ್ತು ಕನ್ನಡಕ್ಕೆ ರಿಮೇಕ್‌ ಮಾಡಿಲ್ಲ. ಕನ್ನಡದನೇಟಿವಿಟಿಗೆ ಒಗ್ಗಿಸಿದ್ದಾರೆ. ಸಂಭಾಷಣೆಯೂ ಸಖತ್ತಾಗಿದೆ. ಅಲ್ಲದೆ, ಅಲ್ಲಿನ ನಾಯಕಿಗೂ ನನಗೂ ತುಂಬಾ ವ್ಯತ್ಯಾಸಗಳಿವೆ.ಚಿತ್ರದ ಬಹುತೇಕ ಭಾಗ ಅಮೆರಿಕದಲ್ಲೇ ಚಿತ್ರೀಕರಣವಾಗಿದೆ. ಮೂಲ ಸಿನಿಮಾಕ್ಕಿಂತಲೂ ಕನ್ನಡದಲ್ಲಿ ಈ ಚಿತ್ರ ಅದ್ದೂರಿಯಾಗಿ ಬಂದಿದೆ’ ಎಂದರು.

ಚಿತ್ರದ ಪಾತ್ರಗಳಬಗ್ಗೆಯೂ ಹಲವು ಮಾಹಿತಿಗಳನ್ನು ತೆರೆದಿಟ್ಟ ಈ ನಟಿ, ‘ಟಾಮ್‌ ಅಂಡ್‌ ಜೆರ್ರಿ ಕಾರ್ಟೂನ್‌ನಂತೆಯೇ ನಮ್ಮ ಪಾತ್ರಗಳು ಈ ಚಿತ್ರದಲ್ಲಿವೆ. ಬೇರೆ ಬೇರೆ ಸಂಸ್ಕೃತಿಯಿಂದ ಬಂದ ಗಂಡ– ಹೆಂಡತಿ ಹೇಗೆ ಸಂಸಾರ ನಿಭಾಯಿಸುತ್ತಾರೆ ಎನ್ನುವುದನ್ನು ಇದರಲ್ಲಿ ಕಾಣಬಹುದು.ನನ್ನ ಪಾತ್ರದಲ್ಲಿ ಸೆನ್ಸಿಟಿವಿಟಿ, ಎಮೋಷನ್ಸ್, ಕಾಮಿಡಿ, ಬೋಲ್ಡ್‌ನೆಸ್‌ ಇದೆ. ಶರಣ್‌ ಅದ್ಭುತವಾಗಿ ನಟಿಸಿದ್ದಾರೆ.ನಾಯಕ– ನಾಯಕಿಯಷ್ಟೇ ಅಲ್ಲ, ಉಳಿದ ಪಾತ್ರಗಳೂ ಸಾಕಷ್ಟು ಗಮನ ಸೆಳೆಯುತ್ತವೆ. ಚಿತ್ರದಲ್ಲಿ ಮನರಂಜನೆಯಷ್ಟೇ ಅಲ್ಲ ಹೊಸದಾಗಿ ಮದುವೆ ಆದವರಿಗೆ, ಆಗುವವರಿಗೂ ಒಂದು ಮೆಸೇಜ್‌ ಕೂಡ ಇದೆ. ಎಲ್ಲ ವರ್ಗದ ಪ್ರೇಕ್ಷಕರನ್ನು ಖುಷಿಪಡಿಸಬಲ್ಲ ಅದ್ಭುತ ಮನರಂಜನಾತ್ಮಕ ಸಿನಿಮಾವಿದು’ ಎಂದು ಮಾತು ಸೇರಿಸಿದರು.

ಚಿತ್ರರಂಗದಲ್ಲಿ ಏಳುಬೀಳು ಕಂಡಿರುವ, ಕೆಲವೊಮ್ಮೆ ವಿವಾದಗಳಿಂದ ಸುದ್ದಿಯಾಗಿರುವ ಈ ನಟಿಗೆ ತಾನು ಮಾಡುವ ಪ್ರತಿ ಪಾತ್ರವು ವಿಭಿನ್ನವಾಗಿರಬೇಕು ಮತ್ತು ತನ್ನನ್ನು ತಾನು ಪ್ರಯೋಗಕ್ಕೆ ಒಡ್ಡಿಕೊಳ್ಳುವಂತಿರಬೇಕೆಂಬ ಬಯಕೆ ಇದೆ. ‘ಪ್ರತಿಯೊಬ್ಬರ ಜರ್ನಿಯಲ್ಲೂ ಏರಿಳಿತಗಳು ಇದ್ದಿದ್ದೇ. ನಾವು ಮಾಡಿರುವ ಚಿತ್ರಗಳಲ್ಲಿ ಒಳ್ಳೆಯವು, ಕೆಟ್ಟವು ಇರಬಹುದು. ಆದರೆ, ನಾವು ಹೋರಾಟದ ಸ್ಫೂರ್ತಿಯನ್ನು ಬಿಡಬಾರದು. ಇಷ್ಟು ಕಾಲ ಚಿತ್ರರಂಗದಲ್ಲಿ ಗಟ್ಟಿಯಾಗಿ ಉಳಿಯಬೇಕಾದರೆ ಸದಾ ವಿಭಿನ್ನ ಪಾತ್ರಗಳನ್ನು ಮಾಡಿದ್ದರಿಂದ ಸಾಧ್ಯವಾಗಿದೆ. ಜನರು ನಮ್ಮ ಸಿನಿಮಾ ನೋಡಿ, ಪ್ರೀತಿ ತೋರಿಸಿದ್ದಾರೆ.ಈ ನಡುವೆ ನನ್ನ ಕುಟುಂಬ, ಅಭಿಮಾನಿಗಳು ಹಾಗೂ ಮಾಧ್ಯಮಗಳು ನೀಡಿದ ಪ್ರೋತ್ಸಾಹ, ಬೆಂಬಲ ಯಾವತ್ತಿಗೂ ಮರೆಯಲಾರೆ. ಇನ್ನೂ ಎಷ್ಟೇ ವರ್ಷಗಳು ಚಿತ್ರರಂಗದಲ್ಲಿ ಇದ್ದರೂ ಅಭಿಮಾನಿಗಳಿಂದ ಇದೇ ರೀತಿಯ ಅಭಿಮಾನ ಸಿಗುತ್ತದೆ ಎನ್ನುವ ನಂಬಿಕೆ ನನ್ನದು’ಎಂದು ಹೇಳಲು ಅವರು ಮರೆಯಲಿಲ್ಲ.

ಪ್ರಯೋಗಶೀಲತೆ ಬಗ್ಗೆಯೂ ಮಾತು ಹೊರಳಿಸಿದ ಅವರು, ‘ನಾನು ಕೆಲ ಸಮಯ ನಾಯಕಿ ಪ್ರಧಾನ ಚಿತ್ರಗಳಿಗೆ ಒತ್ತು ಕೊಟ್ಟೆ ನಿಜ. ಹಾಗಂತ ಅದಕ್ಕೆ ನಾನು ಅಂಟಿಕೊಂಡು ಕೂರಲಿಲ್ಲ. ಪಾತ್ರಗಳ ಆಯ್ಕೆಯಲ್ಲಿ ಸಮತೋಲನ ಸಾಧಿಸಲು ಕಮರ್ಷಿಯಲ್‌, ಸೋಲೊ ಚಿತ್ರಗಳನ್ನೂ ಮಾಡಿದ್ದೇನೆ’ ಎನ್ನುವ ಮಾತು ಸೇರಿಸಿದರು.

ಮುಂದಿನ ಯೋಜನೆಗಳ ಬಗ್ಗೆಯೂ ಮಾತನಾಡಿದ ರಾಗಿಣಿ, ಪ್ರೇಮ್‌ ಜತೆಗೆ ‘ಗಾಂಧಿ ಗಿರಿ’ ಸಿನಿಮಾ ಮಾಡುತ್ತಿದ್ದೇನೆ. ಇನ್ನೊಂದು ಬಹುಭಾಷೆಯ ಚಿತ್ರವನ್ನು ಒಪ್ಪಿಕೊಂಡಿದ್ದೇನೆ. ಅದು ಕನ್ನಡ ಮತ್ತು ತಮಿಳಿನಲ್ಲಿ ನಿರ್ಮಾಣವಾಗಲಿದೆ.ಹೊಸ ಸಿನಿಮಾದ ಬಗ್ಗೆ ಸದ್ಯದಲ್ಲೇ ಇನ್ನಷ್ಟು ಮಾಹಿತಿಗಳನ್ನು ಅಭಿಮಾನಿಗಳಿಗಾಗಿ ಹಂಚಿಕೊಳ್ಳಲಿದ್ದೇನೆ ಎಂದರು.

ಮದುವೆ ಬಗ್ಗೆಯೂ ಮುಚ್ಚುಮರೆ ಇಲ್ಲದೆ ಅನಿಸಿಕೆ ವ್ಯಕ್ತಪಡಿಸುವ ಈ ನಟಿ,ಸದ್ಯಕ್ಕೆ ಮದುವೆ ಬಗ್ಗೆ ಯೋಚಿಸಿಲ್ಲ. ಮದುವೆಯಾಗಲು ಕಾಲ ಕೂಡಿ ಬರಬೇಕು. ಸಮಯ ಬಂದಾಗ ಅದು ಆಗುತ್ತದೆ. ಈಗ ಚಿತ್ರಗಳಲ್ಲೇ ಬ್ಯುಸಿಯಾಗಿದ್ದೇನೆ. ಒಂದಷ್ಟು ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದೇನೆ ಎಂದು ಮಾತಿಗೆ ವಿರಾಮ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.