ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಕಾ ನಟನೆಯ 5ನೇ ಸಿನಿಮಾ ಮಾರ್ಟಿನ್ ಇಂದು ತೆರೆಕಾಣುತ್ತಿದೆ. ಈ ಸಂದರ್ಭದಲ್ಲಿ ಸಿನಿಮಾಕುರಿತು ಅವರ ಮಾತುಗಳು ಇಲ್ಲಿವೆ...
ನನಗೆ ಮೊದಲ ಅವಕಾಶ ನೀಡಿದ ನಿರ್ದೇಶಕ ಎ.ಪಿ.ಅರ್ಜುನ್ ಅವರ ಜೊತೆ 12 ವರ್ಷಗಳ ಬಳಿಕ ಮತ್ತೊಂದು ಸಿನಿಮಾ ಮಾಡಿದ್ದೇನೆ. ಪ್ರಾಮಾಣಿಕ ಪ್ರಯತ್ನವನ್ನು ‘ಮಾರ್ಟಿನ್’ನಲ್ಲಿ ಮಾಡಿದ್ದೇವೆ. ಜನರು ನಮ್ಮ ಜೊತೆಗೆ ಇರಲಿದ್ದಾರೆ ಎನ್ನುವ ನಂಬಿಕೆಯೇ ಈ ಪ್ರಯತ್ನದ ಹಿಂದೆ ಇದೆ. ‘ಅದ್ದೂರಿ’, ‘ಭರ್ಜರಿ’, ಬಹದ್ದೂರ್’, ‘ಪೊಗರು’ ಮಾಡಿದಷ್ಟೇ ಭಯ, ಭಕ್ತಿ, ಶ್ರದ್ಧೆಯಿಂದ ‘ಮಾರ್ಟಿನ್’ ಮಾಡಿದ್ದೇನೆ. ಈ ಸಿನಿಮಾದ ಕಥೆ ಮತ್ತು ಚಿತ್ರಕಥೆಯನ್ನು ಅರ್ಜುನ್ ಸರ್ಜಾ ಮಾಡಿದ್ದಾರೆ. ದೇಶಭಕ್ತಿಯ ಸ್ಪರ್ಶ ಸಿನಿಮಾದಲ್ಲಿದೆ. ಇದೊಂದು ಚಿತ್ರಕಥೆ ಆಧಾರಿತ ಸಿನಿಮಾ.
ನನ್ನ ಈ ಭರ್ಜರಿ ಆ್ಯಕ್ಷನ್‌ಗಳಿಗೆ ಸ್ಫೂರ್ತಿಯೇ ಅರ್ಜುನ್ ಸರ್ಜಾ. ಸಾಹಸ ದೃಶ್ಯ ಎಂದರೆ ನನಗಷ್ಟೇ ಅಲ್ಲ, ಚಿತ್ರರಂಗದಲ್ಲಿರುವ ಎಲ್ಲ ಯುವಕರಿಗೂ ಅವರೇ ಸ್ಫೂರ್ತಿ.
ಈ ಸಿನಿಮಾದಲ್ಲಿ ನನ್ನ ಪಾತ್ರದ ಹೆಸರು ‘ಅರ್ಜುನ್’. ಹೀಗಾಗಿ ನಾನು ‘ಮಾರ್ಟಿನ್’ ಅಲ್ಲ. ಈ ‘ಮಾರ್ಟಿನ್’ ಯಾರು ಎನ್ನುವುದೇ ಕಥೆ. ಇಡೀ ಸಿನಿಮಾ ಭಾರತ–ಪಾಕಿಸ್ತಾನದ ನಡುವಿನ ಕಥೆಯಲ್ಲ, ಸೇನೆಯ ಕಥೆಯಲ್ಲ, ಪಾಕಿಸ್ತಾನದಲ್ಲಿ ಕೆಲ ಘಟನೆಗಳು ನಡೆಯುತ್ತವೆ. ಇದಕ್ಕೆ ಇರುವ ಸಂಬಂಧವೇನು ಎನ್ನುವುದನ್ನು ಚಿತ್ರದಲ್ಲೇ ನೋಡಬೇಕು. ಖಂಡಿತವಾಗಿಯೂ ಒಂದು ಮ್ಯಾಡ್‌ನೆಸ್ ಅನ್ನು ಪ್ರೇಕ್ಷಕರು ಈ ಸಿನಿಮಾದಲ್ಲಿ ಅನುಭವಿಸಬಹುದು.
ಮಾರ್ಟಿನ್ ಇಂಟ್ರೊಡಕ್ಷನ್ ಹಾಡಿನ ಚಿತ್ರೀಕರಣಕ್ಕೇ 17 ದಿನ ತೆಗೆದುಕೊಂಡಿದ್ದೆವು. ಹೀರೊಗೆ ಯಾವತ್ತೂ ಮಿತಿ ಇರುತ್ತದೆ. ಬಜೆಟ್ ಮೀರಿದರೆ ಯಾರೂ ಮತ್ತೆ ಬಂಡವಾಳ ಹೂಡಿಕೆಗೆ ಮುಂದೆ ಬರುವುದಿಲ್ಲ. ಆದರೆ ನಮ್ಮ ನಿರ್ಮಾಪಕರು ಬಂಡವಾಳ ತೆಗೆಯುವ ಭರವಸೆ ಹೊತ್ತವರು. ಕೊನೆಯವರೆಗೂ ಹೋರಾಟ ಮಾಡಿದವರು.
ಈ ಸಿನಿಮಾದಲ್ಲಿ ರಿರೆಕಾರ್ಡಿಂಗ್ ಕೂಡಾ ಹೀರೊನೇ. ಅದ್ಭುತವಾಗಿ ಸಿನಿಮಾ ಮೂಡಿಬಂದಿದ್ದು, ಇದು ಪ್ರತಿಯೊಬ್ಬರಿಗೂ ಟ್ರೀಟ್ ಎನ್ನಬಲ್ಲೆ. ಈ ಚಿತ್ರಕ್ಕೆ ತಂತ್ರಜ್ಞರು ಹೆಚ್ಚಿನ ಸಮಯವನ್ನು ವಿನಿಯೋಗಿಸಿದ್ದಾರೆ. ಕಲಾ ನಿರ್ದೇಶಕ ಮೋಹನ್ ಬಿ.ಕೆರೆ ಅವರು ಪ್ರತಿಯೊಂದು ಸೆಟ್‌ನ ಮಿನಿಯೇಚರ್‌ಗಳನ್ನು ಸಿದ್ಧಪಡಿಸಿಕೊಂಡು, ಅದರ ಒಪ್ಪಿಗೆ ಪಡೆದು ಸೆಟ್ ಹಾಕುತ್ತಿದ್ದರು.
ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯಗಳ ಚಿತ್ರೀಕರಣಕ್ಕೆ 42 ದಿನ ತೆಗೆದುಕೊಂಡೆವು. ರಾಮ್–ಲಕ್ಷ್ಮಣ್ ಹಾಗೂ ರವಿವರ್ಮ ಅವರ ಸಾಹಸ ನಿರ್ದೇಶನದಲ್ಲಿ ಈ ದೃಶ್ಯಾವಳಿಗಳ ಚಿತ್ರೀಕರಣ ನಡೆಯಿತು. 24 ದಿನಗಳನ್ನು ಸಾಹಸ ದೃಶ್ಯಗಳ ಚಿತ್ರೀಕರಣಕ್ಕೆ ತೆಗೆದುಕೊಂಡಿದ್ದೇವೆ. ನಾವು 150 ನಿಮಿಷಕ್ಕಾಗಿ ಒಟ್ಟು 250 ದಿನ ಚಿತ್ರದ ಚಿತ್ರೀಕರಣ ನಡೆಸಿದೆವು. ಇಷ್ಟೆಲ್ಲಾ ಚಿತ್ರೀಕರಣದ ಬಳಿಕ ಮಾನಸಿಕವಾಗಿಯೂ ದೈಹಿಕವಾಗಿಯೂ ಬಳಲಿದ್ದೆ. ಆದರೆ ಅಂತಿಮ ಔಟ್‌ಪುಟ್ ನೋಡಿ ಸಮಾಧಾನವಾಗಿದೆ.
ಇದು ನಾವು ಹೇಳುವ ಅದ್ಭುತವಾದ ಕಥೆಗಳನ್ನು ಜಗತ್ತು ನೋಡುವ ಸಮಯ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಟನಾಗಿ ನನ್ನನ್ನು ನಾನು ಸ್ಥಿರವಾಗಿ ಸ್ಥಾಪಿಸಬೇಕಿತ್ತು. ಹಾಗೆಯೇ ನಿರ್ಮಾಪಕನಾಗಿ ಹೆಚ್ಚಿನ ಗಳಿಕೆಯ ಉದ್ದೇಶದಿಂದಲೇ ಸಿನಿಮಾವನ್ನು ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ತೆಗೆದುಕೊಂಡು ಹೋಗುತ್ತಿದ್ದೇವೆ. ಈ ಸಿನಿಮಾವನ್ನು ನೋಡಿದ ಬಳಿಕ ಎಲ್ಲರೂ ಭಾರತೀಯ ಸಿನಿಮಾದ ಬಗ್ಗೆ ಹೆಮ್ಮೆಪಡಲಿದ್ದಾರೆ.
ಮಾರ್ಟಿನ್’ ಎಂಬ ಕನಸಿಗೆ ಉದಯ್ ಕೆ.ಮೆಹ್ತಾ ಅವರು ದುಡ್ಡು ಸುರಿದ ಕಾರಣ ಈ ಮಟ್ಟಕ್ಕೆ ಸಿನಿಮಾ ಆಗಿದೆ. ಇದೀಗ ನೋಡಿರುವ ‘ಮಾರ್ಟಿನ್’ನ ಟೀಸರ್ ಟ್ರೇಲರ್ ಸಿನಿಮಾವಲ್ಲ. ಪಿಕ್ಚರ್ ಅಭಿ ಬಾಕಿ ಹೇ..–ಎ.ಪಿ.ಅರ್ಜುನ್ ನಿರ್ದೇಶಕ
‘ಲಕ್ಷ್ಮಿ ಗಣಪತಿ ಫಿಲಂಸ್’ ಸಂಸ್ಥೆಯು ಉತ್ತರ ಭಾರತದಲ್ಲಿ ಸಿನಿಮಾವನ್ನು ವಿತರಣೆ ಮಾಡುತ್ತಿದ್ದು ದೇಶದಾದ್ಯಂತ ಸುಮಾರು 3000 ಚಿತ್ರಮಂದಿರಗಳಲ್ಲಿ ‘ಮಾರ್ಟಿನ್’ ಬಿಡುಗಡೆಯಾಗಲಿದ್ದು ಈ ಪೈಕಿ 1500–1800 ಚಿತ್ರಮಂದಿರಗಳು ಉತ್ತರ ಭಾರತದಲ್ಲಿವೆ. ಇದೊಂದು ಹೆಮ್ಮೆಪಡುವಂತಹ ಸಿನಿಮಾ ಆಗುತ್ತದೆ. ಮೂರು ವರ್ಷದ ಪಯಣವಿದು. ಸಣ್ಣ ಬಜೆಟ್‌ನಲ್ಲೇ ಈ ಸಿನಿಮಾ ಆರಂಭವಾಗಿತ್ತು. ದಿನ ಉರುಳಿದಂತೆ ಬಿಗ್‌ಬಜೆಟ್ ಸಿನಿಮಾ ಆಯಿತು. ಒಬ್ಬ ನಿರ್ಮಾಪಕನಿಗೆ ಹಲವರು ಸಾಥ್ ನೀಡಿದ ಕಾರಣ ಬಜೆಟ್ ಹೊಂದಿಸಲು ಸಾಧ್ಯವಾಯಿತು’ ಎನ್ನುತ್ತಾರೆ ನಿರ್ಮಾಪಕ ಉದಯ್ ಕೆ.ಮೆಹ್ತಾ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.