ADVERTISEMENT

ಹಲವು ಭಾಷೆಗಳಲ್ಲಿ ‘ಮಾರ್ಟಿನ್‌’

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2024, 0:26 IST
Last Updated 2 ಆಗಸ್ಟ್ 2024, 0:26 IST
ವೈಭವಿ ಶಾಂಡಿಲ್ಯ, ಧ್ರುವ ಸರ್ಜಾ
ವೈಭವಿ ಶಾಂಡಿಲ್ಯ, ಧ್ರುವ ಸರ್ಜಾ   

ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಚಿತ್ರ ಸಾಕಷ್ಟು ವಿಷಯಗಳಿಂದ ಆಗಾಗ ಸುದ್ದಿಯಾಗುತ್ತಲೇ ಇದೆ. ಇದೀಗ ಚಿತ್ರ ಪ್ಯಾನ್‌ ಇಂಡಿಯಾವನ್ನು ದಾಟಿ ಜಾಗತಿಕ ಮಟ್ಟದತ್ತ ಹೊರಟಿದೆ. ಅಕ್ಟೋಬರ್​ 11ರಂದು ಚಿತ್ರ ತೆರೆಗೆ ಬರಲಿದೆ ಎಂದು ತಂಡ ಈ ಹಿಂದೆಯೇ ಹೇಳಿತ್ತು. ಆ ವಿಚಾರ ಹಂಚಿಕೊಳ್ಳಲು ತಂಡ ಮಾಧ್ಯಮದೆದುರು ಬಂದಿತ್ತು. ಆದರೆ ಅಲ್ಲಿ ಮುಖ್ಯವಾಗಿ ಚರ್ಚೆಯಾಗಿದ್ದು ಚಿತ್ರದ ನಿರ್ದೇಶಕ ಮತ್ತು ನಿರ್ಮಾಪಕರ ನಡುವಿನ ಇತ್ತೀಚಿನ ವಿವಾದಗಳ ಕುರಿತು. 

‘ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ನಾವು ಒಟ್ಟಿಗಿದ್ದೇವೆ. ಮನೆಯ ಒಳಗೆ ಸಣ್ಣಪುಟ್ಟ ಗೊಂದಲಗಳು ಇರುತ್ತವೆ. ಹಾಗೆಯೇ ಕೆಲವಷ್ಟು ಘಟನೆಗಳು ನಡೆದಿದ್ದು ನಿಜ. ಅವೆಲ್ಲವೂ ಈಗ ಮುಗಿದಿದೆ. ಸದ್ಯ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ಜನರಿಗೆ ತಲುಪಿಸುವುದೇ ನಮ್ಮ ಗುರಿ’ ಎಂದರು ಚಿತ್ರದ ನಿರ್ಮಾಪಕ ಉದಯ್‌ ಮೆಹ್ತಾ. ಆದರೆ ಅವರು ಚಿತ್ರದ ಬಜೆಟ್‌, ತಂಡ ವಾಣಿಜ್ಯ ಮಂಡಳಿ ಮೆಟ್ಟಿಲು ಹತ್ತಿದ್ದು, ಚರ್ಚೆಯಾಗುತ್ತಿರುವ ಗ್ರಾಫಿಕ್ಸ್‌ ಕಮಿಷನ್‌ ಮೊದಲಾದ ವಿಷಯಗಳ ಬಗ್ಗೆ ಯಾವುದೇ ಸ್ಪಷ್ಟನೆ ನೀಡಲಿಲ್ಲ.

ಇನ್ನೂ ಚಿತ್ರದ ನಿರ್ದೇಶಕ ಎ.ಪಿ. ಅರ್ಜುನ್ ಕೂಡ ತಮ್ಮ ಮೇಲೆ ಬಂದಿದ್ದ ಗ್ರಾಫಿಕ್ಸ್‌ಗಾಗಿ ಕಮಿಷನ್‌ ಪಡೆದ ಆರೋಪವನ್ನು ತಳ್ಳಿ ಹಾಕಿದ್ದಾರೆ. ‘ಮೋಸ ಮಾಡಿದ ಗ್ರಾಫಿಕ್ಸ್‌ ಸಂಸ್ಥೆ ವಿರುದ್ಧ ಎಫ್‌ಐಆರ್‌ ದಾಖಲಾಗಿ, ಆರೋಪಿಗಳನ್ನು ಬಂಧಿಸಿ, ಜಾಮೀನಿನ ಮೇಲೆ ಬಿಟ್ಟು ಕಳುಹಿಸಿ 15 ದಿನಗಳು ಕಳೆದಿವೆ. ಈಗ ಕೆಲವರು ಆ ವಿವಾದವನ್ನು ಮುನ್ನೆಲೆಗೆ ತಂದಿದ್ದಾರೆ. ನಾನು ಕಮಿಷನ್‌ ಪಡೆದಿದ್ದಕ್ಕೆ ದಾಖಲೆಗಳಿದ್ದರೆ ನೀಡಿ ಆರೋಪಿ ಸಾಬೀತುಪಡಿಸಲಿ’ ಎಂದು ನಿರ್ದೇಶಕರು ಸವಾಲು ಹಾಕಿದರು. 

ADVERTISEMENT

ನಾಯಕ ಧ್ರುವ ಸರ್ಜಾ ಮಾತನಾಡಿ ‘ಆಗಸ್ಟ್ ​5ರಂದು ಮುಂಬೈನಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಚಿತ್ರದ ಟ್ರೇಲರ್‌ ಬಿಡುಗಡೆಯಾಗಲಿದೆ. ಕನ್ನಡ ಸೇರಿದಂತೆ ಅರೆಬಿಕ್, ಕೊರಿಯನ್, ಬಂಗಾಲಿ ಸೇರಿ 13 ಭಾಷೆಗಳಲ್ಲಿ ಟ್ರೇಲರ್‌ ಬಿಡುಗಡೆಗೊಳ್ಳಲಿದೆ. ನಂತರದ ದಿನಗಳಲ್ಲಿ ಅಲ್ಲಿನ ಭಾಷೆಗಳ ವಿತರಕರು ಮುಂದೆ ಬಂದರೆ ಅದೇ ಭಾಷೆಗಳಲ್ಲಿ ಚಿತ್ರ ಬಿಡುಗಡೆ ಮಾಡುತ್ತೇವೆ. ಅಂದು ಅಂತರರಾಷ್ಟ್ರೀಯ ಮಟ್ಟದ ಸುದ್ದಿಗೋಷ್ಟಿ ಕೂಡ ಇರುತ್ತದೆ. 21 ದೇಶಗಳಿಂದ 27 ವರದಿಗಾರರು ಬರುತ್ತಿದ್ದಾರೆ. ಆ.4ರಂದು ಬೆಂಗಳೂರಿನ ವಿರೇಶ್‌ ಚಿತ್ರಮಂದಿರದಲ್ಲಿ ಅಭಿಮಾನಿಗಳಿಗಾಗಿ ಚಿತ್ರಮಂದಿರದಲ್ಲಿ ಟ್ರೇಲರ್‌ ಬಿಡುಗಡೆಗೊಳ್ಳಲಿದೆ. ಈಗಾಗಲೇ ಇದಕ್ಕೆ ಟಿಕೆಟ್‌ ಬುಕ್ಕಿಂಗ್‌ ಪ್ರಾರಂಭವಾಗಿದೆ’ ಎಂದು ಮಾಹಿತಿ ನೀಡಿದರು.

ಚಿತ್ರಕ್ಕೆ ರವಿ ಬಸ್ರೂರು ಸಂಗೀತ, ಸತ್ಯ ಹೆಗಡೆ ಛಾಯಾಚಿತ್ರಗ್ರಹಣವಿದೆ. ವೈಭವಿ ಶಾಂಡಿಲ್ಯ ಚಿತ್ರದ ನಾಯಕಿ. ಭಾರತ ಮತ್ತು ಪಾಕಿಸ್ತಾನ ನಡುವಿನ ಕಥೆಯಲ್ಲಿ ದೇಶಭಕ್ತಿಯ ಎಳೆಯನ್ನು ಹೊಂದಿರುವ ಚಿತ್ರವಿದು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.