ADVERTISEMENT

‘ಬಾಹುಬಲಿ’ ಬಳಿಕ ರಷ್ಯನ್‌ ಭಾಷೆಗೆ ‘ಮಾಸ್ಟರ್‌ಪೀಸ್‌’ ಸಿನಿಮಾ ಡಬ್ಬಿಂಗ್

​ಪ್ರಜಾವಾಣಿ ವಾರ್ತೆ
Published 1 ಜೂನ್ 2020, 19:30 IST
Last Updated 1 ಜೂನ್ 2020, 19:30 IST
‘ಮಾಸ್ಟರ್‌ಪೀಸ್‌’ ಚಿತ್ರದ ಪೋಸ್ಟರ್
‘ಮಾಸ್ಟರ್‌ಪೀಸ್‌’ ಚಿತ್ರದ ಪೋಸ್ಟರ್   

ಎಸ್.ಎಸ್. ರಾಜಮೌಳಿ ನಿರ್ದೇಶನದ ‘ಬಾಹುಬಲಿ’ ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದಿದ್ದು ಹಳೆಯ ಸುದ್ದಿ. ಇತ್ತೀಚೆಗೆ ಇದು ರಷ್ಯನ್‌ ಭಾಷೆಗೂ ಡಬ್ಬಿಂಗ್‌ ಆಗಿ ಅಲ್ಲಿನ ಟಿ.ವಿ.ಯಲ್ಲಿ ಪ್ರಸಾರವಾಯಿತು. ರಷ್ಯಾದ ಸಿನಿಪ್ರಿಯರಿಗೆ ಅಮರೇಂದ್ರ ಬಾಹುಬಲಿ ಮತ್ತು ಮಹೇಂದ್ರ ಬಾಹುಬಲಿ ಮೋಡಿ ಮಾಡಿದ್ದರಲ್ಲಿ ಅಚ್ಚರಿಯೇನಿಲ್ಲ.‌

‘ಬಾಹುಬಲಿ’ ಸಿನಿಮಾ ಅಲ್ಲಿನ ಟಿ.ವಿ.ಯಲ್ಲಿ ಪ್ರಸಾರವಾಗುತ್ತಿರುವ ಬಗ್ಗೆ ಭಾರತದಲ್ಲಿರುವ ರಷ್ಯಾದ ರಾಯಭಾರಿ ಕಚೇರಿಯೇ ಸಿನಿಮಾದ ಪೋಸ್ಟರ್‌ ಸಹಿತ ಟ್ವೀಟ್‌ ಮಾಡಿತ್ತು. ಇದು ಎರಡೂ ದೇಶಗಳ ನಡುವಿನ ಸಾಂಸ್ಕೃತಿಕ ವಿನಿಮಯಕ್ಕೆ ರಹದಾರಿಯಾಗಿತ್ತು. ಈಗ ಮಲಯಾಳದ ‘ಮಾಸ್ಟರ್‌ಪೀಸ್‌’ ಚಿತ್ರದ್ದು ಅದೇ ಹಾದಿಯ ಪಯಣ. ಸಾಂಸ್ಕೃತಿಕ ಸೇತುವೆ ಕಟ್ಟಲು ಅಣಿಯಾಗಿದೆ.

ಮಾಲಿವುಡ್‌ ನಟ ಮಮ್ಮಟ್ಟಿ ನಾಯಕನಾಗಿ ನಟಿಸಿರುವ ಈ ಚಿತ್ರ ತೆರೆಕಂಡಿದ್ದು 2017ರಲ್ಲಿ. ಪ್ರಸ್ತುತ ಈ ಸಿನಿಮಾ ರಷ್ಯನ್ ಭಾಷೆಗೆ ಡಬ್ಬಿಂಗ್‌ ಆಗಿ ಬಿಡುಗಡೆಗೆ ಸಿದ್ಧವಾಗಿದೆಯಂತೆ. ಅಂದಹಾಗೆ ರಷ್ಯನ್ ಭಾಷೆಗೆ ಡಬ್ಬಿಂಗ್‌ ಆದ ಮೊದಲ ಮಲಯಾಳದ ಸಿನಿಮಾ ಎಂಬ ಹಿರಿಮೆಗೂ ಪಾತ್ರವಾಗಿದೆ. ಇದು ಮಮ್ಮಟ್ಟಿಯ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.

ADVERTISEMENT

‘ಮಾಸ್ಟರ್‌ಪೀಸ್‌’ಗೆ ಆ್ಯಕ್ಷನ್‌ ಕಟ್‌ ಹೇಳಿದ್ದು ಅಜಯ್‌ ವಾಸುದೇವ್. ರಷ್ಯನ್‌ ಭಾಷೆಗೆ ಸಿನಿಮಾ ಡಬ್ಬಿಂಗ್‌ ಆಗಿರುವ ಬಗ್ಗೆ ಅವರೇ ಫೇಸ್‌ಬುಕ್‌ನಲ್ಲಿ ಅಧಿಕೃತವಾಗಿ ಘೋಷಿಸಿದ್ದಾರೆ.

ಆ್ಯಕ್ಷನ್‌ ಕ್ರೈಮ್‌ ಥ್ರಿಲ್ಲರ್‌ ಕಥಾನಕ ಇರುವ ಇದಕ್ಕೆ ಬಂಡವಾಳ ಹೂಡಿದ್ದು ರಾಯಲ್‌ ಸಿನಿಮಾಸ್‌. ಈ ಚಿತ್ರ ನಿರ್ಮಾಣ ಸಂಸ್ಥೆಯೇ ರಷ್ಯನ್‌ ಭಾಷೆಗೆ ಡಬ್ಬಿಂಗ್‌ ಮಾಡಿದೆಯಂತೆ. ಆದರೆ, ಇನ್ನೂ ಸಿನಿಮಾ ಬಿಡುಗಡೆಯ ದಿನಾಂಕ ಅಧಿಕೃತಗೊಂಡಿಲ್ಲ. ಮತ್ತೊಂದೆಡೆ ಅಲ್ಲಿನ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗುತ್ತದೆಯೋ ಅಥವಾ ಟಿ.ವಿ.ಯಲ್ಲಿ ಪ್ರಸಾರವಾಗುತ್ತದೆಯೋ ಎಂಬ ಬಗ್ಗೆಯೂ ಗೊಂದಲವಿದೆ.

ಉನ್ನಿ ಮುಕುಂದನ್‌, ವರಲಕ್ಷ್ಮಿ ಶರತ್‌ಕುಮಾರ್‌, ಮುಕೇಶ್‌ ಮುಖ್ಯಭೂಮಿಕೆಯಲ್ಲಿರುವ ಈ ಸಿನಿಮಾಕ್ಕೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.