ADVERTISEMENT

ಮೀ-ಟೂ ಕಿಡಿಗೆ ‘ಫೈರ್’ ಮದ್ದು!

ಮಂಜುಶ್ರೀ ಎಂ.ಕಡಕೋಳ
Published 16 ಅಕ್ಟೋಬರ್ 2018, 4:07 IST
Last Updated 16 ಅಕ್ಟೋಬರ್ 2018, 4:07 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

‘ಮೀ ಟೂ ಅಭಿಯಾನ ಈಗ ದಿಕ್ಕುಗಳಿಗೂ ವ್ಯಾಪಿಸಿದೆ. ಹೆಣ್ಣುಮಕ್ಕಳು ಕೆಲಸ ಮಾಡುವ ಕ್ಷೇತ್ರ ಯಾವುದೇ ಇರಲಿ ಅಲ್ಲೊಂದು ಮರೆಯಲಾಗದ ಕಹಿ ಘಟನೆಯಂತೂ ಮಹಿಳೆಗೆ ಕಟ್ಟಿಟ್ಟದ್ದು ಎಂಬಂತಾಗಿದೆ. ಕನ್ನಡ ಚಿತ್ರರಂಗದಲ್ಲೂ ‘ಮೀ ಟೂ’ ಅಭಿಯಾನ ಶುರುವಾಗಿದ್ದು ನಟಿ ಸಂಗೀತಾ ಭಟ್ ತಮಗಾದ ದೌರ್ಜನ್ಯಗಳ ಕುರಿತು ಮೂರು ಪುಟಗಳ ಪತ್ರ ಬರೆದು ಚಿತ್ರರಂಗಕ್ಕೆ ವಿದಾಯ ಹೇಳಿದ್ದಾರೆ. ತನ್ನದಲ್ಲದ ತಪ್ಪಿಗೆ ಹೆಣ್ಣು ತನ್ನಿಷ್ಟದ ಕ್ಷೇತ್ರದಿಂದ ಹೊರನಡೆಯಬೇಕೇ? ಒಳ್ಳೆಯ ಅವಕಾಶಗಳನ್ನು ಕಳೆದುಕೊಳ್ಳಬೇಕೇ? ಹಾಗಾದರೆ ತಪ್ಪಿತಸ್ಥರಿಗೆ ಯಾವುದೇ ಶಿಕ್ಷೆ ಇಲ್ಲವೇ ಅನ್ನುವಂಥ ಸಾಲು ಸಾಲು ಪ್ರಶ್ನೆಗಳೂ ಹಲವರಿಂದ ಎದುರಾಗುತ್ತಿವೆ.

ಇದಕ್ಕಾಗಿಯೇ ದೂರು ಸಮಿತಿಯೊಂದಿದ್ದರೆ ಚೆನ್ನಾಗಿರುತ್ತಿತ್ತು ಎನ್ನುವ ಮಾತುಗಳೂ ಕೇಳಿಬರುತ್ತಿವೆ. ಕನ್ನಡ ಚಿತ್ರರಂಗದಲ್ಲಿರುವ ಹೆಣ್ಣುಮಕ್ಕಳು, ಕಾರ್ಮಿಕರು ಮತ್ತು ಬರಹಗಾರರ ಅಸ್ಮಿತೆಯನ್ನು ಕಾಪಾಡುವ ನಿಟ್ಟಿನಲ್ಲಿ ನಟ ಚೇತನ್ ನೇತೃತ್ವದಲ್ಲಿ ಒಂದೂವರೆ ವರ್ಷದ ಹಿಂದೆ ಅಸ್ತಿತ್ವಕ್ಕೆ ಬಂದ ‘ಫಿಲಂ ಇಂಡಸ್ಟ್ರಿ ಫಾರ್ ಇಕ್ವಾಲಿಟಿ ಅಂಡ್ ರೈಟ್ಸ್’ (ಫೈರ್) ಇದೀಗ ಲೈಂಗಿಕ ದೌರ್ಜನ್ಯ ತಡೆಗಾಗಿ ಕಾನೂನು ಪ್ರಕಾರ ಆಂತರಿಕ ದೂರು ಸಮಿತಿಯೊಂದನ್ನು (ಐಸಿಸಿ) ರಚಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಚಿತ್ರರಂಗದ ನಟ, ನಟಿಯರು, ನಿರ್ದೇಶಕಿಯರ ಮಾತುಗಳು ಇಲ್ಲಿವೆ.
***
ಆತ್ಮವಿಶ್ವಾಸ ತುಂಬುವಂತಾಗಬೇಕು
ಖಂಡಿತಾ ಇದು ಸಹಾಯವಾಗುತ್ತದೆ. ಇಷ್ಟು ದಿನ ಇಂಥ ಪ್ರಕರಣಗಳು ಸಂಭವಿಸಿದಾಗ ದೂರು ಕೊಡಲು ಆಗುತ್ತಿರಲಿಲ್ಲ. ಅದನ್ನು ಅಲ್ಲಲ್ಲೇ ಪರಿಹಾರ ಮಾಡಲಾಗುತ್ತಿತ್ತು. ಅವಳು ನಟಿಯಾಗಿದ್ದರೆ ಅವಳಿಗೆ ವೃತ್ತಿಪರತೆ ಇಲ್ಲ ಇತ್ಯಾದಿ ಹೇಳಿ ಅವಳಿಗೆ ಅವಕಾಶಗಳೇ ದೊರೆಯದಂತೆ ಮಾಡಲಾಗುತ್ತಿತ್ತು. ಆದರೆ, ಐಸಿಸಿ ಆ ಥರ ಕೆಲಸ ಮಾಡುವುದಿಲ್ಲ. ಕನಿಷ್ಠ ಹೆಣ್ಮಕ್ಕಳ ಕೆಲಸ ಹೋಗದಂತೆ ನೋಡಿಕೊಳ್ಳಬಹುದು. ಅಂಥ ಹೆಣ್ಮಕ್ಕಳಿಗೆ ಆತ್ಮವಿಶ್ವಾಸ ತುಂಬುವ ಕೆಲಸವನ್ನೂ ಐಸಿಸಿ ಮಾಡಲಿದೆ.


–ಕವಿತಾ ಲಂಕೇಶ್, ಚಿತ್ರ ನಿರ್ದೇಶಕಿ, ಐಸಿಸಿ ಅಧ್ಯಕ್ಷೆ

ADVERTISEMENT

ಲಿಂಗ ಸಮಾನತೆಯ ಚಿತ್ರರಂಗಕ್ಕಾಗಿ...
‘ಫೈರ್’ ಸಂಘಟನೆ ಒಂದೂವರೆ ವರ್ಷದಿಂದ ಕೆಲಸ ಮಾಡುತ್ತಿದೆ. ನಟಿ ಪ್ರಿಯಾಂಕ ಉಪೇಂದ್ರ ಇದರ ಅಧ್ಯಕ್ಷೆ. ಇಂಥ ವಿಷಯಗಳನ್ನು ಕಾನೂನಾತ್ಮಕವಾಗಿ ಪರಿಹರಿಸಿಕೊಳ್ಳಬೇಕು. ಸುಪ್ರೀಂ ಕೋರ್ಟ್‌ ನೀಡಿದ 2013ರ ‘ವಿಶಾಖ ಗೈಡ್‌ಲೈನ್ಸ್‌’ ಪ್ರಕಾರ ಯಾವುದೇ ಕ್ಷೇತ್ರವಾಗಿರಲಿ 10 ಜನಕ್ಕಿಂತ ಹೆಚ್ಚು ಮಹಿಳೆಯರು ಕೆಲಸ ಮಾಡುತ್ತಿದ್ದರೆ ಅಲ್ಲೊಂದು ಲೈಂಗಿಕ ದೌರ್ಜನ್ಯ ತಡೆ ಸಮಿತಿ ಇರಬೇಕು. ಅದರಂತೆ ಫೈರ್ ಮೂಲಕ ಐಸಿಸಿ ರೂಪಿಸಲಾಗಿದೆ. ಐಸಿಸಿಯಲ್ಲಿ ತೃತೀಯ ಲಿಂಗಿಗಳ ಪರವಾಗಿ ಹೋರಾಟ ಮಾಡಿದ ವಕೀಲೆ ಜಯ್ನಾ ಕೊಠಾರಿ, ಸಿನಿಮಾ ರಂಗದ ಸೂಕ್ಷ್ಮತೆ ಬಲ್ಲ ಮಾರುತಿ ಜಡೆಯಾರ್ ಇದ್ದಾರೆ. ಕವಿತಾ ಲಂಕೇಶ್ ಅಧ್ಯಕ್ಷೆಯಾಗಿದ್ದಾರೆ. ಮಹಿಳೆಯರ ಪರವಾಗಿ ಕೆಲಸ ಮಾಡಿರುವ ರೇಖಾರಾಣಿ ಸೇರಿದಂತೆ 9 ಸದಸ್ಯರು ಇಲ್ಲಿದ್ದಾರೆ.

‘ಫೈರ್’ ನೋಂದಾಯಿತ ಸಂಸ್ಥೆ. ಲೈಂಗಿಕ ದೌರ್ಜನ್ಯದಂಥ ಸಮಸ್ಯೆಗಳು ಚಿತ್ರರಂಗದಲ್ಲಿ ಎದುರಾದಾಗ ಫೈರ್ ಅದಕ್ಕೆ ಪರಿಹಾರ ನೀಡುವಲ್ಲಿ ಸಹಕಾರ ನೀಡಲಿದೆ. ಕರ್ನಾಟಕ ವಾಣಿಜ್ಯ ಮಂಡಳಿಯ ಅಧ್ಯಕ್ಷ ಎಸ್‌.ಎ. ಚಿನ್ನೇಗೌಡ ಅವರ ಬೆಂಬಲ ಕೋರಿದ್ದೇವೆ. ಮಂಡಳಿಯಲ್ಲಿ ಲೀಗಲ್ ಕಮಿಟಿ ಇಲ್ಲ. ಅದಕ್ಕಾಗಿ ಅಂಥ ಪ್ರಕರಣಗಳನ್ನು ನಮಗೆ ವರ್ಗಾಯಿಸಬೇಕು ಎಂದು ಕೋರಿದ್ದೇವೆ. ಚಿನ್ನೇಗೌಡ ಅವರು ನಮ್ಮ ಈ ಕೆಲಸಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಂಡಳಿಯ ಸಭೆಯಲ್ಲಿ ಪ್ರಸ್ತಾಪಿಸುವುದಾಗಿಯೂ ಹೇಳಿದ್ದಾರೆ. ಮತ್ತೊಂದು ಚೇಂಬರ್ ಅಧ್ಯಕ್ಷರನ್ನೂ ಭೇಟಿ ಮಾಡಲಿದ್ದೇವೆ. ಕಲಾವಿದರ ಒಕ್ಕೂಟದ ಜತೆಗೂ ಮಾತನಾಡಲಿದ್ದೇವೆ. ಲಿಂಗ ಸಮಾನತೆ ಮತ್ತು ಲಿಂಗ ಘನತೆಯ ಚಿತ್ರರಂಗ ಕಟ್ಟಬೇಕೆಂಬುದು ನಮ್ಮ ಉದ್ದೇಶ.


–ಚೇತನ್, ನಟ, ‘ಫೈರ್’ ಸಂಘಟನೆ ಸಂಸ್ಥಾಪಕ

***
ನ್ಯಾಯ ಸಿಗ್ಬೇಕು
‘ಫೈರ್’ ಖಂಡಿತವಾಗಿಯೂ ಅಪ್ರೋಚಬಲ್ ಆಗಿರುವ ಸಮಿತಿ. ಶೀಘ್ರದಲ್ಲೇ ನಮ್ಮ ಸಮಿತಿಯ ಮೇಲ್ ಐಡಿ, ವೆಬ್‌ಸೈಟ್ ವಿಳಾಸ ಕೊಡುತ್ತೇವೆ.
‘ಫೈರ್’ನ ದೂರು ಸಮಿತಿ ಚಿತ್ರರಂಗಕ್ಕೆ ಸಂಬಂಧಿಸಿದ ಸಂತ್ರಸ್ತರಾಗಲೀ, ಆರೋಪಿಗಳಾಗಲೀ ಇಲ್ಲಿ ದೂರು ನೀಡಬಹುದು. ಅಂಥವರಿಗೆ ನ್ಯಾಯ ಒದಗಿಸುವುದು ನಮ್ಮ ಜವಾಬ್ದಾರಿ. ಅಲ್ಲಿ ದೂರಿಗೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸಲಾಗುತ್ತದೆ.


–ಶ್ರುತಿ ಹರಿಹರನ್, ನಟಿ, ಐಸಿಸಿ ಸದಸ್ಯೆ

***
ತಳಸ್ತರದ ಹೆಣ್ಮಕ್ಕಳಿಗೂ ತಲುಪಲಿ
‘ಐಸಿಸಿ ಆಗಿರುವುದು ತುಂಬಾ ಒಳ್ಳೆಯದು. ನಮ್ಮಲ್ಲಿ ಹಿಂದೆ ಈ ರೀತಿ ಇರಲಿಲ್ಲ ಅಂಥ ಹೇಳಲಾರೆ. ನಾನು ಸಿನಿಮಾ ಪತ್ರಕರ್ತೆಯಾಗಿ ತುಂಬಾ ಹೆಣ್ಮಕ್ಕಳು ಕಷ್ಟಪಟ್ಟಿದ್ದನ್ನು ನೋಡಿದ್ದೇನೆ. ಕೇಳಿದ್ದೇನೆ. ಈಗಿನ ಹೆಣ್ಮಕ್ಕಳಿಗೆ ಧೈರ್ಯ ಇದೆ. ತಮ್ಮ ಅನುಮತಿ ಇಲ್ಲದೇ ಏನೂ ಮಾಡುವಂತಿಲ್ಲ. ನಮ್ಮ ಅಭಿನಯ ಕ್ಯಾಮೆರಾ ಮುಂದಷ್ಟೇ ಎಂದು ಧೈರ್ಯವಾಗಿ ಹೇಳಬಲ್ಲರು. ಸಿನಿಮಾ ಪತ್ರಕರ್ತೆಯಾಗಿ ಹೇಳುವುದು ಏನೆಂದರೆ ಈ ಹಿಂದೆ ಕೆಲ ಸಂಸ್ಥೆಗಳು ರೂಢಿಗತವಾಗಿ ಸಿನಿಮಾ ಮಾಡುತ್ತಿದ್ದವು. ಆದರೆ, ಬಣ್ಣದ ಲೋಕ ಸುಲಭವಾಗಿ ಸಿಗುತ್ತದೆ ಎಂದು ಭಾವಿಸಿ ತುಂಬಾ ಮಂದಿ ಈ ಕ್ಷೇತ್ರಕ್ಕೆ ಬಂದರು. ಆಗ ಇಂಥ ದೌರ್ಜನ್ಯ ಪ್ರಕರಣಗಳು ಹೆಚ್ಚಿದವು. ಈ ಹಿಂದೆ ದನಿ ಎತ್ತಿದವರನ್ನು ಕಾಮಿಡಿಯಾಗಿ ನೋಡಲಾಗಿದೆ. ಅವಳದ್ದೇ ತಪ್ಪು ಎಂಬಂತೆ ಬಿಂಬಿಸಲಾಗಿದೆ. ಆದರೆ, ಒಂಟಿ ದನಿಗಳೆಲ್ಲಾ ಸೇರಿ ಸಮಷ್ಟಿ ದನಿಯಾಗಿ ಬಂದಾಗ ಬಹುಶಃ ಶೋಷಿಸುವವರಿಗೆ ಎಚ್ಚರಿಕೆ ಗಂಟೆಯಾಗಬಹುದು.
‘ಮೀ ಟೂ’ ದನಿ ದೌರ್ಜನ್ಯಕ್ಕೊಳಗಾದ ತಳಸ್ತರದ ಮಹಿಳೆಯರಿಗೂ ತಲುಪುವಂತಾದರೆ ಈ ಚಳವಳಿ ಮಾದರಿಯಾಗಬಲ್ಲದು.


–ಸುಮನಾ ಕಿತ್ತೂರು, ಚಿತ್ರ ನಿರ್ದೇಶಕಿ

***
ಎಲ್ಲಾ ವರ್ಗದ ಮಹಿಳೆಯರಿಗೆ ಸಹಾಯವಾಗಲಿ
ನನಗೂ ಕಾಸ್ಟಿಂಗ್ ಕೌಚ್ ಥರದ ಅನುಭವವಾಗಿದೆ. ಸಿನಿಮಾವೊಂದಕ್ಕೆ ಶೂಟಿಂಗ್‌ಗೆ ಕರೆದು, ಅಡ್ವಾನ್ಸ್ ಕೂಡಾ ಕೊಟ್ಟಿದ್ದರು. ಈ ನಡುವೆ ಪಬ್, ಪಾರ್ಟಿಗಳಿಗೆ ಕರೆಯುತ್ತಿದ್ದರು. ಪರೋಕ್ಷವಾಗಿ ಅಪ್ರೋಚ್ ಮಾಡ್ತಾ ಇದ್ದರು. ಸ್ವಲ್ಪ ಅಡ್ಜೆಸ್ಟ್‌ ಮಾಡಿಕೊಳ್ಳಿ ಅಂತ ಇದ್ದರು. ಆಗ ಅದನ್ನು ನಾನು ವಿರೋಧಿಸಿದ್ದೆ. ಆಗ ‘ಫೈರ್’ ಅಸೋಸಿಯೇಷನ್ ನನಗೆ ಸಹಾಯ ಮಾಡಿತ್ತು. ಫಿಲಂ ಚೇಂಬರ್‌ಗೂ ದೂರು ಕೊಟ್ಟಿದ್ದೆ. ಫೈರ್‌, ಐಸಿಸಿ ಸಮಿತಿ ಮಾಡಿರುವುದರಿಂದ ಚಿತ್ರರಂಗದಲ್ಲಿ ಕೆಲಸ ಮಾಡುವ ಹೆಣ್ಮಕ್ಕಳಿಗೆ ಸಹಾಯವಾಗಲಿದೆ ಅನ್ನೋದು ನನ್ನ ನಂಬಿಕೆ. ಇದು ಬರೀ ನಟಿಯರಿಗಷ್ಟೇ ಅಲ್ಲ. ಚಿತ್ರರಂಗದ ನೇಪಥ್ಯದಲ್ಲಿ ಕೆಲಸ ಮಾಡುವ ಹೆಣ್ಮಕ್ಕಳ ಸಮಸ್ಯೆಗಳಿಗೂ ಕಿವಿಗೊಡಲಿದೆ.


–ಜಯಶ್ರೀ, ನಟಿ

***
ಪರರ ನೋವಿಗೆ ಮಿಡಿಯುವೆ
ಐಸಿಸಿ ಆಗಿರೋದು ನನಗೆ ಸಂತಸ ತಂದಿದೆ. ಹಿಂದೆ ಇಂಥ ದೌರ್ಜನ್ಯ ಪ್ರಕರಣಗಳು ಬರೀ ಅರಣ್ಯರೋದನವಾಗುತ್ತಿತ್ತು. ಆದರೆ, ಈಗ ಹಾಗಲ್ಲ. ಐಸಿಸಿ ಎದುರು ಸಂತ್ರಸ್ತರು ತಮ್ಮ ನೋವು ಹೇಳಿಕೊಳ್ಳಬಹುದು. ನಟಿಯಾಗಿ ನನಗೆ ಇಂಥ ಅನುಭವಗಳಾಗಿಲ್ಲ.
ನಾವು ಯಾವುದನ್ನು ಪ್ರೀತಿಸುತ್ತೇವೋ ಅದು ಚೆನ್ನಾಗಿರಬೇಕು ಎಂಬುದು ನನ್ನಾಸೆ. ಅಂತೆಯೇ ನಾನು ಚಿತ್ರರಂಗವನ್ನು ಅಪಾರವಾಗಿ ಪ್ರೀತಿಸುತ್ತೇನೆ. ಆದರೆ, ಕೆಲವರಿಂದ ಈ ರಂಗಕ್ಕೆ ಕೆಟ್ಟ ಹೆಸರು ಬಂದಿದೆ. ಇಂಥದ್ದನ್ನು ಹೋಗಲಾಡಿಸಬೇಕೆಂಬುದೇ ಐಸಿಸಿಯ ಉದ್ದೇಶ.


–ಪಂಚಮಿ, ನಟಿ, ಐಸಿಸಿ ಸದಸ್ಯೆ

ಆಂತರಿಕ ದೂರು ಸಮಿತಿಯಲ್ಲಿರುವ ಸದಸ್ಯರು
ಕವಿತಾ ಲಂಕೇಶ್, ಜಯ್ನಾ ಕೊಠಾರಿ, ಚೇತನ್, ಶ್ರುತಿ ಹರಿಹರನ್, ರೂಪಾ ಅಯ್ಯರ್, ವೀಣಾ ಸುಂದರ್, ರೇಖಾರಾಣಿ, ಮಾರುತಿ ಜಡೆಯಾರ್‌, ಪಂಚಮಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.