ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿದ್ದ ನಟಿ ಶ್ರುತಿ ಹರಿಹರನ್ ಹಾಗೂ ನಟ ಅರ್ಜುನ್ ಸರ್ಜಾ ಮಧ್ಯದ ಮೀ–ಟೂ ಕಾದಾಟ ಈಗ ಕಾನೂನು ಹೋರಾಟದ ಸ್ವರೂಪ ಪಡೆದುಕೊಂಡಿದೆ.
ಸರ್ಜಾ ಆಪ್ತ ನೀಡಿದ್ದ ದೂರನ್ನು ಪರಿಗಣಿಸಿ ಶ್ರುತಿ ವಿರುದ್ಧ ಪೊಲೀಸ್ ಎಫ್ಐಆರ್ ದಾಖಲಿಸಿದ್ದರು. ಆದರೆ, ಸರ್ಜಾ ಆಪ್ತನ ವಿರುದ್ಧ ಶ್ರುತಿ ನೀಡಿದ ದೂರನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಕೋರ್ಟ್ ಸೂಚನೆ ನೀಡಿದ ಬಳಿಕವಷ್ಟೇ ಎಫ್‌ಐಆರ್ ದಾಖಲಿಸಿದ್ದಾರೆ.
‘ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಡೆದ ಸಭೆ ವೇಳೆ ಅರ್ಜುನ್ ಸರ್ಜಾ ಆಪ್ತ ಪ್ರಶಾಂತ್ ಸಂಬರಗಿ ಜೀವ ಬೆದರಿಕೆ ಹಾಕಿದ್ದಾರೆ. ನನ್ನ ಗೌರವಕ್ಕೆ ಧಕ್ಕೆ ತರುವ ರೀತಿಯಲ್ಲಿ ಮಾತನಾಡಿದ್ದಾರೆ’ ಎಂದು ಗುರುವಾರ ಶ್ರುತಿ ದೂರು ದಾಖಲಿಸಿದ್ದರು.
ಈ ದೂರನ್ನು ಲೆಕ್ಕಿಸದ ಪೊಲೀಸರು, ಕೇವಲ ಎನ್‌ಸಿಆರ್ (ಗಂಭೀರವಲ್ಲದ ಪ್ರಕರಣ) ದಾಖಲಿಸಿಕೊಂಡಿದ್ದರು. ಅದನ್ನೇ 8ನೇ ಎಸಿಎಂಎಂ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಅದರ ಪರಿಶೀಲನೆ ನಡೆಸಿದ ನ್ಯಾಯಾಧೀಶರು, ‘ಒಬ್ಬ ಮಹಿಳೆ ದೂರು ನೀಡಿದ್ದು ಗಂಭೀರ ವಿಷಯ. ಕೂಡಲೇ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಳ್ಳಿ’ ಎಂದು ಪೊಲೀಸರಿಗೆ ಸೂಚನೆ ನೀಡಿದರು. ‘ಜೀವ ಬೆದರಿಕೆ ಹಾಗೂ ಮಹಿಳೆಯ ಗೌರವಕ್ಕೆ ಧಕ್ಕೆ ತಂದ ಆರೋಪದಡಿ ಪ್ರಶಾಂತ್ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ.
ಶ್ರುತಿಗೆ ಸೈಬರ್ ಪೊಲೀಸರಿಂದ ನೋಟಿಸ್?
ಅರ್ಜುನ್ ಸರ್ಜಾ ಅವರ ವ್ಯವಸ್ಥಾಪಕ ಶಿವ ಅರ್ಜುನ್ ನೀಡಿರುವ ದೂರು ಆಧರಿಸಿ ನಟಿ ಶ್ರುತಿ ಹರಿಹರನ್ ಅವರಿಗೆ ನೋಟಿಸ್ ಜಾರಿಗೊಳಿಸಲು ನಗರದ ಸೈಬರ್ ಕ್ರೈಂ ಪೊಲೀಸರು ತಯಾರಿ ನಡೆಸಿದ್ದಾರೆ.
‘ಶ್ರುತಿ ಅವರು ಒಳಸಂಚು ರೂಪಿಸಿ ಅರ್ಜುನ್ ಸರ್ಜಾ ವ್ಯಕ್ತಿತ್ವಕ್ಕೆ ಧಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆ ತೆರೆದು ಸರ್ಜಾ ಬಗ್ಗೆ ತಪ್ಪು ಮಾಹಿತಿ ಪ್ರಸಾರ ಮಾಡುತ್ತಿದ್ದಾರೆ’ ಎಂದು ದೂರಿದ್ದರು.
* ಇವನ್ನೂ ಓದಿ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.