ADVERTISEMENT

#MeToo ಶ್ರುತಿ ಪರ ದನಿ ಎತ್ತಿದ ನಿರ್ದೇಶಕ ಜಯತೀರ್ಥ

‘ಹೆಣ್ಣು ದೌರ್ಜನ್ಯಕ್ಕೆ ಒಳಗಾಗಬಾರದು, ಮಾಡದ ತಪ್ಪಿಗೆ ಪರುಷನಿಗೂ ಶಿಕ್ಷೆಯಾಗಬಾರದು’

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2018, 6:53 IST
Last Updated 22 ಅಕ್ಟೋಬರ್ 2018, 6:53 IST
 ಅರ್ಜುನ್‌ ಸರ್ಜಾ, ಜಯತೀರ್ಥ, ಶ್ರುತಿಹರಿಹರನ್
ಅರ್ಜುನ್‌ ಸರ್ಜಾ, ಜಯತೀರ್ಥ, ಶ್ರುತಿಹರಿಹರನ್   

ಬೆಂಗಳೂರು: ನಟ ಅರ್ಜುನ್ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್‌ ಮಾಡಿರುವ ’ಲೈಂಗಿಕ ಕಿರುಕುಳ’ (ಮೀ–ಟೂ) ಆರೋಪಕ್ಕೆ ಸಂಬಂಧಿಸಿ ನಿರ್ದೇಶಕ ಜಯತೀರ್ಥ ಪ್ರತಿಕ್ರಿಯಿಸಿದ್ದಾರೆ.

ವಿವಾದಕ್ಕೆ ಸಂಬಂಧಿಸಿ ಫೇಸ್‌ಬುಕ್‌ನಲ್ಲಿ ಸಂದೇಶವೊಂದನ್ನು ಪ್ರಕಟಿಸಿರುವ ಅವರು, ‘ಶ್ರುತಿ ಹರಿಹರನ್ ಒಬ್ಬ ಅತ್ಯಂತ ನಿಷ್ಠೆಯುಳ್ಳ, ವಿನಮ್ರಳಾದ ಕನ್ನಡದ ಪ್ರತಿಭಾವಂತ ನಟಿ. ಆದೇ ರೀತಿ ಅರ್ಜುನ್‌ ಸರ್ಜಾ ಕೂಡಾ ಒಬ್ಬ ಪ್ರತಿಭಾವಂತ ಹಿರಿಯ ನಟ ಮತ್ತು ನಿರ್ದೇಶಕ.. ಕನ್ನಡದ ಹೆಮ್ಮೆ..’ ಎಂದು ಬರೆದುಕೊಂಡಿದ್ದಾರೆ.

‘ಇದೀಗ #Metoo ವೇದಿಕೆಯಡಿ ಶ್ರುತಿ ಹರಿಹರನ್‌, ಅರ್ಜುನ್‌ ಸರ್ಜಾ ಅವರ ಬಗ್ಗೆ ಕೆಲವು ಆರೋಪಗಳನ್ನು ಮಾಡಿದ್ದಾರೆ. ಅರ್ಜುನ್ ಸರ್ಜಾ, ಶ್ರುತಿ ಅವರನ್ನು ಶೋಷಣೆ ಮಾಡಿದ್ದಾರೋ ಇಲ್ಲವೊ ಇನ್ನೂ ತನಿಖೆಯಾಗಬೇಕಾದ ವಿಚಾರ. ಆದರೆ ಈ ವಿಷಯವಿಟ್ಟುಕೊಂಡು ಶ್ರುತಿಯನ್ನು ದೂಷಿಸುವ ನೆಪದಲ್ಲಿ ನಿಜದ ಅರ್ಥದಲ್ಲಿ ಶೋಷಿಸುತ್ತಿರುವುದು ಈ ಸಮಾಜ ಎಂಬುದು ಅತ್ಯಂತ ಸ್ಪಷ್ಟವಾಗಿದೆ. ನಾಲ್ಕು ಗೋಡೆಯ ಮಧ್ಯೆ ನಡೆದ ವಿಷಯವನ್ನು ನೋಡಿಯೇ ಇರದ ಮಹನೀಯರು ಏಕಪಕ್ಷೀಯವಾಗಿ ಪ್ರತಿಕ್ರಿಯೆ ಕೊಡುತ್ತಿರುವುದು ಮಾನಸಿಕ ಶೋಷಣೆಯಲ್ಲವೇ..?

‘ವ್ಯವಧಾನವಿಲ್ಲದೆ ಒಬ್ಬರನ್ನು ಮಲೆಯಾಳಿ ಕುಟ್ಟಿ, ವೇಶ್ಯೆ, ಮಿಟಕಲಾಡಿ, ಅವಕಾಶವಾದಿ, ಎಂದೆಲ್ಲಾ ಜರಿಯುವ ಮುನ್ನ ನಮ್ಮ ಮನೆಯಲ್ಲೂ ಹೆಣ್ಣು ಮಕ್ಕಳಿದ್ದಾರೆ ಎಂಬುದನ್ನು ಮರೆಯಬಾರದಲ್ವಾ..? ಯಾವುದೇ ಹೆಣ್ಣುಮಕ್ಕಳೂ ದೌರ್ಜನ್ಯಕ್ಕೆ ಒಳಗಾಗಬಾರದು. ಯಾವ ಸತ್ಪುರುಷನಿಗೂ ಮಾಡದ ತಪ್ಪಿಗೆ ಶಿಕ್ಷೆಯಾಗಬಾರದು. ಸೂಕ್ತ ಸಮಯ ಬಂದಾಗ ಯಾರು ನಿಜವಾದ ಶೋಷಿತರು ಎಂಬುದು ಬಯಲಾಗುತ್ತದೆ. ಅಲ್ಲಿಯವರೆಗೂ ಯಾರನ್ನೂ ಜರಿಯದೇ. ಸಂಯಮ ಕಾಯ್ದುಕೊಳ್ಳುವುದು ಮನುಷ್ಯತ್ವ ಅಲ್ಲವೇ..?’ ಎಂದು ಜಯತೀರ್ಥ ಬರೆದುಕೊಂಡಿದ್ದಾರೆ.

ಇದನ್ನೂ ಓದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.