ADVERTISEMENT

ಹಿರಿತೆರೆ–ಕಿರುತೆರೆಯ ಸಂ‘ಮಿಲನ’

ರೇಷ್ಮಾ ಶೆಟ್ಟಿ
Published 25 ಏಪ್ರಿಲ್ 2019, 19:45 IST
Last Updated 25 ಏಪ್ರಿಲ್ 2019, 19:45 IST
ಮಿಲನ ಗೌಡ
ಮಿಲನ ಗೌಡ   

ಮುದ್ದು ಮುಖ, ಅರಳಿದ ಬಟ್ಟಲು ಕಂಗಳು, ಪಟಪಟ ಪಟಾಕಿಯಂತಹ ಮಾತು, ಪ್ರಬುದ್ಧ ನಟನೆ ಇವೆಲ್ಲವು ಈ ಹುಡುಗಿಯ ಫ್ಲಸ್‌ ಪಾಯಿಂಟ್. ವಯಸ್ಸು ಹತ್ತು. ನಟಿಸಿದ ಸಿನಿಮಾಗಳು ಹತ್ತು, ಧಾರಾವಾಹಿಗಳು ಹತ್ತು. ಎಂಟನೇ ವಯಸ್ಸಿನಿಂದಲೇ ನಟನೆಯಲ್ಲಿ ತೊಡಗಿಕೊಂಡ ಈ ಪುಟ್ಟ ಪೋರಿಯ ಹೆಸರು ಮಿಲನ ಗೌಡ.

ಬೆಂಗಳೂರಿನ ಈ ಪೋರಿ ಜಾಲಹಳ್ಳಿಯ ಕೇಂದ್ರೀಯ ವಿದ್ಯಾಲಯದಲ್ಲಿ 6ನೇ ತರಗತಿ ಓದುತ್ತಿದ್ದಾರೆ. ಬಾಲ್ಯದಿಂದಲೂ ಟಿ.ವಿ. ಮುಂದೆ ನಿಂತು ನಟನೆ ಅಭ್ಯಾಸ ಮಾಡುತ್ತಿದ್ದ ಈ ಬಾಲಕಿ ನಟಿಯಾಗುವ ಕನಸು ಹೊತ್ತವಳಲ್ಲ. ತಾನು ಐಎಎಸ್ ಮಾಡಬೇಕು, ಇಲ್ಲವೇ ವಿಜ್ಞಾನಿಯಾಗಬೇಕು ಎಂಬ ಕನಸಿದೆ.

‘ನನಗೆ ನಟನೆ ಇಷ್ಟ. ಚಿಕ್ಕ ವಯಸ್ಸಿನಿಂದಲೂ ಡಾನ್ಸ್, ಆ್ಯಕ್ಟಿಂಗ್ ಮಾಡ್ತಾ ಇದ್ದೆ. ಆದರೆ ಎಲ್ಲೂ ಆ್ಯಕ್ಟಿಂಗ್ ಕಲಿಯೋಕೆ ಹೋಗಿಲ್ಲ. ಟಿ.ವಿಯಲ್ಲಿ ಬರುವ ಡ್ರಾಮಾ, ಡಾನ್ಸ್‌ ರಿಯಾಲಿಟಿ ಷೋಗಳನ್ನು ನೋಡಿ ಅವರಂತೆ ನಟಿಸುತ್ತಿದ್ದೆ. ಹೀಗೆ ನನ್ನ ನಟನೆಯ ಹಾದಿ ಆರಂಭವಾಯಿತು’ ಎನ್ನುವ ಈ ಬಾಲೆ ಮೊದಲುನಟಿಸಿದ್ದು ‘ಭರ್ಜರಿ’ ಸಿನಿಮಾದಲ್ಲಿ.

ADVERTISEMENT

ಹಿರಿತೆರೆಯಿಂದ ಕಿರುತೆರೆಯತ್ತ ಮುಖ ಮಾಡಿದ್ದ ಮಿಲನ ಹೆಚ್ಚು ಖ್ಯಾತಿ ಪಡೆದಿದ್ದು ಶನಿ ಧಾರಾವಾಹಿಯ ‘ಭದ್ರ’ ಪಾತ್ರದ ಮೂಲಕ. ಓಂ ಬಾಬಾ ಸಾಯಿ, 1098(ಮಕ್ಕಳ ಚಿತ್ರ), ಏಪ್ರಿಲ್‌ನ ಹಿಮಬಿಂದು, ಧರ್ಮಸ್ಯ, ಯಜಮಾನ, ಸೀತಾರಾಮ ಕಲ್ಯಾಣ ಸಿನಿಮಾಗಳಿಗೆ ಬಣ್ಣ ಹಚ್ಚಿದ್ದಾರೆ. ಬಿಡುಗಡೆ ಬಾಕಿಯಿರುವ ಪೊಗರು, ಮನಸ್ಮಿತದಲ್ಲೂ ಮಿಲನ ನಟನೆಯ ಸೊಬಗನ್ನು ಕಾಣಬಹುದಾಗಿದೆ.

ರಿಯಾಲಿಟಿ ಷೋ, ಜಾಹೀರಾತುಗಳಲ್ಲೂ ಮಿಂಚಿರುವ ಇವರು ಸೂಪರ್ ಮಿನಿಟ್‌, ಡಾನ್ಸಿಂಗ್ ಸ್ಟಾರ್‌ನಲ್ಲೂ ಪ್ರತಿಭೆ ತೋರಿದ್ದಾರೆ.

‘ನನಗೆ ಮೊದಲ ಬಾರಿ ಕ್ಯಾಮೆರಾ ಎದುರಿಸಿದಾಗ ಭಯ ಆಗಿತ್ತು. ಮೊದಲ ಬಾರಿ ನಟಿಸುವಾಗ ಎಲ್ಲರಿಗೂ ಭಯ ಸಾಮಾನ್ಯ. ಆದರೆ ನಮಗೆ ನೀಡಿದ ಪಾತ್ರವನ್ನು ಎಂಜಾಯ್ ಮಾಡಿಕೊಂಡು ಮಾಡಿದರೆ ಭಯ ಇರುವುದಿಲ್ಲ. ಜೊತೆಗೆ ನಟನೆಯೂ ಸಲೀಸು’ ಎಂದು ಅನುಭವಸ್ಥೆಯಂತೆ ಹೇಳುತ್ತಾರೆ.

ತುಳಸಿದಳ, ಕಿನ್ನರಿ, ಶಾಂತಂಪಾಪಂ, ಪತ್ತೇದಾರಿ ಪ್ರತಿಭಾ, ಕಮಲಿ, ಮಹಾದೇವಿ, ಶನಿ ಧಾರಾವಾಹಿಗಳಲ್ಲೂ ನಟನೆಯ ಛಾಪು ತೋರಿದ್ದಾರೆ.

‘ನನಗೆ ಧಾರಾವಾಹಿ ಸಿನಿಮಾ ಎರಡೂ ಇಷ್ಟ. ಈ ಎರಡರಲ್ಲಿ ಯಾವುದೂ ಹೆಚ್ಚಲ್ಲ, ಯಾವುದು ಕಡಿಮೆಯೂ ಅಲ್ಲ. ನಾನು ನಟಿಸಿದ ಸಿನಿಮಾಗಳಲ್ಲಿ ಭರ್ಜರಿ ಸಿನಿಮಾದ ಪಾತ್ರ ಇಷ್ಟ. ಧಾರಾವಾಹಿಗಳಲ್ಲಿ ಶನಿಯ ಭದ್ರ ಪಾತ್ರ ಇಷ್ಟ‍’ ಎಂದು ಖುಷಿಯಿಂದ ಹೇಳುತ್ತಾರೆ.

ಶನಿ ಧಾರಾವಾಹಿ ಪಾತ್ರದ ಬಗ್ಗೆ ನಗುತ್ತಾ ಹೇಳುವ ಇವರು ‘ಶನಿಯಲ್ಲಿ ನನಗೆ ಕೊಂಬು ಬಾಲ ಎರಡೂ ಇತ್ತು. ಅದು ಎಲ್ಲರಿಗೂ ತೊಂದರೆ ಮಾಡ್ತಾ ಇತ್ತು. ಕುಳಿತುಕೊಳ್ಳಲು ಹೋದರೆ ಬಾಲ ಬೇರೆಯವರಿಗೆ ಹೊಡಿತಾ ಇತ್ತು. ಫೋಟೊ ತೆಗೆಸಿಕೊಳ್ಳುವಾಗ ಕೊಂಬು ಚುಚ್ತಾ ಇತ್ತು. ಆ ಥರ ಎಲ್ಲಾ ಹಾಸ್ಯದ ಪ್ರಸಂಗಗಳು ನಡೆದಿವೆ’ ಎನ್ನುವ ಮಿಲನ ಮೊಗದಲ್ಲಿ ನಗು ಅರಳಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.