‘ಲವ್ ಮಾಕ್ಟೇಲ್’ ನೆನಪು...
‘ಲವ್ ಮಾಕ್ಟೇಲ್’ ಕಥೆ ಹುಟ್ಟಿಕೊಳ್ಳುವುದಕ್ಕೂ ಮೊದಲು ನಾನು, ಡಾರ್ಲಿಂಗ್ ಕೃಷ್ಣ ಹಲವು ಸಿನಿಮಾಗಳಲ್ಲಿ ನಟಿಸಿದ್ದೆವು. ಆದರೆ ಈ ಸಿನಿಪಯಣದಲ್ಲಿ ಒಂದು ಬ್ರೇಕ್ ಸಿಕ್ಕಿರಲಿಲ್ಲ. ನಮಗೆ ಬೇಕಾದಂತಹ ಪಾತ್ರಗಳು, ನಮ್ಮ ನಟನಾ ಸಾಮರ್ಥ್ಯವನ್ನು ಪ್ರದರ್ಶಿಸಲು ಅವಕಾಶವಿರುವ ಕಥೆಗಳು ಬರುತ್ತಿರಲಿಲ್ಲ. ನಟಿಸುತ್ತಿರುವ ಸಿನಿಮಾಗಳು ನಮಗೆ ತೃಪ್ತಿ ನೀಡುತ್ತಿರಲಿಲ್ಲ. ಸಿನಿ ಜರ್ನಿ ಎತ್ತ ಸಾಗುತ್ತಿದೆ ಎಂಬ ಪ್ರಶ್ನೆ ಮೂಡಿದ ಕ್ಷಣವದು. ಇಂತಹ ಸಂದರ್ಭದಲ್ಲಿ ತೆಗೆದುಕೊಂಡ ನಿರ್ಧಾರ ‘ಲವ್ ಮಾಕ್ಟೇಲ್’ ಪ್ರಾಜೆಕ್ಟ್. ನಾನು ಈ ಪ್ರಾಜೆಕ್ಟ್‌ಗೆ ಸಿದ್ಧಳಾಗಿದ್ದೆ. ಸಿನಿಪಯಣದಲ್ಲಿ ಕಲಾವಿದನೊಬ್ಬ ಸೋಲು ಗೆಲುವುಗಳ ನಡುವೆಯೇ ಹೆಜ್ಜೆ ಇಡುತ್ತಿರುತ್ತಾನೆ. ಗೆಲ್ಲಲೇಬೇಕು, ಒಂದೊಳ್ಳೆ ಸಿನಿಮಾ ಮಾಡಲೇಬೇಕು ಎನ್ನುವ ಹಂಬಲ ಇಬ್ಬರಲ್ಲೂ ಇದ್ದದ್ದು ‘ಲವ್ ಮಾಕ್ಟೇಲ್’ ಯಶಸ್ಸಿಗೆ ಕಾರಣ ಅಂದುಕೊಳ್ಳುತ್ತೇನೆ. ಈ ಕಥೆ ಹುಟ್ಟುಕೊಳ್ಳುವಾಗಲೇ we were part of each others life. ಹೀಗಾಗಿ ನಾವಿಬ್ಬರೇ ನಟಿಸುವ ನಿರ್ಧಾರಕ್ಕೆ ಬಂದೆವು. ಕಥೆ ಆದ ನಂತರ ನಿರ್ಮಾಪಕರನ್ನು ಹುಡುಕಿ, ಅವರನ್ನು ಒಪ್ಪಿಸುವ ಕೆಲಸಕ್ಕಿಂತ ನಾವೇ ನಿರ್ಮಾಣ ಮಾಡುವ ನಿರ್ಧಾರ ತೆಗೆದುಕೊಂಡೆವು. ನಿರ್ದೇಶನದ ಜವಾಬ್ದಾರಿಯನ್ನು ಕೃಷ್ಣ ತೆಗೆದುಕೊಂಡರೆ ನಿರ್ಮಾಣದ ಜವಾಬ್ದಾರಿ ಹಂಚಿಕೊಂಡೆವು.
ಲಾಕ್‌ಡೌನ್ ಆದ ಸಂದರ್ಭದಲ್ಲಿ ಕುಳಿತು ಬರೆದ ಕಥೆ ‘ಲವ್ ಮಾಕ್ಟೇಲ್–2’. ಎರಡನೇ ಭಾಗದ ಯೋಚನೆಯೂ ನಮ್ಮಲ್ಲಿ ಇರಲಿಲ್ಲ. ಮೊದಲ ಭಾಗವನ್ನು ಜನ ಮೆಚ್ಚಿದ್ದ ಕಾರಣ ನಮ್ಮ ಮೇಲೆ ಜವಾಬ್ದಾರಿ ಇನ್ನೂ ಹೆಚ್ಚಿತ್ತು. ಸುಮ್ಮನೆ ಒಂದು ಸಿನಿಮಾ ಮಾಡಲು ಸಾಧ್ಯವಿಲ್ಲ. ಮೊದಲ ಭಾಗದಲ್ಲಿ ನನ್ನ ಪಾತ್ರ ಸತ್ತು ಹೋಗಿದ್ದ ಕಾರಣ, ಕಥೆ ಏನಾಗುತ್ತದೆ ಎನ್ನುವ ಕುತೂಹಲವೂ ಜನರಲ್ಲಿ ಇತ್ತು.
‘ಲವ್ ಮಾಕ್ಟೇಲ್’ ಸರಣಿ ಆದ ಬಳಿಕ ‘ಕ್ರಿಸ್ಮಿ’ ಜೋಡಿ ಮೇಲೆ ನಿರೀಕ್ಷೆ ಹೆಚ್ಚಿದೆ ಅಲ್ಲವೇ?
ಕೃಷ್ಣ ಅವರ ನಿಜ ಜೀವನದ ಅನುಭವಗಳೇ ‘ಲವ್ ಮಾಕ್ಟೇಲ್’ನಲ್ಲಿವೆ. ಆರಂಭದಲ್ಲಿ ಕೃಷ್ಣ ಅವರು ಲೀಡ್‌ನಲ್ಲಿ ಮಾಡುವುದು ಖಚಿತವಾಗಿತ್ತು. ಒಳ್ಳೆಯ ಸಿನಿಮಾ ಮಾಡಬೇಕು ಎನ್ನುವುದು ತಲೆಯಲ್ಲಿದ್ದ ಕಾರಣ, ಜೊತೆಯಲ್ಲಿ ಮಾಡುತ್ತೇವೆಯೋ ಇಲ್ಲವೋ ಎನ್ನುವುದನ್ನು ನಾವು ಆಗ ಯೋಚಿಸಿರಲಿಲ್ಲ. ಆದರೆ ಸಿನಿಮಾ ಬಿಡುಗಡೆಯಾದಾಗ ನಾನು ಊಹಿಸಿದಕ್ಕಿಂತಲೂ ದೊಡ್ಡ ಮಟ್ಟದಲ್ಲಿ ಸಿನಿಮಾ ಜನರನ್ನು ತಲುಪಿತ್ತು. ನಮ್ಮಿಬ್ಬರ ಜೋಡಿಯನ್ನು ಜನ ಮೆಚ್ಚಿಕೊಂಡಿದ್ದರು. ಹಲವಾರು ಕಾರಣಗಳಿಂದ ಸಿನಿಮಾ ತುಂಬಾ ರೀಚ್ ಆಯಿತು. ಜನರಿಗೆ ನಿರೀಕ್ಷೆಗಳು ಖಂಡಿತಾ ಇರುತ್ತವೆ. ಕೆಲವೊಮ್ಮೆ ಜನರ ನಿರೀಕ್ಷೆಯನ್ನು ಊಹಿಸಲೂ ಸಾಧ್ಯವಿಲ್ಲ. ಹೀಗಾಗಲು ಸಾಧ್ಯವಿದ್ದರೆ ಸಿನಿಮಾ ಮಾಡುವವರೆಲ್ಲರೂ ಹಿಟ್ ಸಿನಿಮಾಗಳನ್ನೇ ನೀಡುತ್ತಿದ್ದರು. ಜನರ ನಿರೀಕ್ಷೆಯ ಸೀಕ್ರೆಟ್ ಯಾರಿಗೂ ಗೊತ್ತಿಲ್ಲ!
ಮುಂದೆ, ನಾವಿಬ್ಬರು ಜೊತೆಯಾಗಿ ಸಿನಿಮಾ ಮಾಡಿದರೆ ಕೌಟುಂಬಿಕ ಸಿನಿಮಾಗಳನ್ನು ಮಾಡಬೇಕು ಎಂದು ನಿರ್ಧರಿಸಿ
ದ್ದೇವೆ. ನಾವು ಚಿಕ್ಕವರಿದ್ದಾಗಲಿಂದಲೂ ನೋಡಿದ ಬಹುತೇಕ ಸಿನಿಮಾಗಳು ಪುನೀತ್ ರಾಜ್‌ಕುಮಾರ್ ಅವರದ್ದು. ‘ಅಪ್ಪು’
ಅವರ ಸಿನಿಮಾಗಳೆಂದರೆ ಫ್ಯಾಮಿಲಿ ಸಿನಿಮಾಗಳೆಂದೇ ಹೆಸರುವಾಸಿ. ಸಿನಿಮಾ ಮೊದಲು ನಮ್ಮಿಬ್ಬರಿಗೆ ಖುಷಿ ನೀಡಿದರೆ ಖಂಡಿತವಾಗಿಯೂ ಜನರ ನಿರೀಕ್ಷೆಯೂ ಈಡೇರುತ್ತದೆ ಎನ್ನುವುದು ನನ್ನ ನಂಬಿಕೆ.
‘ಲವ್‌ಬರ್ಡ್ಸ್’ನಲ್ಲಿ ಮಿಲನ ‘ಪೂಜಾ’ ಆಗಿ ಹೇಗಿದ್ದಾರೆ?
ನಿಜ ಜೀವನದಲ್ಲಿ ನಾನು ಕೃಷ್ಣ ಜಗಳವಾಡೋದು ಬಹಳ ಕಮ್ಮಿ. ‘ಲವ್‌ಬರ್ಡ್ಸ್’ ಎಂಬ ಶೀರ್ಷಿಕೆ ಇರುವ ಕಾರಣ ಈ ಸಿನಿಮಾ ಪ್ರೇಮಕಥೆಯನ್ನು ಹೊಂದಿದೆ ಎಂದುಕೊಳ್ಳಬಹುದು. ಆದರೆ ಕಥೆ ಹಾಗಿಲ್ಲ. ಪ್ರೀತಿ ಎನ್ನೋದು ಈ ಸಿನಿಮಾದ ಭಾಗವಷ್ಟೆ. ‘ಲವ್ ಮಾಕ್ಟೇಲ್’ ಮಾಡುವ ಸಂದರ್ಭದಲ್ಲಿ ನನ್ನ ಪಾತ್ರಕ್ಕೆ ಹೆಚ್ಚಿನ ಸವಾಲು ಇರಲಿಲ್ಲ. ಆದರೆ ಒಂದು ಒಳ್ಳೆಯ ಪಾತ್ರ ಇಲ್ಲಿ ಸಿಕ್ಕಿದೆ. ಗಂಡ–ಹೆಂಡತಿ ನಡುವೆ ನಡೆಯುವ ಮನಃಸ್ತಾಪ, ಜಗಳ ಈ ಕಥೆಯ ಎಳೆಯಲ್ಲಿದೆ. ಇದೊಂದು ಕೌಟುಂಬಿಕ ಚಿತ್ರ. ನಿರ್ದೇಶಕರಾದ ಪಿ.ಸಿ.ಶೇಖರ್ ಅವರು ಪ್ರಸಕ್ತ ಸಮಾಜದಲ್ಲಿ ಇರುವ ಕುಟುಂಬಗಳ ಕಥೆಗಳನ್ನೇ ಹೆಕ್ಕಿ ತಂದು ಸಿನಿಮಾ ಮಾಡಿದ್ದಾರೆ. ರಿಯಲ್ ಲೈಫ್ ಮಿಲನಾಗೂ, ‘ಲವ್‌ಬರ್ಡ್ಸ್’ನಲ್ಲಿರೋ ಮಿಲನಾಗೂ ಬಹಳ ವ್ಯತ್ಯಾಸವಿದೆ! ನಾನಿಲ್ಲಿ ಇಂಡಿಪೆಂಡೆಂಟ್ ಹುಡುಗಿಯಾಗಿ, ಫ್ಯಾಷನ್ ಡಿಸೈನರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಇಂದಿನ ನಗರ ಜೀವನದಲ್ಲಿ ಗಂಡು ಮಕ್ಕಳಂತೆಯೇ ಹೆಣ್ಣು ಮಕ್ಕಳನ್ನು ಬೆಳೆಸಿರುತ್ತಾರೆ. ಇಷ್ಟಪಟ್ಟು ಮದುವೆಯಾದ ಗಂಡ–ಹೆಂಡತಿಯ ನಡುವೆ ಸಣ್ಣಸಣ್ಣ ವಿಚಾರಗಳಲ್ಲಿ ಭಿನ್ನಾಭಿಪ್ರಾಯ ಬಂದರೆ ಅದು ಎತ್ತ ಸಾಗಲಿದೆ ಎನ್ನುವುದೇ ಚಿತ್ರಕಥೆ. ಜನಕ್ಕೆ ಇದು ಬೇಗ ಕನೆಕ್ಟ್ ಆಗಲಿದೆ.
ಜನರ ಮನಸ್ಸಿನಲ್ಲಿ ಆದಿ–ನಿಧಿ ಛಾಪು ಇನ್ನೂ ಇದೆ. ಹೀಗಾಗಿ ನನಗೆ ದೊಡ್ಡ ಸವಾಲಿತ್ತು. ನನ್ನ ಪಾತ್ರಕ್ಕೆ ಬ್ರೇಕ್ ಬೇಕಿತ್ತು. ಈ ಪ್ರಯತ್ನವನ್ನು ‘ಲವ್‌ಬರ್ಡ್ಸ್’ನಲ್ಲಿ ಮಾಡಿದ್ದೇನೆ. ಒಂದು ಗೆಲುವು ಸಿಕ್ಕ ನಂತರ ಅವಕಾಶಗಳು ಬರಲಾರಂಭಿಸುತ್ತವೆ. ನಾನು ಸಿನಿಮಾ ಆಯ್ಕೆ ಸಂದರ್ಭದಲ್ಲಿ ಫ್ರೆಶ್ ಕಾಂಬಿನೇಷನ್ ನೋಡುತ್ತಿದ್ದೇನೆ. ಕೃಷ್ಣ ಅವರ ಜೊತೆ ಮೂರು ಪ್ರಾಜೆಕ್ಟ್‌ಗಳು ಆಯಿತು. ಒಂದೇ ರೀತಿಯ ಪಾತ್ರಗಳು ಮಾಡುವುದಕ್ಕಿಂತ, ಲುಕ್‌ನಲ್ಲಿ, ಗುಣಲಕ್ಷಣಗಳಲ್ಲಿ ಭಿನ್ನತೆ ಇರುವ ಪಾತ್ರಗಳನ್ನು ಮಾಡುವತ್ತ ಚಿತ್ತಹರಿಸಿದ್ದೇನೆ.
ಒಪ್ಪಿಕೊಂಡಿರುವ ಪ್ರಾಜೆಕ್ಟ್ಸ್...
ಪೃಥ್ವಿ ಅಂಬಾರ್ ಅವರ ಜೊತೆಗಿನ ‘ಫಾರ್ ರಿಜಿಸ್ಟ್ರೇಷನ್’ ಸಿನಿಮಾ ರಿಲೀಸ್‌ಗೆ ಸಜ್ಜಾಗಿದೆ. ನನ್ನ ಹೊಸ ಪ್ರಾಜೆಕ್ಟ್ ‘ಆರಾಮ್ ಅರವಿಂದ ಸ್ವಾಮಿ’ ಸಿನಿಮಾದಲ್ಲಿ ನಾನು ಶಿಕ್ಷಕಿಯ ಪಾತ್ರ ಮಾಡುತ್ತಿದ್ದೇನೆ. ಬೆಂಗಳೂರಿನಲ್ಲಿ ಬಂದು ನೆಲೆಸಿದ ಕೇರಳ ಮೂಲದ ಹುಡುಗಿಯ ಪಾತ್ರ ನನ್ನದು. ಈಗಾಗಲೇ ಒಂದು ಶೆಡ್ಯೂಲ್ ಪೂರ್ಣಗೊಂಡಿದೆ. ಈ ಸಿನಿಮಾವೂ ಇದೇ ವರ್ಷ ತೆರೆಕಾಣಲಿದೆ. ಮತ್ತೊಂದು ಹೊಸ ಸಿನಿಮಾ ಒಪ್ಪಿಕೊಂಡಿದ್ದೇನೆ. ಅದು ಶೀಘ್ರದಲ್ಲೇ ಘೋಷಣೆಯಾಗಲಿದೆ. ಬೇರೆ ಭಾಷೆಗಳಿಂದಲೂ ಆಫರ್ಸ್ ಬರುತ್ತಿವೆ. ಆದರೆ ಸದ್ಯ ಕನ್ನಡ ಚಿತ್ರಗಳಲ್ಲೇ ತೊಡಗಿಸಿಕೊಳ್ಳುತ್ತೇನೆ, ಅತ್ತ ಗಮನವಿಲ್ಲ. ನಮ್ಮ ಬೇರಿನಲ್ಲಿ ಕೆಲಸ ಮಾಡುವ ಖುಷಿ ಬೇರೆಲ್ಲೂ ಸಿಗಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.