ADVERTISEMENT

ಮೈಮಾಟಕ್ಕೂ ಸ್ವಚ್ಛತೆಗೂ ಮಿಲಿಂದ್ ವೆಬ್ ಸರಣಿ!

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2019, 19:30 IST
Last Updated 28 ಏಪ್ರಿಲ್ 2019, 19:30 IST
ಮಿಲಿಂದ್ ಸೋಮನ್‌
ಮಿಲಿಂದ್ ಸೋಮನ್‌   

‘ಐರನ್‌ಮ್ಯಾನ್‌’ ಮಿಲಿಂದ್ ಸೋಮನ್‌ ಹೆಸರು ರೂಪದರ್ಶಿ ಮತ್ತು ನಟನಾಗಿ ಹೆಸರು ಮಾಡಿದ್ದಕ್ಕಿಂತ ಹೆಚ್ಚಾಗಿ ಫಿಟ್‌ನೆಸ್‌ ಮಾಂತ್ರಿಕನಾಗಿ ಸುದ್ದಿ ಮಾಡಿದೆ.ಪ್ರತಿನಿತ್ಯ ದೇಹಕ್ಕೆ ಯಾವುದಾದರೂ ಒಂದು ಬಗೆಯ ವ್ಯಾಯಾಮ ನೀಡುವುದು ಉಸಿರಾಟದಷ್ಟೇ ಕಡ್ಡಾಯ ಎಂಬುದು ಅವರು ಸಾರುವ ಫಿಟ್‌ನೆಸ್‌ ಮಂತ್ರ.

ವ್ಯಾಯಾಮವಿಲ್ಲದ ದೇಹ ಜಡ್ಡುಗಟ್ಟುತ್ತದೆ. ಅದು ತುಕ್ಕು ಹಿಡಿದ ಕಬ್ಬಿಣಕ್ಕೆ ಸಮಾನ.‌ ತುಕ್ಕು ಬಿಡಿಸಬೇಕಾದರೆ ತುಂಬಾ ಶ್ರಮ ಬೇಕು. ಹಾಗೇ ಜಡ್ಡುಗಟ್ಟಿದ ದೇಹದಲ್ಲಿ ಸಂಗ್ರಹವಾಗುವ ಅನವಶ್ಯಕ ಕೊಬ್ಬನ್ನು ಕರಗಿಸಬೇಕಾದರೂ ಸಾಕಷ್ಟು ಶ್ರಮ ವಹಿಸಬೇಕಾಗುತ್ತದೆ. ಕೊಬ್ಬಿನ ಜೊತೆಗೇ ಅನಾರೋಗ್ಯವೂ ಬಳುವಳಿಯಾಗಿ ಬರುತ್ತದೆ. ಹಾಗಾಗಿ ದಿನಕ್ಕೆ ಕನಿಷ್ಠ ಅರ್ಧ ಗಂಟೆ ವ್ಯಾಯಾಮ ಮಾಡಿ ದೇಹ ದಂಡಿಸಿ ಎಂಬುದು ಮಿಲಿಂದ್‌ ಕಿವಿಮಾತು.

ಆರೋಗ್ಯಕರ ಜೀವನಕ್ರಮಕ್ಕಾಗಿ ದೇಹ ದಂಡಿಸಿ ಎಂದು ಹೋದಲ್ಲೆಲ್ಲಾ ಜಾಗೃತಿ ಮೂಡಿಸುವ ಮಿಲಿಂದ್‌ ಈಗ ಹೊಸ ಸಾಹಸಕ್ಕೆ ಮುಂದಾಗಿದ್ದಾರೆ. ತಮ್ಮ ಫಿಟ್‌ನೆಸ್‌ ಸೂತ್ರಗಳನ್ನು ಡಿಜಿಟಲ್‌ ಮೀಡಿಯಾದ ಮೂಲಕ ಜಗತ್ತಿನ ಮುಂದಿಡಲು ಅವರು ಹೊರಟಿದ್ದಾರೆ. Hotstar ನಲ್ಲಿ ಮಿಲಿಂದ್‌ ಫಿಟ್‌ನೆಸ್‌ ಸೂತ್ರಗಳನ್ನು ಹಂಚಿಕೊಳ್ಳಲಿದ್ದಾರೆ.

ADVERTISEMENT

‘ಮ್ಯಾಕ್ಸಿಮೈಸ್‌ ಯುವರ್‌ ಡೇ’ ಎಂಬ ಸರಣಿ ಏಳು ಸಂಚಿಕೆಗಳಲ್ಲಿ ಮೂಡಿಬರಲಿದೆ. ಸರಣಿಯ ವೈಶಿಷ್ಟ್ಯವೇನೆಂದರೆ, ದೇಹದ ಆರೋಗ್ಯದೊಂದಿಗೆ ಬಾಯಿಯ ಆರೋಗ್ಯದ ಕಡೆಗೂ ಗಮನ ಕೊಡುವಂತೆ ಅವರು ಮನವಿ ಮಾಡಲಿದ್ದಾರೆ. ಮೌತ್‌ ವಾಶ್‌ ಕಂಪನಿಯೊಂದರ ಪ್ರಾಯೋಜಕತ್ವದಲ್ಲಿ ಈ ಸರಣಿ ಮೂಡಿ ಬರಲಿದೆ.

ಆಹಾರ ಸೇವನೆ ಕ್ರಮ, ಜಗಿಯುವ ರೀತಿ, ಜೀರ್ಣಕ್ರಿಯೆಗೆ ಪೂರಕವಾದ ಆಹಾರ ಸೇವನೆ ಹೀಗೆ ಸೂಕ್ಷ್ಮ ಸಂಗತಿಗಳನ್ನೂ ಮಿಲಿಂದ್‌ ತಮ್ಮ ಸರಣಿಯಲ್ಲಿ ಪ್ರಸ್ತಾಪಿಸಲಿದ್ದಾರೆ.

ಮಿಲಿಂದ್‌, 50 ದಾಟಿದರೂ ಮೈಮಾಟವನ್ನು ಕಾಯ್ದುಕೊಂಡಿರುವ ಶಿಸ್ತಿನ ಸಿಪಾಯಿ. ದೈಹಿಕ ಕ್ಷಮತೆ ಕುರಿತು ಇತರರಿಗೆ ಹೇಳುವ ಬುದ್ಧಿಮಾತುಗಳನ್ನು ಅವರು ಸ್ವತಃ ಪಾಲಿಸುತ್ತಾರೆ.

ಫಿಟ್‌ನೆಸ್‌ ಮಾಂತ್ರಿಕ

ಮುಂಬೈನಲ್ಲಿ ನಡೆದ ‘ಐರನ್‌ಮ್ಯಾನ್‌’ ಟ್ರಯಥ್ಲಾನ್‌ನಲ್ಲಿ 3.8 ಕಿ.ಮೀ ಈಜಿ, 180.2 ಕಿ.ಮೀ ಸೈಕಲ್‌ ಸವಾರಿ ಮಾಡಿ, 42.2 ಮಿ.ಮೀ. ಮ್ಯಾರಥಾನ್‌ ಮಾಡಿ ಟೈಟಲ್‌ ತಮ್ಮದಾಗಿಸಿಕೊಂಡಿದ್ದರು. ಇಷ್ಟೂ ಸುತ್ತುಗಳನ್ನು ನಿಗದಿಯಂತೆ 16 ಗಂಟೆಗಳಲ್ಲಿ ಅವರು‍ಪೂರ್ತಿಗೊಳಿಸಿದ್ದರು. ಅಲ್ಲಿಂದಾಚೆ ಅವರಿಗೆ ‘ಐರನ್‌ಮ್ಯಾನ್‌’ ಎಂಬ ಹೆಗ್ಗಳಿಕೆ ಸಿಕ್ಕಿತು.

ಅಮೆರಿಕದ ಫ್ಲೋರಿಡಾದಲ್ಲಿ ನಡೆದಿದ್ದ 34 ಗಂಟೆ 46 ನಿಮಿಷಗಳ ಟ್ರಯಥ್ಲಾನ್‌ನಲ್ಲಿ 10 ಕಿ.ಮೀ ಈಜು, 424 ಕಿ.ಮೀ ಬೈಕ್‌ ಸವಾರಿ, 84 ಕಿ.ಮೀ ಓಟವನ್ನು ಬರಿಗಾಲಿನಲ್ಲಿ ಪೂರೈಸಿದ್ದು ಮಿಲಿಂದ್‌ ಹೆಚ್ಚುಗಾರಿಕೆ.

ಮುಂಬೈನಲ್ಲಿ ಇದೇ ಫೆಬ್ರುವರಿಯಲ್ಲಿ ನಡೆದಿದ್ದ ವಿಶ್ವ ಮಲ್ಲಕಂಬ ಚಾಂಪಿಯನ್‌ಶಿಪ್‌ನಲ್ಲಿ ಮಿಲಿಂದ್ ಮಲ್ಲಕಂಬ ಕಸರತ್ತು ಅಭ್ಯಾಸ ಮಾಡಿ ಪ್ರದರ್ಶಿಸಿದ್ದರು.ಹೀಗೆ, ಯಾವುದೇ ಬಗೆಯ ವ್ಯಾಯಾಮವನ್ನು ಸವಾಲಾಗಿ ಸ್ವೀಕರಿಸಿ ಯಶಸ್ಸು ಕಾಣುವುದು ಮಿಲಿಂದ್‌ ಅವರಿಗೆ ಅಚ್ಚುಮೆಚ್ಚು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.