ಚಾರ್ಲ್ಸ್ ಗುಡ್‌ಇಯರ್ 1830ರಲ್ಲಿ ತನ್ನ ತಂದೆಯ ಜೊತೆ ವ್ಯಾಪಾರ ವಹಿವಾಟು ಆರಂಭಿಸಿದ. ಆದರೆ, ಅಪ್ಪ–ಮಗ ಇಬ್ಬರೂ ದಿವಾಳಿ ಆದರು. ಅದಾದ ನಂತರ, ಚಾರ್ಲ್ಸ್ ಪಾಲಿಗೆ ಜೀವನ ಸುಲಭವಾಗಿರಲಿಲ್ಲ. ಆತ ಜೀವನದಲ್ಲಿ ಬಹಳಷ್ಟು ಏರಿಳಿತಗಳನ್ನು ಕಾಣಬೇಕಾಯಿತು. ಆ ಕಾಲದಲ್ಲಿ ಸಾಲ ತೀರಿಸಲು ಆಗದವರನ್ನು ಜೈಲಿಗೆ ಕಳಿಸಲಾಗುತ್ತಿತ್ತು. ಸಾಲ ತೀರಿಸಲು ಆಗದ ಕಾರಣ, ಯುವಕ ಚಾರ್ಲ್ಸ್‌ನನ್ನು ಹಲವು ಬಾರಿ ಜೈಲಿಗೆ ಅಟ್ಟಲಾಯಿತು.
1834ರಲ್ಲಿ ಚಾರ್ಲ್ಸ್‌ಗೆ ರಬ್ಬರ್ ಮೇಲೆ ಆಸಕ್ತಿ ಬೆಳೆಯಿತು. ಆ ಕಾಲದಲ್ಲಿ, ಹಲವಾರು ಸಂಶೋಧಕರು ರಬ್ಬರ್ ಬಳಕೆ ಹೆಚ್ಚಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದರು. ಚಳಿಗಾಲದಲ್ಲಿ ರಬ್ಬರ್ ಗಡುಸಾಗುತ್ತಿತ್ತು, ತಾಪಮಾನ ಹೆಚ್ಚಾದಾಗ ಅದು ಮೃದುವಾಗುತ್ತಿತ್ತು, ಅಂಟಂಟಾಗಿಯೂ ಇರುತ್ತಿತ್ತು. ರಬ್ಬರ್‌ಅನ್ನು ವ್ಯಾಪಕವಾಗಿ ಬಳಸಬೇಕು ಎಂದಾದರೆ, ಅದು ಈ ರೀತಿ ಬದಲಾವಣೆ ಕಾಣದಂತೆ ಮಾಡಬೇಕಿತ್ತು. ಚಾರ್ಲ್ಸ್‌ಗೆ ರಸಾಯನ ವಿಜ್ಞಾನದ ಬಗ್ಗೆ ಏನೇನೂ ಗೊತ್ತಿರಲಿಲ್ಲ. ಆದರೂ ಆತ ರಬ್ಬರ್‌ಅನ್ನು ಹೆಚ್ಚೆಚ್ಚು ಬಳಕೆ ಮಾಡುವಂತೆ ಆಗಿಸುವ ನಿಟ್ಟಿನಲ್ಲಿ ಕೆಲಸ ಶುರು ಮಾಡಿದ. ಒಂದು ದಿನ ಆತ ರಬ್ಬರ್ ಮತ್ತು ಸಲ್ಫರ್‌ನ ಮಿಶ್ರಣ ಇಟ್ಟುಕೊಂಡು ಕೆಲಸ ಮಾಡುತ್ತಿದ್ದಾಗ ಅದರಲ್ಲಿ ಒಂದಿಷ್ಟು ಬಿಸಿ ಒಲೆಯ ಮೇಲೆ ಬಿತ್ತು. ಅದನ್ನು ಆತ ಅಲ್ಲಿಂದ ತೆಗೆಯಲು ಮುಂದಾದಾಗ ಅಚ್ಚರಿಯೊಂದು ಕಾದಿತ್ತು. ಬಿಸಿಯಾದ ಆ ಮಿಶ್ರಣವು ಅಂಟಂಟಾಗಿ ಇರಲಿಲ್ಲ.
ಆತ ಆ ಮಿಶ್ರಣವನ್ನು ಇನ್ನಷ್ಟು ಬಿಸಿ ಮಾಡಿದ, ನಂತರ ಅದನ್ನೇ ತಣ್ಣಗೆ ಮಾಡಿದ. ಆ ಮಿಶ್ರಣವು ಬಿಸಿಯಾದಾಗ ಅಂಟಂಟಾಗಿ ಆಗುತ್ತಿರಲಿಲ್ಲ, ತಣ್ಣಗಾದಾಗ ಗಡುಸಾಗಿಯೂ ಆಗುತ್ತಿರಲಿಲ್ಲ ಎಂಬುದನ್ನು ಚಾರ್ಲ್ಸ್ ಕಂಡುಕೊಂಡ. ಅದು ಎಲ್ಲ ತಾಪಮಾನಗಳಲ್ಲೂ ಮೃದುವಾಗಿಯೂ, ಪುಟಿಯುವಂತೆಯೂ ಇರುತ್ತಿತ್ತು. ರಬ್ಬರ್‌ಗೆ ಸಲ್ಫರ್ ಮಿಶ್ರ ಮಾಡುವುದನ್ನು ಈಗ ವಲ್ಕನೀಕರಣ ಎಂದು ಕರೆಯಲಾಗುತ್ತದೆ.
ಚಾರ್ಲ್ಸ್‌ನ ಸಂಶೋಧನೆಯು ಮುಂದೆ ರಬ್ಬರ್ ಉದ್ಯಮದ ಸ್ಥಾಪನೆಗೆ ದಾರಿಯಾಯಿತು. ಆ ಉದ್ಯಮದ ಮೂಲಕ ಹತ್ತು ಹಲವು ಜನ ಹಣ ಸಂಪಾದಿಸಿದರು. ಆದರೆ, ಅದರಿಂದ ಚಾರ್ಲ್ಸ್ ಒಂದು ಪೈಸೆಯೂ ಸಿಗಲಿಲ್ಲ. ಆತ ಸಾಲ ಸುಳಿಯಲ್ಲೇ ಇದ್ದು, 1860ರ ಜುಲೈ 1ರಂದು ಮೃತಪಟ್ಟ.
ಹೆಲೆನ್‌ಳ ಶಕ್ತಿ
ಹೆಲೆನ್ ಕೆಲರ್‌ಗೆ ಚಿಕ್ಕ ವಯಸ್ಸಿನಿಂದಲೇ ಕಣ್ಣು ಕಾಣಿಸುತ್ತಿರಲಿಲ್ಲ, ಕಿವಿ ಕೇಳಿಸುತ್ತಿರಲಿಲ್ಲ. ಆದರೆ, ಆಕೆಯ ಮೂಗಿನ ಶಕ್ತಿ ಅಸಾಧಾರಣವಾಗಿತ್ತು. ತನ್ನ ಸ್ನೇಹಿತರ ದೇಹದ ಗಂಧದಿಂದಲೇ ಅವರು ಯಾರು ಎಂಬುದನ್ನು ಆಕೆ ಗುರುತಿಸುತ್ತಿದ್ದಳು.
ಗಾಂಧಿ – ನೊಬೆಲ್
ಶಾಂತಿ ಮತ್ತು ಅಹಿಂಸೆಯನ್ನು ಜೀವನದ ಉದ್ದಕ್ಕೂ ಪಾಲಿಸಿಕೊಂಡು ಬಂದ ಗಾಂಧೀಜಿಗೆ ‘ನೊಬೆಲ್ ಶಾಂತಿ ಪ್ರಶಸ್ತಿ’ ದೊರೆಯಲಿಲ್ಲ. ಮರಣೋತ್ತರವಾಗಿ ಕೂಡ ಮಹಾತ್ಮನಿಗೆ ಈ ಪ್ರಶಸ್ತಿ ಲಭಿಸಲಿಲ್ಲ.
ಗಾಂಧೀಜಿಗೆ ಶಾಂತಿ ಪ್ರಶಸ್ತಿಯನ್ನು ಕೊಡದೆ ಇದ್ದುದು ತಪ್ಪು ಎಂಬುದು ನೊಬೆಲ್ ಪ್ರಶಸ್ತಿ ಸಮಿತಿಗೆ ಅರಿವಾಯಿತು. 2006ರಲ್ಲಿ ಸಾರ್ವಜನಿಕ ಹೇಳಿಕೆ ನೀಡಿದ ಸಮಿತಿಯು, ‘ಗಾಂಧೀಜಿಗೆ ಶಾಂತಿ ಪ್ರಶಸ್ತಿ ನೀಡದೆ ಇದ್ದುದರ ಬಗ್ಗೆ ತೀವ್ರ ವಿಷಾದವಿದೆ’ ಎಂದು ಹೇಳಿತು.
ನಾರದ
ಈತ ತ್ರಿಮೂರ್ತಿಗಳಲ್ಲಿ ಒಬ್ಬನೂ ಸೃಷ್ಟಿಕರ್ತನೂ ಆದ ಬ್ರಹ್ಮನ ಮಗ. ಅಷ್ಟೇ ಅಲ್ಲ, ಮಹಾವಿಷ್ಣುವಿನ ಭಕ್ತ ಕೂಡ ಹೌದು. ವೀಣೆಯನ್ನು ಕಂಡುಹಿಡಿದಿದ್ದು ನಾರದ ಎನ್ನುತ್ತವೆ ಪುರಾಣಗಳು. ದೇವಲೋಕದ ಸಂಗೀತಗಾರರಾದ ಗಂಧರ್ವರಿಗೆ ಸಂಗೀತವನ್ನು ಕಲಿಸಿದವ ನಾರದ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.