ADVERTISEMENT

Mithun Chakraborty: ಫುಟ್‌ಪಾತ್‌ನಿಂದ ಫಾಲ್ಕೆ ಗರಿಯವರೆಗೆ...

ನೃತ್ಯ ಲಾಲಿತ್ಯ, ಅಭಿನಯ ಪ್ರಯೋಗ, ರಾಜಕೀಯ ಸಖ್ಯ–ಮೂರರ ಸಂಗಮ ಮಿಥುನ್

ವಿಶಾಖ ಎನ್.
Published 30 ಸೆಪ್ಟೆಂಬರ್ 2024, 23:30 IST
Last Updated 30 ಸೆಪ್ಟೆಂಬರ್ 2024, 23:30 IST
   

1976ರಲ್ಲಿ ಸಿನಿಮಾ ನಿರ್ದೇಶಕ ಮೃಣಾಲ್ ಸೇನ್ ರಾಜಕೀಯ ಚಿತ್ರಗಳನ್ನು ಮಾಡುವುದರಿಂದ ಬಿಡುವು ಪಡೆದುಕೊಳ್ಳಲು ನಿರ್ಧರಿಸಿದರು. ಅದಕ್ಕೂ ಎರಡು ವರ್ಷಗಳ ಹಿಂದೆ ಬಂದಿದ್ದ ‘ಕೋರಸ್’ ಬಂಗಾಳಿ ಚಿತ್ರದಿಂದ ಅವರು ದೊಡ್ಡ ನಷ್ಟ ಅನುಭವಿಸಿದ್ದರು. ಹೀಗಾಗಿ ಒಂದು ‘ಪೀರಿಯೆಡ್’ ಸಿನಿಮಾ ಮಾಡಲು ಮುಂದಾದರು. ತಾರಾ ನಟ–ನಟಿಯರ ಹಂಗಿಲ್ಲದೆ, ಹೊಸಮುಖಗಳನ್ನು ನಾಯಕ–ನಾಯಕಿಯಾಗಿ ಆಯ್ಕೆ ಮಾಡಿಕೊಂಡರು. ಪುಣೆಯ ಫಿಲ್ಮ್‌ ಆ್ಯಂಡ್‌ ಟೆಲಿವಿಷನ್‌ ಇನ್‌ಸ್ಟಿಟ್ಯೂಟ್‌ ಆಫ್ ಇಂಡಿಯಾನಲ್ಲಿ (ಎಫ್‌ಟಿಐಐ) ಕಲಿಯುತ್ತಿದ್ದ ಹುಡುಗನೊಬ್ಬ ಹಿಂದೊಮ್ಮೆ ಗಮನ ಸೆಳೆದಿದ್ದ. ಅವನನ್ನು ಮುಖ್ಯಪಾತ್ರಕ್ಕೆ ಹೆಕ್ಕಿಕೊಂಡರು. ಆ ನಟನಿಗೆ ಅದು ಮೊದಲ ಚಿತ್ರ. ಸಿನಿಮಾ ತೆರೆಕಂಡ ನಂತರ ಆ ಪಾತ್ರಧಾರಿಗೆ ರಾಷ್ಟ್ರ ಪ್ರಶಸ್ತಿ ಒಲಿದುಬಂತು. ಎಫ್‌ಟಿಐಐನಲ್ಲಿ ವಿದ್ಯಾರ್ಥಿಯಾಗಿದ್ದ ಆ ಹುಡುಗನೇ ಮಿಥುನ್ ಚಕ್ರವರ್ತಿ; ಈಗ 74 ವರ್ಷ ವಯಸ್ಸಿನ ಮಾಗಿದ ನಟ. ಅವರಿಗೀಗ ದಾದಾಸಾಹೇಬ್ ಫಾಲ್ಕೆ ಗೌರವದ ಗರಿ. 

ಒಡಿಯಾ ಭಾಷೆಯ ಸಣ್ಣಕತೆಯೊಂದನ್ನು ಆಧರಿಸಿದ ‘ಮೃಗಯಾ’ ಹಿಂದಿ ಸಿನಿಮಾವನ್ನು ಮೃಣಾಲ್ ಸೇನ್ ಗೆಲ್ಲಿಸಿಕೊಂಡರು. ಅದರಿಂದ ಮಿಥುನ್ ಚಿತ್ರಬದುಕಿಗೂ ಮೊದಲ ತಿರುವು ಸಿಕ್ಕಿತು. 

ಮಿಥುನ್ ಬಂಗಾಳದವರು. ಓದಿದ್ದು ಬಿ.ಎಸ್‌ಸಿ. ನಂತರ ನಕ್ಸಲ್ ಚಳವಳಿಯಲ್ಲಿ ಗುರ್ತಿಸಿಕೊಂಡರು. ಆಮೇಲೆ ಅದನ್ನು ತೊರೆದ ಅವರು, ಸಿನಿಮಾ ಕನಸು ಕಂಡರು. ಆರಂಭದ ದಿನಗಳಲ್ಲಿ ಅವಕಾಶಗಳು ಸುಲಭವಾಗಿಯೇನೂ ಸಿಗಲಿಲ್ಲ. ಆಡಿಷನ್‌ಗಳನ್ನು ಕೊಟ್ಟರು. ತಮ್ಮ ಕಪ್ಪು ಬಣ್ಣದ ಕಾರಣಕ್ಕೆ ತಿರಸ್ಕಾರಕ್ಕೆ ಒಳಗಾದರು. ಫುಟ್‌ಪಾತ್‌ ಮೇಲೆ ಮಲಗಿದ ರಾತ್ರಿಗಳಿದ್ದವು. ಒಂದು ಹೊತ್ತಿನ ಊಟದಲ್ಲೇ ದೂಡಿದ ದಿನಗಳನ್ನು ಅವರು ಈಗಲೂ ನೆನಪಿಸಿಕೊಳ್ಳುವುದುಂಟು. ಹಿಂದಿ ಚಿತ್ರರಂಗದಲ್ಲಿ ಒಂದು ಕಾಲು, ಬಂಗಾಳಿ ಚಿತ್ರರಂಗದಲ್ಲಿ ಇನ್ನೊಂದು ಕಾಲು ಇಟ್ಟು ಈಜಿದರು. 1982ನೇ ಇಸವಿ ಅವರಿಗೆ ಶುಕ್ರದೆಸೆ ತಂದಿತು. ‘ಡಿಸ್ಕೊ ಡಾನ್ಸರ್’ ಹಿಂದಿ ಸಿನಿಮಾ ದೊಡ್ಡ ಹಿಟ್‌ ಆಯಿತು. ಭಾರತದಲ್ಲಿ ಅಷ್ಟೇ ಅಲ್ಲದೆ ರಷ್ಯಾದಲ್ಲೂ ಜನಪ್ರಿಯತೆ ಗಳಿಸಿದ ಚಿತ್ರ ಅದು. ಮಿಥುನ್, ಡಾನ್ಸಿಂಗ್ ಸ್ಟಾರ್ ಆದರು. ‘ಡಾನ್ಸ್ ಡಾನ್ಸ್’ ಆ ಗುಣವಿಶೇಷಣಕ್ಕೆ ಉದಾಹರಣೆಯಾಗಿರುವ ಇನ್ನೊಂದು ಸಿನಿಮಾ. ‘ಡಿಸ್ಕೊ ಡಾನ್ಸರ್’ ಬಂದ ವರ್ಷವೇ ‘ಟ್ರಾಯಿ’ ಶೀರ್ಷಿಕೆಯ ಸಂಗೀತಪ್ರಧಾನವಾದ ಬಂಗಾಳಿ ಚಿತ್ರವೂ ತೆರೆಕಂಡು, ಮಿಥುನ್ ಗೆಲುವಿನ ಗ್ರಾಫ್ ಎದ್ದು ಕಾಣತೊಡಗಿತು. 

ADVERTISEMENT

ಮಿಥುನ್ ನಟನಾಗಿ ಮೊದಲ ದಿನಗಳಲ್ಲಿ ಸಣ್ಣಪುಟ್ಟ ಪಾತ್ರಗಳಿಗೂ ಒಲ್ಲೆ ಎನ್ನಲಿಲ್ಲ. ‘ಮೃಗಯಾ’ ತೆರೆಕಂಡ ವರ್ಷವೇ ಅಮಿತಾಭ್ ಬಚ್ಚನ್, ರೇಖಾ ಜೋಡಿಯಾಗಿದ್ದ ‘ದೋ ಅಂಜಾನೆ’ ಸಿನಿಮಾದಲ್ಲಿ ಚಿಕ್ಕ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದೇ ಇದಕ್ಕೆ ಉದಾಹರಣೆ. ಅದಾಗಿ ಎರಡು ವರ್ಷಗಳಾದ ಮೇಲೆ, 1978ರಲ್ಲಿ ‘ನದಿ ಥೇಕೆ ಸಾಗರೆ’ ಚಿತ್ರದ ಮೂಲಕ ಅವರು ಬಂಗಾಳಿ ಚಿತ್ರರಂಗದಲ್ಲಿ ಇನಿಂಗ್ಸ್ ಶುರುಮಾಡಿದ್ದು. 

‘ಸುರಕ್ಷಾ’, ‘ಕಸಂ ಪೈದಾ ಕರ‍್ನೆ ವಾಲೆ’, ‘ಕಮಾಂಡೊ’, ‘ಪ್ಯಾರ್ ಝುಕ್ತಾ ನಹೀ’, ‘ಗುಲಾಮಿ’, ‘ಸ್ವರ್ಗ್‌ ಸೆ ಸುಂದರ್’, ‘ಅಗ್ನಿಪತ್’ ಇವೆಲ್ಲವೂ ಮಿಥುನ್ ಅವರಿಗೆ ಹೆಸರು ತಂದುಕೊಟ್ಟ ಹಿಂದಿ ಚಿತ್ರಗಳು. 

ಮಿಥುನ್ ಚಕ್ರವರ್ತಿ ಜನಪ್ರಿಯತೆಯ ದೊಡ್ಡ ಅಲೆಯ ಮೇಲೆ ಇದ್ದ ಸಂದರ್ಭದಲ್ಲಿಯೇ ದಿಲೀಪ್ ಕುಮಾರ್ ಹಾಗೂ ಸುನಿಲ್ ದತ್ ಜೊತೆಗೂಡಿ ‘ಸಿನಿ ಅಂಡ್ ಟಿ.ವಿ. ಆರ್ಟಿಸ್ಟ್ಸ್‌ ಅಸೋಸಿಯೇಷನ್’ ಎಂಬ ಟ್ರಸ್ಟ್‌ ಸ್ಥಾಪಿಸಿದರು. ಸಂಕಷ್ಟದಲ್ಲಿರುವ ಕಲಾವಿದರಿಗೆ ಸಹಾಯಹಸ್ತ ಚಾಚುವ ಸದುದ್ದೇಶದ ಟ್ರಸ್ಟ್‌ ಇದಾಗಿತ್ತು. 

ವಿದ್ಯುದಾಘಾತದಿಂದ ಅಣ್ಣನು ಮೃತಪಟ್ಟ ನಂತರ ನಕ್ಸಲ್ ಚಳವಳಿಯನ್ನು ತೊರೆದು, ಮನೆಗೆ ಸೇರಿದ್ದವರು ಮಿಥುನ್. 2014ರಲ್ಲಿ ಅವರು ರಾಜಕೀಯ ಮೊಗಸಾಲೆಗೆ ಕಾಲಿಟ್ಟರು. ಎರಡು ವರ್ಷ ರಾಜ್ಯಸಭಾ ಸದಸ್ಯರಾಗಿದ್ದರು. 2021ರಲ್ಲಿ ಬಿಜೆಪಿ ಸೇರಿಕೊಂಡರು. ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ಟಾಷ್ಕೆಂಟ್ ಫೈಲ್ಸ್‌’, ‘ಕಾಶ್ಮೀರ್ ಫೈಲ್ಸ್’ ಸಿನಿಮಾದಲ್ಲಿ ಅಭಿನಯಿಸುವ ಮೂಲಕ ತಮ್ಮ ರಾಜಕೀಯ ನಿಲುವು ಏನು ಎನ್ನುವುದಕ್ಕೆ ಅಡಿಗೆರೆ ಎಳೆದರು. 

ಇದೇ ವರ್ಷ ಅವರನ್ನು ಪದ್ಮಭೂಷಣ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿತ್ತು. ಇದೀಗ ಫಾಲ್ಕೆ ಗೌರವದ ಗರಿಯೂ ಮುಡಿಯೇರಿದೆ. 

ಫುಟ್‌ಪಾತ್‌ ಮೇಲಿದ್ದ ನನ್ನಂತಹ ಬಾಲಕ ಇಂತಹ ದೊಡ್ಡ ಗೌರವಕ್ಕೆ ಪಾತ್ರವಾಗಬಹುದು ಎಂಬ ಕಲ್ಪನೆಯೂ ಇರಲಿಲ್ಲ
ಮಿಥುನ್ ಚಕ್ರವರ್ತಿ ನಟ

ಮೂರು ರಾಷ್ಟ್ರ ಪ್ರಶಸ್ತಿ

1990ರ ದಶಕದ ನಡುಘಟ್ಟದಲ್ಲಿ ಮಿಥುನ್ ಜನಪ್ರಿಯತೆ ಕಡಿಮೆಯಾಯಿತು. ಆಗ ಅವರು ಪರ್ಯಾಯ ಸಿನಿಮಾಗಳಲ್ಲಿ ತೊಡಗಿಕೊಂಡರು. ಅದೇ ಸಂದರ್ಭದಲ್ಲಿ ಜಿ.ವಿ. ಅಯ್ಯರ್ ನಿರ್ದೇಶನದ ‘ರಾಮಕೃಷ್ಣ ಪರಮಹಂಸ’ ಆತ್ಮಕಥಾ ಚಿತ್ರ ದೂರದರ್ಶನದಲ್ಲಿ ಪ್ರಸಾರವಾಗಿದ್ದು. 1998ರಲ್ಲಿ ಈ ಚಿತ್ರದಲ್ಲಿನ ಪರಮಹಂಸರ ಪಾತ್ರದ ಅಭಿನಯಕ್ಕೆ ರಾಷ್ಟ್ರ ಪ್ರಶಸ್ತಿ ಸಂದಿತು. ಅದಕ್ಕೂ ಮೊದಲು ‘ತಹದೇಶ್ ಕಥಾ’ ಬಂಗಾಳಿ ಚಿತ್ರದ ನಟನೆಗೂ ರಾಷ್ಟ್ರಪ್ರಶಸ್ತಿಗೆ ಭಾಜನರಾಗಿದ್ದರು. ಚೊಚ್ಚಲ ಸಿನಿಮಾ ಪ್ರಶಸ್ತಿಯೂ ಸೇರಿ ಒಟ್ಟು ಮೂರು ರಾಷ್ಟ್ರ ಪ್ರಶಸ್ತಿಗಳು ಅವರನ್ನು ಅಲಂಕರಿಸಿವೆ.  ‘ಅಗ್ನಿಪತ್’ ಚಿತ್ರದ ಪೋಷಕ ಪಾತ್ರಕ್ಕಾಗಿ ಫಿಲ್ಮ್‌ಫೇರ್ ಪ್ರಶಸ್ತಿ ಪಡೆದಿದ್ದ ಅವರು 1989ರಲ್ಲಿ 19 ಸಿನಿಮಾಗಳಲ್ಲಿ ನಟಿಸಿ ಲಿಮ್ಕಾ ದಾಖಲೆಯನ್ನೂ ನಿರ್ಮಿಸಿದ್ದರು. ಸಣ್ಣ ಬಜೆಟ್‌ನ ಚಿತ್ರನಿರ್ಮಾಣದಲ್ಲಿಯೂ ತೊಡಗಿ  ಕೈಸುಟ್ಟುಕೊಂಡರು.  ‘ಡಾನ್ಸ್‌ ಡಾನ್ಸ್‌ ಜೂನಿಯರ್’ ‘ಹುನರ್‌ವಾಜ್’ ರಿಯಾಲಿಟಿ ಶೋಗಳ ತೀರ್ಪುಗಾರರ ಕುರ್ಚಿ ಮೇಲೆ ಕುಳಿತ ಅನುಭವವೂ ಅವರದ್ದಾಗಿದೆ. 2000ನೇ ದಶಕದ ನಡುಘಟ್ಟದಿಂದ ಮತ್ತೆ ಹಿಂದಿ ಸಿನಿಮಾಗಳಲ್ಲಿ ಆಗೀಗ ನಟಿಸುತ್ತಾ ಬಂದ ಅವರ ಕೈಲಿ ಈಗ ಪ್ರಭಾಸ್ ಅಭಿನಯದ ತೆಲುಗು ಸಿನಿಮಾದ ಅವಕಾಶವೂ ಇದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.