ಬೆಂಗಳೂರು: ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರ ಕುರಿತಾದ ಸಾಕ್ಷ್ಯಚಿತ್ರ (ಡಾಕ್ಯುಮೆಂಟರಿ) ‘ಮಾಡರ್ನ್ ಮಾಸ್ಟರ್ಸ್’ ಸಿದ್ಧವಾಗಿದ್ದು ಆಗಸ್ಟ್ 2ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ.
ಈ ಹಿನ್ನೆಲೆಯಲ್ಲಿ ನೆಟ್‌ಫ್ಲಿಕ್ಸ್, ‘ಮಾಡರ್ನ್ ಮಾಸ್ಟರ್ಸ್’ ಡಾಕ್ಯುಮೆಂಟರಿ ಕುರಿತಾದ 2 ನಿಮಿಷದ ಟ್ರೇಲರ್ ಅನ್ನು ಇಂದು ಹಂಚಿಕೊಂಡಿದೆ.
ಅಪ್ಲಾಸ್ ಎಂಟರ್‌ಟೈನ್‌ಮೆಂಟ್ ಹಾಗೂ ಫಿಲ್ಮ್ ಕಂಪಾನಿಯನ್ ಸ್ಟುಡಿಯೋ ಈ ಡಾಕ್ಯುಮೆಂಟರಿಯನ್ನು ನಿರ್ಮಾಣ ಮಾಡಿದ್ದು ರಾಘವ್ ಖನ್ನಾ ನಿರ್ದೇಶಿಸಿದ್ದಾರೆ.
ಟ್ರೇಲರ್ ಭಾರಿ ಕುತೂಹಲ ಮೂಡಿಸಿದ್ದು ರಾಜಮೌಳಿ ಅವರ ಬಗ್ಗೆ ಇನ್ನೂ ಹೊರಜಗತ್ತಿಗೆ ಗೊತ್ತಿರದ ಅನೇಕ ಸಂಗತಿಗಳನ್ನು ವೀಕ್ಷಕರಿಗೆ ತೆರೆದಿಡಲಿದೆ ಎನ್ನಲಾಗಿದೆ.
ಅವತಾರ್ ಖ್ಯಾತಿಯ ಹಾಲಿವುಡ್ ನಿರ್ದೇಶಕ ಜೇಮ್ಸ್ ಕೆಮರೂನ್, ಮಾರ್ವೆಲ್ ಖ್ಯಾತಿಯ ಜೋ ರುಸ್ಸೋ, ಕರಣ್ ಜೋಹರ್, ಪ್ರಭಾಸ್, ರಾಮಚರಣ್, ಜೂನಿಯರ್ ಎನ್‌ಟಿಆರ್, ಎಂ.ಎಂ. ಕೀರವಾಣಿ ಸೇರಿದಂತೆ ಅನೇಕ ಗಣ್ಯರು ರಾಜಮೌಳಿ ಅವರ ಬಗ್ಗೆ ಮಾತನಾಡಿದ್ದಾರೆ.
ರಾಜಮೌಳಿ ಅವರೂ ಸಹ ತಮ್ಮ ಬಗ್ಗೆ ಅನೇಕ ಸಂಗತಿಗಳನ್ನು ಮುಕ್ತವಾಗಿ ಹೇಳಿಕೊಂಡಿದ್ದಾರೆ.
ಬಾಹುಬಲಿ, ಆರ್‌ಆರ್‌ಆರ್, ಮಗಧೀರ, ಈಗಾ ಸೇರಿದಂತೆ ಅನೇಕ ಸೂಪರ್‌ಹಿಟ್ ಚಿತ್ರಗಳನ್ನು ರಾಜಮೌಳಿ ನೀಡಿದ್ದು, ಆರ್‌ಆರ್‌ಆರ್, ಬಾಹುಬಲಿ ಮೂಲಕ ಜಾಗತಿಕವಾಗಿ ಗುರುತಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.